ಆನಂದ್‌ ಎಂ. ಸೌದಿ
ಯಾದಗಿರಿ, (ಜ.06):
ಕೊನೆಗೂ ಯಾದಗಿರಿಯಲ್ಲಿ ಮೆಡಿಕಲ್‌ ಕಾಲೇಜು ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ ಸರಣಿ ವರದಿಗಳ ಮೂಲಕ ಸಾರ್ವಜನಿಕರಲ್ಲಿ  ಮೂಡಿಸಿದ ಜಾಗೃತಿಗೆ ಜಯ ಸಿಕ್ಕಂತಾಗಿದೆ.

ಹೌದು...ಬಹುದಿನಗಳ ಬೇಡಿಕೆಯಾಗಿದ್ದ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಇಂದು (ಬುಧವಾರ) ಶಿಲಾನ್ಯಾಸ ನೆರವೇರಿಸಿದರು.

 2014-15ನೇ ಸಾಲಿನಲ್ಲಿ ಯಾದಗಿರಿಗೆ ಮಂಜೂರಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಮೂಲಸೌಲಭ್ಯ ಕೊರತೆ ಕಾರಣ ತಿರಸ್ಕೃತಗೊಂಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಈ ವೈದ್ಯಕೀಯ ಕಾಲೇಜಿಗೆ ಅನುಮೋದನೆ ಸಿಕ್ಕಿತ್ತಾದರೂ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಶಿಫಾರಸ್ಸಿನಂತೆ ಮೂಲಸೌಲಭ್ಯ ಕೊರತೆ ಕಾರಣ ರದ್ದಾಗಿತ್ತು. 

ನನಸಾದ ಯಾದಗಿರಿ ಮೆಡಿಕಲ್‌ ಕಾಲೇಜು ಕನಸು

ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 2019ರಲ್ಲಿ ಗುರುಮಠಕಲ್‌ ತಾಲೂಕಿನ ಚಂಡ್ರಕಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿ ವೈದ್ಯಕೀಯ ಕಾಲೇಜು ಬದಲು ಬೇರೆ ಕೈಗಾರಿಗೆ ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದರು. ಇದು ಮೆಡಿಕಲ್‌ ಕಾಲೇಜು ಜಿಲ್ಲೆಯಿಂದ ಕೈತಪ್ಪಿದ್ದ ವಿಚಾರ ಬಹಿರಂಗಪಡಿಸಿತ್ತು.

‘ಕನ್ನಡಪ್ರಭ’ಸರಣಿ ವರದಿ
ಆಗ, ‘ಕನ್ನಡಪ್ರಭ’ ಈ ವಿಚಾರವಾಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ವೈದ್ಯಕೀಯ ಕಾಲೇಜು ಇದ್ದರೆ ಜಿಲ್ಲೆಯ ಅಭಿವೃದ್ಧಿಗೆ ಏನೆಲ್ಲಾ ಅನುಕೂಲವಾಗುತ್ತದೆ ಎಂಬದರ ಸರಣಿ ವರದಿ ಮೂಲಕ ಜನರ ಗಮನ ಸೆಳೆದಿತ್ತು. ವಿವಿಧ ವಿಷಯಗಳ ತಜ್ಞರು, ಪ್ರಜ್ಞಾವಂತರು, ಪರಿಣಿತರು, ವೈದ್ಯರು, ಸಾರ್ವಜನಿಕರು ಮುಂತಾದವರನ್ನು ಭೇಟಿ ಮಾಡಿದ ‘ಕನ್ನಡಪ್ರಭ’ ವೈದ್ಯಕೀಯ ಕಾಲೇಜು ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿತ್ತು. 

ಜೂನ್‌ 22, 2019 ರಿಂದ 21 ದಿನಗಳ ಕಾಲ ಸತತ ಸರಣಿ ವರದಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರವನ್ನೇ ಮರೆತಂತಿದ್ದ ಸಾರ್ವಜನಿಕರಲ್ಲಿ ‘ಕನ್ನಡಪ್ರಭ’ ವರದಿಗಳು ಹೊಸ ಚಿಂತನೆಗೆ ಹಚ್ಚಿದ್ದವು. ಜನಾಭಿಪ್ರಾಯ ಮೂಡಿಬಂದಿತ್ತು. ರಾಜಕೀಯ ಕ್ಷೇತ್ರದಲ್ಲಿ ಈ ವರದಿ ಹೊಸ ಸವಾಲನ್ನೇ ಎದುರಿಗಿಟ್ಟಿತ್ತು.

ವೈದ್ಯಕೀಯ ಕಾಲೇಜಿನಿಂದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ, ಶಿಕ್ಷಣ, ಜನಜೀವನ, ವ್ಯಾಪಾರ- ವಹಿವಾಟು, ಜಿಲ್ಲೆಯ ಆರ್ಥಿಕ ಪ್ರಗತಿ ಮುಂತಾದವುಗಳ ಬಗ್ಗೆ ಸರಣಿ ವರದಿಗಳು ಹೊಸ ಮನ್ವಂತರಕ್ಕೆ ಕಾರಣವಾಗಿದ್ದವು. ವರದಿಗಳಿಂದ ಪ್ರೇರಣೆಯಾದಂತಾಗಿ ಹೊಸ ಚಳವಳಿ ಆರಂಭಗೊಂಡಿತು. ವೈದ್ಯಕೀಯ ಕಾಲೇಜಿಗಾಗಿ ಹೋರಾಟದ ಕಿಚ್ಚು ಹೆಚ್ಚತೊಡಗಿತು. ಇಡೀ ಜಿಲ್ಲೆ ಶಾಂತಿಯುತ ಬಂದ್‌ ಮಾಡುವ ಹೋರಾಟ ಸರ್ಕಾರವನ್ನು ಬೆಚ್ಚಿಬೀಳಿಸಿತ್ತು. ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ನೇತೃತ್ವದಲ್ಲಿ ಬಂದ್‌ ಕರೆ ನೀಡಲಾಗಿತ್ತು.

ಸಂಘಟನೆಗಳು, ವಿದ್ಯಾರ್ಥಿಗಳು, ಶಿಕ್ಷಣಾಸಕ್ತರು, ಸಾರ್ವಜನಿಕರು, ತಜ್ಞರು, ಬುದ್ಧಿಜೀವಿಗಳು, ಶಿಕ್ಷಕರು, ಪಕ್ಷಭೇದ ಮರೆತ ರಾಜಕೀಯ ಪ್ರತಿನಿ​ಧಿಗಳು, ವಕೀಲರು... ಹೀಗೆಯೇ ನೆರೆ ಜಿಲ್ಲೆಗಳಿಂದಲೂ ಹೋರಾಟಗಾರರು ಯಾದಗಿರಿಗೆ ವೈದ್ಯಕೀಯ ಕಾಲೇಜು ಬೇಡಿಕೆಗಾಗಿನ ಬಂದ್‌ನಲ್ಲಿ ಪಾಲ್ಗೊಂಡು, ಸರ್ಕಾರಕ್ಕೆ ಚುರುಕು ಮುಟ್ಟಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಪ್ರಭ ವರದಿಗಳು ಲಕ್ಷಾಂತರ ಜನರನ್ನು ತಲುಪಿ ಹೋರಾಟ ಚುರಕುಗೊಂಡಿತು. ನೀತಿ ಆಯೋಗದ ವರದಿಯಂತೆ ಜಿಲ್ಲೆಗಳ ಪೈಕಿ ಇರುವ ಯಾದಗಿರಿಯಲ್ಲಿ ಮೆಡಿಕಲ್‌ ಕಾಲೇಜು ಅವಶ್ಯಕತೆ ಬಗ್ಗೆ ಪರಿಣಿತ ತಜ್ಞರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿ​ಗಳು ಹಾಗೂ ಅ​ಧಿಕಾರಿಗಳೊಡನೆ ಚರ್ಚಿಸಿದರು.

ಕೊನೆಗೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಲೇಜಿನ ಕುರಿತು ಭರವಸೆ ವ್ಯಕ್ತಪಡಿಸಿದರು. ಇದಾದ ಮೂರ್ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಯಾದಗಿರಿ ಜಿಲ್ಲೆಯಲ್ಲಿ ಮೊದಲಿಗೆ ವೈದ್ಯಕೀಯ ಕಾಲೇಜು ಬಗ್ಗೆ ಪ್ರಸ್ತಾಪಿಸಿ ಆದೇಶಿಸಿದರು. ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಯಿತು.

 ಅದರಂತೆ ಯಾದಗಿರಿಯಲ್ಲಿ 150 ಸೀಟುಗಳ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಯಿತು. ಇದಕ್ಕೆ ವಿಶೇಷ ಅಧಿಕಾರಿ ನೇಮಕವಾಯಿತು. ಅದಕ್ಕೆ ಹೆಚ್ಚಿನ ಜಮೀನು ಹಾಗೂ ಅನುದಾನವನ್ನೂ ಸಹ ಬಿಡುಗಡೆ ಮಾಡಲಾಗಿದೆ. ಒಂದೊಂದು ಹಂತದ ಕಾಮಗಾರಿಗಳು ನಡೆಯುತ್ತಿವೆ. ಹೈದರಾಬಾದ್‌ನ ಕಂಪನಿಯೊಂದು ನಿರ್ಮಾಣದ ಕಾರ್ಯದಲ್ಲಿ ತೊಡಗಿದೆ. 2022-23ರಲ್ಲಿ ಮೆಡಿಕಲ್‌ ಕಾಲೇಜು ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ವಿಸ್ತಾರ ಪ್ರದೇಶವುಳ್ಳ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೋವಿಡ್‌-19 ಸಂದರ್ಭದಲ್ಲಿ ಇದೇ ಹೊಸ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಸಾವಿರಾರು ಕೋವಿಡ್‌ ಸೋಂಕಿತರ ಆರೈಕೆ ಮಾಡಲಾಗಿದೆ.

‘ಕನ್ನಡಪ್ರಭ’ದ ಸರಣಿ ವರದಿಗಳು ಹೊಸದೊಂದು ಹೋರಾಟಕ್ಕೆ ನಾಂದಿಯಾಗಿದ್ದವು. ಜಿಲ್ಲೆಯಿಂದ ಕೈಜಾರಿ ಹೋಗಿದ್ದ ಬಹುದೊಡ್ಡ ಜನಪರ ಯೋಜನೆಯೊಂದು ಮತ್ತೆ ಪುನರ್‌ ಸ್ಥಾಪಿಸಲು ಕನ್ನಡಪ್ರಭ ಸರಣಿ ವರದಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಹೊಸದೊಂದ ಚಳವಳಿಗೆ ಕಾರಣವಾಗಿತ್ತು ಅನ್ನುವುದು ವಿಶೇಷ.