ರಾಜ್ಯ ಸರ್ಕಾರದಿಂದ 309 ಕೋಟಿ ರು. ಆಡಳಿತಾತ್ಮಕ ಒಪ್ಪಿಗೆ| ಇನ್ನೊಂದು ವಾರದಲ್ಲಿ ನಿರ್ಮಾಣ ಅಡಿಗಲ್ಲು ಸಾಧ್ಯತೆ| 40 ಎಕರೆಯಷ್ಟು ಜಮೀನು ನೀಡಲು ಸರ್ಕಾರ ಒಪ್ಪಿಗೆ| ಹೈದರಾಬಾದ ಮೂಲದ ಕಂಪನಿಯಿಂದ ಮೆಡಿಕಲ್‌ ಕಾಲೇಜು  ನಿರ್ಮಾಣ ಕಾಮಗಾರಿ ಶುರು| 

ಯಾದಗಿರಿ(ಸೆ.04):ಯಾದಗಿರಿ ಮೆಡಿಕಲ್‌ ಕನಸು ಇದೀಗ ನನಸಾಗುವ ಹೊತ್ತು ಮತ್ತಷ್ಟೂ ಸಮೀಪಿಸಿದೆ. ಭವಿಷ್ಯದಲ್ಲಿ ಜಿಲ್ಲೆಯ ಜನರ ಆರೋಗ್ಯ, ಶಿಕ್ಷಣ, ಆರ್ಥಿಕ ಸೇರಿದಂತೆ ವಿವಿಧ ಆಯಾಮಗಳಲ್ಲಿನ ಸ್ಥಿತಿಗತಿಗಳ ಸುಧಾರಣೆಗೆ ಇದು ನಾಂದಿಯಾಗಲಿದೆ.

ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸುಸಜ್ಜಿತವಾಗಿ ಕಾರ್ಯನಿರ್ವಹಿಸಲು ಪರಿಷ್ಕೃತ 309 ಕೋಟಿ ರು.ಗೆ ಅನುಮೋದನೆ ನೀಡಲಾಗಿದೆ. ಇನ್ನೊಂದು ವಾರದಲ್ಲಿ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣ ಕಾರ್ಯ ಚುರುಕುಗೊಳ್ಳಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಿಂದಲೇ ಇದರ ಅಡಿಗಲ್ಲು ಸ್ಥಾಪನೆ ಕಾರ್ಯ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ವೈದ್ಯಕೀಯ ಕಾಲೇಜು ಇರದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತರಲು ನಿರ್ಧರಿಸಿದ್ದು, ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌, ಯಿಮ್ಸ್‌ 150 ಸೀಟುಗಳ ಪ್ರವೇಶವುಳ್ಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎಂಬ ಹೆಸರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭವಾಗಲಿದೆ. ಈ ಭಾಗದಲ್ಲಿ ವೈದ್ಯಕೀಯ ಕಾಲೇಜು ಅವಶ್ಯಕವಾಗಿತ್ತು. ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಸರ್ಕಾರ ಪ್ರತಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ನೀಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಯಾದಗಿರಿ ಗೋಳು: ಪಕ್ಷದ ಮಾತ್ ಬಿಡ್ರಿ.. ಮೆಡಿಕಲ್ ಕಾಲೇಜಿಗಾದ್ರೂ ಒಂದಾಗ್ರಿ !

ಮೆಡಿಕಲ್‌ ಕಾಲೇಜು ನಿರ್ಮಾಣ ಚಳವಳಿ:

ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಿತ್ತು. ಆದರೆ, ಎಂಸಿಐ ತಂಡ ಇಲ್ಲಿಗೆ ಆಗಮಿಸಿದ್ದಾಗ, ಕಾಲೇಜು ಸೂಕ್ತ ಕಟ್ಟಡ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ರದ್ದಾಗಿತ್ತು. ಮೂಲಸೌಕರ್ಯ ಇಲ್ಲದಿರುವುದು ಅಷ್ಟೇ ಅಲ್ಲ, ಕಾಲೇಜಿಗೆ ತೆರಳಲು ರಸ್ತೆಯೇ ಇಲ್ಲದಿರುವುದನ್ನು ಕಂಡು ಎಂಸಿಐ ತಂಡ ಅನುಮತಿ ನಿರಾಕರಿಸಿತ್ತು. ರದ್ದಾದ ಮಾಹಿತಿ ಗೌಪ್ಯವಾಗಿಯೇ ಇಡಲಾಗಿತ್ತು.

ಕನ್ನ​ಡ​ಪ್ರಭ ಸರಣಿ ವರ​ದಿ:

ಮೆಡಿಕಲ್‌ ಕಾಲೇಜಿನ ಅವಶ್ಯಕತೆ ಹಾಗೂ ಅದರ ಉದ್ದೇಶಗಳ ಬಗ್ಗೆ ಕನ್ನಡಪ್ರಭ ಕಳೆದ ಜೂನ್‌ನಲ್ಲಿ ಸರಣಿ ವರದಿಗಳ ಮೂಲಕ ಸರ್ಕಾರ ಹಾಗೂ ಜನರ ಗಮನ ಸೆಳೆದಿತ್ತು. ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಎಂಸಿಐ ಅನುಮತಿ ನಿರಾಕರಿಸಿದ್ದುದು, ಇದಕ್ಕೆ ಕಾರಣಗಳು, ಮೆಡಿಕಲ್‌ ಕಾಲೇಜಿನಿಂದ ಇಲ್ಲಿನ ಆರೋಗ್ಯ ಸ್ಥಿತಿ ಸುಧಾರಣೆ, ಶಿಕ್ಷಣ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಬಗ್ಗೆ ಸರಣಿ ವರದಿಗಳಿಂದ ಕೊನೆಗೆ ಮೆಡಿಕಲ್‌ ಕಾಲೇಜು ನಿರ್ಮಾಣ ವಿಚಾರವಾಗಿ ಭಾರಿ ಚಳವಳಿ ರೂಪುಗೊಂಡಿದ್ದವು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ನೇತೃತ್ವದಲ್ಲಿ ಯಾದಗಿರಿ ಬಂದ್‌ ಕರೆಗೆ ಭಾರಿ ಸ್ಪಂದನೆ ಸಿಕ್ಕಿತ್ತು. ಸುರಪುರ ಶಾಸಕ ರಾಜೂಗೌಡ ಪ್ರತಿ ಬಾರಿ ಸಿಎಂಗೆ ಇದರ ಮನವರಿಕೆ ಮಾಡಿದ್ದರು.

ಯಾದಗಿರಿ ಮೆಡಿಕಲ್ ಕಾಲೇಜು: ಸುವರ್ಣನ್ಯೂಸ್-ಕನ್ನಡಪ್ರಭ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಸಿಎಂ ಯಡಿಯೂರಪ್ಪ ಇಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಆದ್ಯತೆ ನೀಡಿದರು. ನೀತಿ ಆಯೋಗದ ವರದಿಗಳಲ್ಲಿನ ಯಾದಗಿರಿ ಜಿಲ್ಲೆ ಹಿಂದುಳಿದಿದ್ದು, ಕಾಲೇಜು ಸ್ಥಾಪನೆ ಅವಶ್ಯಕ ಎಂದು ಒತ್ತಿ ಹೇಳಿತ್ತು. ಕೇಂದ್ರದ ಸೂಚನೆ ಮೇರೆಗೆ ಯಾದಗಿರಿ ಜಿಲ್ಲೆಯ ಪ್ರಸ್ತಾವನೆಯನ್ನು ಸಿಎಂ ಕಳುಹಿಸಿದ್ದರು. ಕಳೆದ ಬಾರಿ ಇಲ್ಲಿಗೆ ಬಂದಿದ್ದ ಸಿಎಂ ಯಡಿಯೂರಪ್ಪ ಮೆಡಿಕಲ್‌ ಕಾಲೇಜು ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಕೆಲ ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಸಹ ಇದಕ್ಕೆ ದನಿಗೂಡಿಸಿದ್ದರು. ಸಚಿವ ಪ್ರಭು ಚವ್ಹಾಣ್‌ ಆಸಕ್ತಿ ತೋರಿದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳು ಹಾಗೂ ಉನ್ನ​ತ ಶಿಕ್ಷಣ ಸಚಿವರಾದ ಡಾ.ಅಶ್ವಥ ನಾರಾಯಣ್‌ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ತಿಳಿಸಿದ್ದಾರೆ. 
ಸಿಎಂ ಯಡಿಯೂರಪ್ಪ ಅವರ ಕನಸಿನ ಕೂಸು ಯಾದಗಿರಿ ಜಿಲ್ಲೆ. ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಜನಜೀವನ ಸುಧಾರಣೆಗೆ ಕಾಲೇಜು ಸಹಕಾರಿಯಾಗಲಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರು ತಿಳಿಸಿದ್ದಾರೆ.

ಇನ್ನೊಂದು ವಾರದಲ್ಲಿ ಚಾಲನೆ ಸಿಗಲಿದೆ. ಇದು ಈ ಭಾಗದಲ್ಲಿ ಒಳ್ಳೆಯ ಬೆಳವಣಿಗೆ. ಹೈದರಾಬಾದ ಮೂಲದ ಕಂಪನಿ ಇದರ ನಿರ್ಮಾಣ ಕಾಮಗಾರಿ ಶುರು ಮಾಡಲಿದೆ. ಇನ್ನೂ 40 ಎಕರೆಯಷ್ಟು ಜಮೀನು ನೀಡಲು ಸರ್ಕಾರ ಒಪ್ಪಿದೆ ಎಂದು ಯಿಮ್ಸ್‌ ವಿಶೇಷ ಅಧಿಕಾರಿ ಡಾ. ಶಂಕರಗೌಡ ಐರೆಡ್ಡಿ ಅವರು ಹೇಳಿದ್ದಾರೆ.