ಸಿ.ವಿ.ರಾಮನ್‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ನಿರ್ಮಾಣ, ರಸ್ತೆ ಗುಣಮಟ್ಟದ ವರದಿ ನೀಡಲು ಬೊಮ್ಮಾಯಿ ಸೂಚನೆ

ಬೆಂಗಳೂರು(ಡಿ.08): ಪ್ರೀಕಾಸ್ಟ್‌ ತಂತ್ರಜ್ಞಾನ ಬಳಸಿ ನಿರ್ಮಾಣವಾಗುವ ರ‍್ಯಾಪಿಡ್‌ ರಸ್ತೆಗಳ ಗುಣಮಟ್ಟದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಸರ್ಕಾರದ ನಿಗದಿತ ದರಕ್ಕೆ ಹೊಂದುವಂತಿದ್ದರೆ ಮಾತ್ರ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ದೇಶದ ಮೊದಲ ರ‍್ಯಾಪಿಡ್‌ ರಸ್ತೆಯನ್ನು ಗುರುವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ರಸ್ತೆಗಳ ಜತೆಗೆ ವೆಚ್ಚವೂ ಕಡಿಮೆ ಇರಬೇಕು. ಈ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಬಳಿಕ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಗಡಿ ವಿವಾದ: ಪ್ರಚೋದನೆ ನಿಲ್ಲಿಸಿ, ‘ಮಹಾ’ ಸಿಎಂಗೆ ಬೊಮ್ಮಾಯಿ ತಾಕೀತು

ಬೆಂಗಳೂರಿನ ರಸ್ತೆ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೆವು. ವೈಟ್‌ ಟಾಪಿಂಗ್‌ ಮಾಡುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸಂಚಾರ ವ್ಯವಸ್ಥೆ ಬದಲಾವಣೆ ಹಾಗೂ ವಾಹನ ದಟ್ಟಣೆ ನಿರ್ವಹಣೆ ಮಾಡಬೇಕಾಗುತ್ತದೆ. ಒಂದು ವೇಳೆ ರಸ್ತೆ ನಿರ್ಮಾಣದ ಬಳಿಕ ಸಮಸ್ಯೆ ಉಂಟಾದಲ್ಲಿ ಪುನಃ ಅದನ್ನು ಒಡೆದು ತೆಗೆಯಬೇಕಾಗುತ್ತದೆ. ಇದೀಗ ಹೊಸ ತಂತ್ರಜ್ಞಾನ ಕಂಡುಕೊಂಡು ತ್ವರಿತವಾಗಿ ರಸ್ತೆ ನಿರ್ಮಾಣ ಮಾಡಬಹುದಾಗಿದೆ. ಈ ತಂತ್ರಜ್ಞಾನ ಪ್ರೀಕಾಸ್ಟ್‌ ಸ್ಲಾಬ್‌ಗಳನ್ನು ತಯಾರಿಸಿ ಆಂತರಿಕ ಜಾಯಿಂಟ್‌ ಹಾಕಿ, ಬಲಗೊಳಿಸಲಾಗುತ್ತದೆ ಎಂದು ಹೇಳಿದರು.

ಪ್ರಾಯೋಗಿಕವಾಗಿ 500 ಮೀ. ರ‍್ಯಾಪಿಡ್‌ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈ ಪೈಕಿ 375 ಮೀಟರ್‌ ಉದ್ದದ ರಸ್ತೆ ನಿರ್ಮಾಣವಾಗಿದೆ. ಅದನ್ನು ಪರಿಶೀಲಿಸಿ ಹಲವಾರು ಸೂಚನೆಗಳನ್ನು ನೀಡಿದ್ದೇನೆ. 20 ಟನ್‌ ತೂಕದ ವಾಹನಗಳನ್ನು ಸತತವಾಗಿ ಸಂಚಾರ ಮಾಡಿಸಬೇಕು. ಭಾರಿ ವಾಹನಗಳ ಚಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಪೂರ್ಣ ವರದಿ ಬೇಕೆಂದು ಸೂಚಿಸಿದ್ದೇನೆ. ತಾಂತ್ರಿಕ ವಿವರಗಳನ್ನು ಸಲ್ಲಿಸಲು ಸೂಚಿಸಿದ್ದು, ಅಂತಿಮವಾಗಿ ಕಾಮಗಾರಿಯು ಕ್ಷಿಪ್ರವಾಗಿ ಆಗಬೇಕು. ಜತೆಗೆ ಗುಣಮಟ್ಟವಿರಬೇಕು, ವೆಚ್ಚವೂ ಸೂಕ್ತವಾಗಿರಬೇಕು ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಆಗುವುದಾದರೆ, ಬೆಂಗಳೂರಿನಲ್ಲಿ ಎಲ್ಲೆಲ್ಲಿ ವೈಟ್‌ ಟಾಪಿಂಗ್‌, ಸಂಚಾರ ದಟ್ಟಣೆಯುಳ್ಳ, ಕ್ಷಿಪ್ರವಾಗಿ ರಸ್ತೆಯಾಗಬೇಕಿರುವ ಸ್ಥಳಗಳಲ್ಲಿ ಇದನ್ನು ಅಳವಡಿಸಬಹುದು ಎಂದರು. ಈ ವೇಳೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌, ಶಾಸಕ ಎಸ್‌.ರಘು, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಇದ್ದರು.