ಗಡಿ ವಿವಾದ: ಪ್ರಚೋದನೆ ನಿಲ್ಲಿಸಿ, ‘ಮಹಾ’ ಸಿಎಂಗೆ ಬೊಮ್ಮಾಯಿ ತಾಕೀತು
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ಹತೋಟಿಗೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಜೊತೆಗೆ ಗಡಿ ವಿವಾದ ವಿಚಾರದಲ್ಲಿ ಕರ್ನಾಟಕದ ನೀತಿಯನ್ನು ಈಗಾಗಲೇ ಸ್ಪಷ್ಟವಾಗಿ ಪ್ರಕಟಿಸಲಾಗಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು(ಡಿ.09): ಮಹಾರಾಷ್ಟ್ರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಿ. ನಮ್ಮ ಭಾಗದಲ್ಲಿ ನಾವು ಶಾಂತಿ ಕಾಪಾಡಿಕೊಳ್ಳುತ್ತೇವೆ. ಪ್ರಚೋದನೆ ಯಾವ ಕಡೆಯಿಂದಲೂ ಆಗಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜತೆಗೆ ಈಗಾಗಲೇ ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡಿದ್ದು, ಕನ್ನಡ ನಾಡಿನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ.
ಗಡಿ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಕರೆ ಮಾಡಿ ಎರಡೂ ಕಡೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಹೇಳಿದ್ದಾರೆ. ನಿಮ್ಮ ಭಾಗದಲ್ಲಿ ಶಾಂತಿ ಸೌಹಾರ್ದತೆಯನ್ನು ನೀವು ಕಾಪಾಡಿಕೊಳ್ಳಿ, ನಮ್ಮ ಭಾಗದಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ಆ ಕಡೆಯಿಂದ ಪ್ರಚೋದನೆಯಾಗಕೂಡದು ಎಂದು ಎಚ್ಚರಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿ: ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಿಸಿ
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಸಂರಕ್ಷಣೆ, ಅಲ್ಲಿನ ಆಸ್ತಿ ಪಾಸ್ತಿ ರಕ್ಷಣೆ ಮಾಡುವ ಸಲುವಾಗಿ ಕ್ರಮ ವಹಿಸಿದ್ದು, ಮಹಾರಾಷ್ಟ್ರ ಡಿಜಿಪಿ ಹಾಗೂ ಅಲ್ಲಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇವೆ. ಕರ್ನಾಟಕದಲ್ಲಿಯೂ ಕೂಡ ಸಂಪೂರ್ಣ ಬಂದೋಬಸ್ತು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ಹತೋಟಿಗೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ. ಜೊತೆಗೆ ಗಡಿ ವಿವಾದ ವಿಚಾರದಲ್ಲಿ ಕರ್ನಾಟಕದ ನೀತಿಯನ್ನು ಈಗಾಗಲೇ ಸ್ಪಷ್ಟವಾಗಿ ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.