ಆಲಮಟ್ಟಿ: ಕೃಷ್ಣೆಗೆ ಸಿಎಂ ಬಾಗಿನ ಅರ್ಪಣೆ ನಾಳೆ
ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಕೇವಲ ಒಂದು ಗಂಟೆ ಇರುವ ಕಾರಣ, ಸರಳವಾಗಿ ಬಾಗಿನ ಅರ್ಪಣೆ ಕಾರ್ಯ ನಡೆಯಲಿದೆ.
ಆಲಮಟ್ಟಿ(ಸೆ.29): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.30ರಂದು ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ನಂತರ, ನಂತರ ಕೃಷ್ಣಾ ಭಾಗ್ಯ ಜಲ ನಿಗಮದ ಎಂಡಿ ಕಚೇರಿಯ ಹಿಂಭಾಗದ ಗುಡ್ಡದ ಬಳಿ ನೂತನ ಪ್ರವಾಸಿಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.
ಜುಲೈ ಅಂತ್ಯಕ್ಕೆ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಆದರೆ ನೆರೆ ನಿಯಂತ್ರಣದ ಉದ್ದೇಶದಿಂದ ಜಲಾಶಯದ ಮಟ್ಟವನ್ನು ಕಡಿಮೆ ಮಾಡಲಾಗಿತ್ತು. ಆ.21ರಿಂದ ಜಲಾಶಯದಲ್ಲಿ ಗರಿಷ್ಠ ಮಟ್ಟ 519.60 ಮೀ.ವರೆಗೆ ನೀರು ಸಂಗ್ರಹವಾಗಿದೆ.
ಉತ್ತಮ ಮಳೆ ಹಿನ್ನೆಲೆ ಕೋಲಾರ ಯರಗೋಳ್ ಡ್ಯಾಂಗೆ ಬಾಗಿನ ಸಮರ್ಪಣೆ
ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಕೇವಲ ಒಂದು ಗಂಟೆ ಇರುವ ಕಾರಣ, ಸರಳವಾಗಿ ಬಾಗಿನ ಅರ್ಪಣೆ ಕಾರ್ಯ ನಡೆಯಲಿದೆ. ಈಗಾಗಲೇ ಸಿದ್ಧತೆ ಆರಂಭಗೊಂಡಿದೆ. 2002ರಲ್ಲಿ ಎಸ್.ಎಂ.ಕೃಷ್ಣಾ ಅವರಿಂದ ಆರಂಭಗೊಂಡ ಬಾಗಿನ ಅರ್ಪಣೆ 2015 ಮತ್ತು 2016 ಹೊರತುಪಡಿಸಿ, ಪ್ರತಿವರ್ಷವೂ ನಡೆದಿದೆ. ಐದು ಬಾರಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಬಿ.ಎಸ್.ಯಡಿಯೂರಪ್ಪ ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಆಗಿದ್ದಾರೆ. ಸದ್ಯ ಬೊಮ್ಮಾಯಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಬಾಗಿನ ಅರ್ಪಿಸಲಿದ್ದಾರೆ. 2015ರಲ್ಲಿ ಜಲಾಶಯ ಭರ್ತಿಯಾಗದ ಕಾರಣ, 2016ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ ನಿಧನದ ಕಾರಣ ಬಾಗಿನ ಅರ್ಪಣೆ ನಡೆದಿರಲಿಲ್ಲ.
ಮುಖ್ಯಮಂತ್ರಿಗಳು ಆಲಮಟ್ಟಿಗೆ ಬಂದಾಗ, ಈ ಭಾಗದ ರೈತರ ಸಮಸ್ಯೆಯನ್ನು ಆಲಿಸಲು ಅವಕಾಶ ಕಲ್ಪಿಸಬೇಕು, ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ನಂಜುಡಸ್ವಾಮಿ ಬಣ) ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ ಆಗ್ರಹಿಸಿದ್ದಾರೆ.