ಕಲಬುರಗಿ: ಕಳೆದೊಂದು ವಾರದಿಂದ ಸೂರ್ಯನ ದರ್ಶನವಿಲ್ಲ!
ಮೋಡ ಕವಿದ ವಾತಾವರಣ, ಮಂದ ಬೆಳಕು, ದಿನವಿಡಿ ಸುರಿಯುತ್ತಿರುವ ಮಳೆ, ಕೆಲ ಕಾಲ ಬಿಡುವು ಕೊಡುವ ಮಳೆರಾಯ ಮತ್ತೆ ಹನಿ ಹನಿ ರೂಪದಲ್ಲಿ ಪ್ರತ್ಯಕ್ಷ, ವರುಣದೇವ ಸ್ವಲ್ಪ ಬಿಡುವು ಕೊಟ್ಟನಲ್ಲ ಎಂದು ಮನೆಯಿಂದ ಹೊರಗಡಿ ಇಡುವುದರೊಳಗೇ ಮತ್ತೆ ಮಳೆಯ ಹನಿಗಳು ರಪರಪ ಎಂದು ಮುಖಕ್ಕೆ ರಾಚುತ್ತ ಧರೆಗೆ, ಂಮನೆಯಿಂದ ಹೊರಗೆ ಎರಡು ಹೆಜ್ಜೆ ಹಾಕುವಷ್ಟರಲ್ಲೇ ತೊಯ್ದು ತೊಪ್ಪೆಯಾಗುತ್ತಿರುವ ಜನ.
ಶೇಷಮೂರ್ತಿ ಅವಧಾನಿ
ಕಲಬುರಗಿ (ಜು.29) : ಮೋಡ ಕವಿದ ವಾತಾವರಣ, ಮಂದ ಬೆಳಕು, ದಿನವಿಡಿ ಸುರಿಯುತ್ತಿರುವ ಮಳೆ, ಕೆಲ ಕಾಲ ಬಿಡುವು ಕೊಡುವ ಮಳೆರಾಯ ಮತ್ತೆ ಹನಿ ಹನಿ ರೂಪದಲ್ಲಿ ಪ್ರತ್ಯಕ್ಷ, ವರುಣದೇವ ಸ್ವಲ್ಪ ಬಿಡುವು ಕೊಟ್ಟನಲ್ಲ ಎಂದು ಮನೆಯಿಂದ ಹೊರಗಡಿ ಇಡುವುದರೊಳಗೇ ಮತ್ತೆ ಮಳೆಯ ಹನಿಗಳು ರಪರಪ ಎಂದು ಮುಖಕ್ಕೆ ರಾಚುತ್ತ ಧರೆಗೆ, ಂಮನೆಯಿಂದ ಹೊರಗೆ ಎರಡು ಹೆಜ್ಜೆ ಹಾಕುವಷ್ಟರಲ್ಲೇ ತೊಯ್ದು ತೊಪ್ಪೆಯಾಗುತ್ತಿರುವ ಜನ.
ಉರಿ ಬಿಸಿಲು, ಬಿರು ಬಿಸಿಲಿನಿಂದಾಗಿ ಬಿಸಿಲೂರು ಎಂದೇ ಹೆಸರಾಗಿರುವ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಕಳೆದೊಂದು ವಾರದ ನೋಟಗಳಿವು. ಬರೋಬ್ಬರಿ ಒಂದು ವಾರವಾಯ್ತು ಸೂರ್ಯದೇವನ ದರುಶನವಿಲ್ಲ, ಬಿಸಿಲೂರು ಮಲೆನಾಡಿನ ಪೋಷಾಕು ಹಾಕಿಕೊಂಡಿದೆ!
ರೆಡ್ ಅಲರ್ಟ್ ಇದ್ದರೂ ಕಲಬುರಗಿಯಲ್ಲಿ ಇಡೀ ದಿನ ಮಳೆ ಇಲ್ಲ!
ಜಿಟಿ ಜಿಟಿ ಮಳೆಗೆ ಮಲೆನಾಡಿನಂತಾಗಿದೆ ತೊಗರಿ ಕಣಜ. ಕಲಬುರಗಿ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ಮಲೆನಾಡಿನ ಕಳೆಯೊಂದಿಗೆ ಜೀವಕಳೆ ತುಂಬಿಕೊಂಡರೆ, ಇಲ್ಲಿನ ಭೂರಮೆ ಹಸಿರು ಹೊದ್ದುಕೊಂಡು ತನ್ನನ್ನೇ ನೋಡು ಎನ್ನುತ್ತಿದ್ದಾಳೆ. ಕಲಬುರಗಿ ಜಿಲ್ಲಾದ್ಯಂತ ಸುರಿಯುತ್ತಿರೋ ಜಡಿಮಳೆ ಬಿಸಿಲನ್ನು ಮರೆಸಿ ಇಲ್ಲಿನ ಕಣಕಣಗಳನ್ನೆಲ್ಲ ತೊಯ್ದು ತೊಪ್ಪೆಯಾಗಿಸಿದೆ.
ಬಿಸಿಲಿನೊಂದಿಗೆ ಬದುಕೋದು ಹೇಗೆಂದು ಕರಗತ ಮಾಡಿಕೊಂಡಿರುವ ಇಲ್ಲಿನ ಜನತೆಗೆ ಜಡಿಮಳೆ ಅನುಭವ ಹೊಸತು, ಆದಾಗ್ಯೂ ಗರಮ್ ಚಾಯ್, ಕಾಫೀ ಸೇವಿಸುತ್ತ ದಿನಕಳೆಯುತ್ತಿರುವ ಕಲಬುರಗಿ ಜನತೆ ದಿನವಿಡೀ ಸುರಿಯುತ್ತಿರುವ ಜಡಿ ಮಳೆಯಲ್ಲಿ ಕೊಡೆಯನ್ನು ಬಳಸದೆ ತಮ್ಮನ್ನೇ ತಾವು ತೊಯ್ಸಿಕೊಂಡರೂ ಮಳೆಯಲ್ಲೇ ನೆನೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ 1 ವಾರದಿಂದ ದಟ್ಟಮೋಡ ಕವಿದ ವಾತಾವರಣ, ಮಳೆಯದ್ದೇ ಪಾರುಪತ್ಯ, ಮೋಡ ಕವಿದದ್ದು ಕಂಡರೆ ಅದ್ಯಾವಾಗ ರಣಮಳೆ ಧರೆಗಿಳಿಯುವುದೋ ಎಂದು ಗೊತ್ತಾಗದಂತಹ ನೋಟ. ಹೀಗಾಗಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಮಳೆಯಲ್ಲಿ ತೊಯ್ಸಿಕೊಂಡೇ ಓಡಾಡುವಂತ ಪರಿಸ್ಥಿತಿ. ಶೇ. 5 ರಷ್ಟುಮಂದಿ ಮಾತ್ರ ಕೊಡೆ, ರೇನ್‌ಕೋಟ್ ಧಾರಿಗಳು, ಮಿಕ್ಕವರೆಲ್ಲರೂ ಮಳೆಯಲ್ಲೇ ನೆನೆಯುತ್ತ ಸಾಗುತ್ತಿದ್ದಾರೆ!
ಸ್ವೀಟ್‌ಕಾರ್ನ್, ಶೇಂಗಾ, ಬಜ್ಜಿ ಭರಾಟೆ
ಮಳೆಯನ್ನು ಲೆಕ್ಕಿಸದೆ ಇಲ್ಲಿನ ಜನ ಹಾಗೇ ರಸ್ತೆಗಿಳಿಯುತ್ತಿದ್ದಾರೆ, ಹಾಗೆ ಬಂದು ಮನೆಗೆ ಹೋಗುವಾಗ ಗರ್ಮಾ ಗರಮ್ ಬಜ್ಜಿ, ಬೋಂಡಾ, ಹುರಿದ ಶೇಂಗಾ, ಸ್ವೀಟ್ ಕಾರ್ನ್ ಮೊರೆ ಹೋಗುತ್ತಿದ್ದಾರೆ. ಈ ವಾತಾವರಣದಲ್ಲಿ ಕಳೆದೊಂದು ವಾರದಿಂದ ಎಲ್ಲಾಕಡೆ ಹಾದಿ ಬೀದಿಗಳಲ್ಲೆಲ್ಲಾ ಇವುಗಳ ಮಾರಾಟ ಭರಾಟೆ. ಅದರಲ್ಲೂ ಶಾಲೆ, ಕಾಲೇಜುಗಳ ಗೇಟ್ ಮುಂದಿನ ರಸ್ತೆಗಳಲ್ಲಂತೂ ಗರಮ್ ಬಜ್ಜಿ, ಕಾರ್ನ್, ಕಡಲೆಕಾಯಿ, ಚನಾ ಮಸಾಲಾ ಮಾರಾಟ ಭರ್ಪೂರ ಸಾಗಿದೆ. ಬೇಸಿಗೆಯಲ್ಲಿ ಹಾದಿಬೀದಿಗಳಲ್ಲೆಲ್ಲಾ ಕಬ್ಬಿನ ಹಾಲು, ಮಜ್ಜಿಗೆ, ಶರಬತ್ ಮಳಿಗೆಗಳು ಹೇಗೆ ತಲೆ ಎತ್ತುವವೋ ಹಾಗೆಯೇ ಈ ಜಡಿ ಮಳೆಯಲ್ಲಿ ಕಾರ್ನ್, ಚಾಯ್, ಶೇಂಗಾ ಮಾರಾಟ ಸಾಗಿದೆ. ಜಡಿಮಳೆ ಹಲವು ಕುಟುಂಬಗಲಿಗೆ ಆಧಾರವೂ ಆಗಿದೆ.
ಶಾಲೆಗಳಿಗೆ ರಜೆ ಘೋಷಣೆ ಸುಳ್ಳು ಸುದ್ದಿ; ಕಲಬುರಗಿ ಜಿಲ್ಲಾಧಿಕಾರಿ ಸ್ಪಷ್ಟನೆ
ಚಿಂಚೋಳಿ ಮಿನಿ ಮಲೆನಾಡು!
ಜಿಲ್ಲೆಯಲ್ಲೇ ಹೆಚ್ಚಿನ ಅರಣ್ಯವಿರುವ ಚಿಂಚೋಳಿ ತಾಲೂಕು ಮಳೆಗಾಲದಲ್ಲಿ ಮಿನಿ ಮಲೆನಾಡಾಗಿ ಪರಿವರ್ತಿತವಾಗಿದೆ. ಬಿಟ್ಟು ಬಿಡದೆ ಮಲೆ ಸುರಿಯುತ್ತಿರೋದರಿಂದ ಮುಲ್ಲಾಮಾರಿ ನದಿ ಉಕ್ಕೇರಿದೆ, ಎತ್ತಿಪೋತಾ, ಮಾಮಿಕ ಜಲಧಾರೆಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಎಲ್ಲಿ ನೋಡಿದರಲ್ಲಿ ತೇಗದ ಕಾನನ. ಹಚ್ಚ ಹಸಿರು ವನಸಿರಿ, ಚಂದ್ರಂಪಳ್ಳಿ ಜಲಾಶಯ ಕಡುಗೆಂಪು ಮಿಶ್ರಿತ ನೀರಿನಿಂದ ಕಂಗೊಳಿಸುತ್ತಿದೆ. ಸುತ್ತೆಲ್ಲಾ ಹಸಿರು ಹೊದ್ದ ಬೆಟ್ಟ, ನಡುವೆ ಕೆಂಪು ಮಿಶ್ರಿತ ಜಲರಾಶಿ, ಈ ಜಲಾಶಯ ಜನಾಕರ್ಷಣೆಯ ಕೇಂದ್ರವಾಗಿದೆ.