- Home
- Karnataka Districts
- ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಕಾಫಿ ತೋಟಗಳಲ್ಲಿ ಹಾಸಿದ ಬಿಳಿ ಹೊದಿಕೆ; ಕಾಶ್ಮೀರದಂತಾದ ಮಲೆನಾಡು!
ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಕಾಫಿ ತೋಟಗಳಲ್ಲಿ ಹಾಸಿದ ಬಿಳಿ ಹೊದಿಕೆ; ಕಾಶ್ಮೀರದಂತಾದ ಮಲೆನಾಡು!
ಚಿಕ್ಕಮಗಳೂರಿನ ಹಲವು ಭಾಗಗಳಲ್ಲಿ ಭಾರಿ ಆಲಿಕಲ್ಲು ಮಳೆಯಾಗಿದ್ದು, ಇಡೀ ಪ್ರದೇಶವು ಬಿಳಿ ಹೊದಿಕೆಯಂತೆ ಕಂಗೊಳಿಸುತ್ತಿದೆ. ಈ ಅಪರೂಪದ ಮಳೆಯು ಮಕ್ಕಳಿಗೆ ಸಂಭ್ರಮವನ್ನು ತಂದರೂ, ಕಾಫಿ ಮೊಗ್ಗುಗಳು ಉದುರಿಹೋಗುವ ಭೀತಿಯಿಂದ ಕಾಫಿ ಬೆಳೆಗಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಚಿಕ್ಕಮಗಳೂರು (ಮಾ.18): ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಮಧ್ಯಾಹ್ನವಾಗುತ್ತಿದ್ದಂತೆ ಮಲೆನಾಡಿನ ಮಡಿಲಲ್ಲಿ ಮಳೆರಾಯನ ಸಿಂಚನವಾಗುತ್ತಿತ್ತು. ಆದರೆ ಇಂದು ಸುರಿದ ಮಳೆ ಮಾತ್ರ ಸಾಮಾನ್ಯ ಮಳೆಯಾಗಿರಲಿಲ್ಲ. ಮಳೆರಾಯನ ಜೊತೆಗೆ ಅತಿವೃಷ್ಟಿಯಂತೆ ಆಲಿಕಲ್ಲುಗಳು ಧರೆಗೆ ಉರುಳಿ ಇಡೀ ಮಲೆನಾಡನ್ನು ಕ್ಷಣಾರ್ಧದಲ್ಲಿ ಬಿಳಿ ಹೊದಿಕೆಯಂತೆ ಆವರಿಸುವಂತೆ ಮಾಡಿದೆ.
ನೆಲವೇ ಕಾಣದಂತೆ ಹರಡಿದ ಆಲಿಕಲ್ಲು ರಾಶಿ
ಜಿಲ್ಲೆಯ ಮಾಗಲು, ಸಂಗಮೇಶ್ವರಪೇಟೆ, ಖಾಂಡ್ಯ ಸೇರಿದಂತೆ ಸುತ್ತಮುತ್ತಲಿನ ಹಲವು ಭಾಗಗಳಲ್ಲಿ ಇಂದು ಭೀಕರ ಆಲಿಕಲ್ಲು ಮಳೆ ಸುರಿದಿದೆ. ಮಳೆ ಅದೆಷ್ಟು ಪ್ರಬಲವಾಗಿತ್ತೆಂದರೆ, ನೋಡನೋಡುತ್ತಿದ್ದಂತೆಯೇ ಮನೆಗಳ ಅಂಗಳ, ರಸ್ತೆಗಳು ಹಾಗೂ ವಿಶಾಲವಾದ ಕಾಫಿ ತೋಟಗಳಲ್ಲಿ ನೆಲವೇ ಕಾಣದಂತೆ ಆಲಿಕಲ್ಲುಗಳು ರಾಶಿ ಬಿದ್ದಿದ್ದವು.
ಹಸಿರು ಕಾಫಿ ಗಿಡಗಳ ನಡುವೆ ಬೆಳ್ಳನೆಯ ಆಲಿಕಲ್ಲುಗಳು ಬಿದ್ದಿರುವುದು ದೂರದಿಂದ ನೋಡುವವರಿಗೆ ಮಲ್ಲಿಗೆ ಹೂವುಗಳನ್ನು ಚೆಲ್ಲಿದಂತೆ ಭಾಸವಾಗುತ್ತಿತ್ತು. ಮಲೆನಾಡಿನ ಈ ಭಾಗವು ಕೆಲಕಾಲ ಮಂಜಿನ ನಗರಿ ಕಾಶ್ಮೀರದಂತೆ ಕಂಡುಬಂದಿದ್ದು ಸ್ಥಳೀಯರನ್ನು ಅಚ್ಚರಿಗೊಳಿಸಿದೆ.
ಒಂದೆಡೆ ಮಕ್ಕಳ ಸಂಭ್ರಮ, ಮತ್ತೊಂದೆಡೆ ರೈತರ ಆತಂಕ
ಈ ಅಪರೂಪದ ಆಲಿಕಲ್ಲು ಮಳೆಯು ಮಕ್ಕಳಿಗೆ ಮಾತ್ರ ಎಲ್ಲಿಲ್ಲದ ಸಂಭ್ರಮ ತಂದಿದೆ. ಮನೆಯ ಅಂಗಳದಲ್ಲಿ ರಾಶಿ ಬಿದ್ದಿದ್ದ ಆಲಿಕಲ್ಲುಗಳನ್ನು ನೋಡಿ ಕುಣಿದಾಡಿದ ಮಕ್ಕಳು, ಪಾತ್ರೆಗಳಲ್ಲಿ ಆಲಿಕಲ್ಲುಗಳನ್ನು ತುಂಬಿಕೊಂಡು ಆಟವಾಡಿ ಖುಷಿಪಟ್ಟರು. ಆಲಿಕಲ್ಲುಗಳನ್ನು ಕೈಗೆತ್ತಿಕೊಂಡು ಒಬ್ಬರಿಗೊಬ್ಬರು ಎಸೆದಾಡುತ್ತಾ ಈ ಸುಂದರ ಕ್ಷಣವನ್ನು ಎಂಜಾಯ್ ಮಾಡಿದರು.
ಆದರೆ, ಈ ಮನಮೋಹಕ ದೃಶ್ಯದ ಹಿಂದೆ ಕಾಫಿ ಬೆಳೆಗಾರರ ಆತಂಕ ಅಡಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಾಫಿ ಮೊಗ್ಗುಗಳು ಅರಳುತ್ತಿವೆ. ಇಂತಹ ಸಮಯದಲ್ಲಿ ಭಾರಿ ಗಾತ್ರದ ಆಲಿಕಲ್ಲುಗಳು ಮಳೆಯೊಂದಿಗೆ ಸುರಿದರೆ, ಗಿಡಗಳಲ್ಲಿರುವ ಕಾಫಿ ಮೊಗ್ಗುಗಳು ಅಥವಾ ಮರಿ ಮೊಗ್ಗುಗಳು ಉದುರಿಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದರಿಂದ ಮುಂದಿನ ವರ್ಷದ ಇಳುವರಿಯ ಮೇಲೆ ಭಾರಿ ಹೊಡೆತ ಬೀಳುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ. ಹಸಿರು ಕಾಫಿ ಎಲೆಗಳ ನಡುವೆ ಆಲಿಕಲ್ಲು ಬಿದ್ದು ಎಲೆಗಳು ಕೂಡ ತುಂಡಾಗಿವೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಾದ್ಯಂತ ಮಧ್ಯಾಹ್ನದ ನಂತರ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಲೆನಾಡಿನ ಜಿಲ್ಲೆಗಳಲ್ಲಿ ಇನ್ನೂ ಎರಡು-ಮೂರು ದಿನಗಳ ಕಾಲ ಇದೇ ರೀತಿಯ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮಳೆಯ ಅಬ್ಬರ ಹೆಚ್ಚಾಗುತ್ತಿರುವುದರಿಂದ ಜನರು ಹಾಗೂ ಕೃಷಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಒಟ್ಟಾರೆಯಾಗಿ, ಮಲೆನಾಡಿನ ಈ ಆಲಿಕಲ್ಲು ಮಳೆ ನೋಡಲು ಸುಂದರವಾಗಿದ್ದರೂ, ಪ್ರಕೃತಿಯ ಈ ವಿಕೋಪವು ಕೃಷಿ ವಲಯಕ್ಕೆ ಕಂಟಕವಾಗುತ್ತದೆಯೇ ಎಂಬ ಆತಂಕ ಮನೆಮಾಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

