Asianet Suvarna News Asianet Suvarna News

ಚಿತ್ರದುರ್ಗ: ಇಂದಿರಾ ಕ್ಯಾಂಟಿನ್‌ನ ಆಹಾರದ ರುಚಿ ನೋಡಿದ್ದೀರಾ?, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಡಿಸಿ ದಿವ್ಯಾಪ್ರಭು

ಬರುವ ದಿನಗಳಲ್ಲಿ ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‍ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.

Chitradurga DC Divya Prabhu Sudden Visited to Indira Canteen grg
Author
First Published Dec 17, 2023, 4:46 AM IST

ಚಿತ್ರದುರ್ಗ(ಡಿ.17):  ಯಾವತ್ತಾದರೂ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರದ ರುಚಿ ನೋಡಿದ್ದೀರಾ? ಅದು ಹೋಗಲಿ ಒಂದು ಕೆಜಿ ಅಕ್ಕಿಯಲ್ಲಿ ಎಷ್ಟು ಮಂದಿ ಊಟ ಮಾಡ್ತಾರೆ ಎಂಬುದ ಪರಿಶೀಲಿಸಿದ್ದಾರಾ ? ಐದು ನೂರು ಜನಕ್ಕೆ ಡೈಲಿ ಆಹಾರ ಕೊಡಬೇಕಾದರೆ ಎಷ್ಟು ಅಕ್ಕಿ ಹೋಗುತ್ತೆ ಎಂಬುದನ್ನು ಪರಿಶೀಲಿಸಿದ್ದೀರಾ...?

ಇದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯಾಪ್ರಭು ತರಾಟೆಗೆ ತೆಗೆದುಕೊಂಡ ಬಗೆ. ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಶುಚಿ-ರುಚಿ ಕಾಯ್ದುಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ತಾಕೀತು ಮಾಡಿದರು.

ಕಾರವಾರ: ಇಂದಿರಾ ಕ್ಯಾಂಟಿನ್‌ನಲ್ಲಿ ಉಪಾಹಾರ ಸವಿದ ಡಿಸಿ ಗಂಗೂಬಾಯಿ ಮಾನಕರ

ಆಹಾರದ ಗುಣಮಟ್ಟ, ಶುಚಿ-ರುಚಿ ಕೊರತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಕ್ಯಾಂಟೀನ್‍ನಲ್ಲಿ ಉಪಾಹಾರ ಹಾಗೂ ಊಟದ ತಯಾರಿಕೆ ಉತ್ತಮವಾಗಿಲ್ಲ, ಉಪಾಹಾರ ರುಚಿಕಟ್ಟಾಗಲು ಅಗತ್ಯವಿರುವ ಸಾಮಗ್ರಿಗಳ ಸಮರ್ಪಕ ಬಳಕೆಯಾಗುತ್ತಿಲ್ಲ, ಹೀಗಾಗಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‍ಗೆ ಹೆಚ್ಚು ಬರುತ್ತಿಲ್ಲ. ಕ್ಯಾಂಟೀನ್‍ಗೆ ಎಷ್ಟು ಆಹಾರ ಧಾನ್ಯ ಹಾಗೂ ಅಡುಗೆ ಸಾಮಗ್ರಿ ಸ್ವೀಕರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಎಷ್ಟು ಜನರಿಗೆ ಊಟೋಪಹಾರ ವಿತರಿಸಲಾಗಿದೆ ಎಂಬುದರ ಬಗ್ಗೆ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆಹಾರದ ಗುಣಮಟ್ಟ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿ ಪ್ರತಿ ನಿತ್ಯ ಭೇಟಿ ಮಾಡಬೇಕು. ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು, ಮುಖ್ಯಾಧಿಕಾರಿಗಳು ವಾರಕ್ಕೊಮ್ಮೆ ಕ್ಯಾಂಟೀನ್‍ಗೆ ಭೇಟಿ ನೀಡಿ, ಅಲ್ಲಿಯೇ ಉಪಾಹಾರ ಮತ್ತು ಊಟ ಸೇವಿಸಿ ಪರಿಶೀಲಿಸಬೇಕು. ಅಡುಗೆ ಸಾಮಗ್ರಿಗಳ ದಾಸ್ತಾನು, ಬಳಕೆ, ಊಟೋಪಹಾರ ವಿತರಣೆ ಪ್ರಮಾಣ ಕುರಿತಂತೆ ನಿತ್ಯ ರಿಜಿಸ್ಟರ್‌ನಲ್ಲಿ ಮಾಹಿತಿ ದಾಖಲಾಗಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆರೋಗ್ಯ ನಿರೀಕ್ಷಕರು ಸ್ವಚ್ಛತೆ ಹಾಗೂ ಶುಚಿತ್ವ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ನಿತ್ಯ ಕ್ಯಾಂಟೀನ್‍ನಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

ಬರುವ ದಿನಗಳಲ್ಲಿ ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‍ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಂಕ್ರಾಂತಿಯಿಂದ ಇಂದಿರಾ ಕ್ಯಾಂಟೀನಲ್ಲಿ ಮಧ್ಯಾಹ್ನ, ರಾತ್ರಿ ಮುದ್ದೆ ಊಟ!

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಅಭಿಯಂತರ ಜಾಫರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಕಡಿಮೆ ದರದಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಹಾಗೂ ರುಚಿಯಾದ ಊಟೋಪಹಾರ ಒದಗಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ವಿವಿಧೆಡೆ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಿದೆ. ಆದರೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕ್ಯಾಂಟೀನ್ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದ್ದಾರೆ.  

Follow Us:
Download App:
  • android
  • ios