ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ, ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪುತ್ರ ನಿಂಗರಾಜನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ, ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ. ಮಗನಿಂದ ಕೊಲೆಯಾದ ವ್ಯಕ್ತಿಯನ್ನು ಸಣ್ಣ ನಿಂಗಪ್ಪ (65) ಎಂದು ಗುರುತಿಸಲಾಗಿದ್ದು, ಪುತ್ರ ನಿಂಗರಾಜ (36) ನನ್ನು ಪೊಲೀಸರು ಬಂಧಿಸಿದ್ದಾರೆ. ನಿಂಗರಾಜ ತನ್ನ ಮದುವೆಯನ್ನು ಪೋಷಕರು ಮಾಡಿಲಿಲ್ಲ ಎಂಬ ಕಾರಣಕ್ಕೆ ಹಲವು ದಿನಗಳಿಂದ ಮನೆಯಲ್ಲೇ ಗಲಾಟೆ ಮಾಡುತ್ತಿದ್ದನಂತೆ. ಘಟನೆಯ ದಿನ ರಾತ್ರಿ ಸಣ್ಣ ನಿಂಗಪ್ಪ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ, ಕೋಪದಿಂದ ನಿಂಗರಾಜ ಕಬ್ಬಿಣದ ರಾಡ್ ಬಳಸಿ ತಂದೆಯ ತಲೆಗೆ ಬಲವಾಗಿ ಹೊಡೆದು ಹತ್ಯೆಗೈದಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಸಣ್ಣ ನಿಂಗಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಿಗ್ಗೆ ಘಟನೆ ಬೆಳಕಿಗೆ ಬಂದ ಬಳಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೊಸದುರ್ಗ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯಾದ ನಿಂಗರಾಜನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಗನೇ ತಂದೆಯನ್ನು ಹತ್ಯೆ ಮಾಡಿದ ಈ ಭೀಕರ ಘಟನೆ ಅತ್ತಿಘಟ್ಟ ಗ್ರಾಮದಲ್ಲಿ ಶೋಕ ಮತ್ತು ಆತಂಕದ ವಾತಾವರಣವನ್ನುಂಟುಮಾಡಿದೆ.

ಹೊಳಲ್ಕೆರೆ ಬಳಿ ಅಪಘಾತ, ನಾಲ್ವರ ಸಾವು

ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದ ಬಳಿ ಮಂಗಳವಾರ ಸಂಜೆ ಬೊಲೇರೋ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೂವರು ಸೇರಿದಂತೆ ಒಟ್ಟು ನಾಲ್ವರು ಅಸುನೀಗಿದ್ದು ನಾಲ್ವರಿಗೆ ಗಂಭೀರಗಾಯಗಳಾಗಿವೆ. ಮೃತರನ್ನು ಹೊಳಲ್ಕೆರೆ ತಾಲೂಕಿನ ಕಲ್ಲವ್ವನಾಗತಿ ಹಳ್ಳಿ ಗ್ರಾಮದ ಗಿರಿರಾಜ್, ಕಿರಣ್, ಅರುಣ್, ಹನುಮಂತಪ್ಪ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ನಾಲ್ವರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ಮಾಯಕೊಂಡಕ್ಕೆ ಅಡಿಕೆ ಕೆಲಸಕ್ಕೆಂದು ಎಂಟು ಮಂದಿ ಬೊಲೆರೋ ವಾಹನದಲ್ಲಿ ತೆರಳಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ಸು ಬರುವಾಗ ಸಾಸಲು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲಿ ಮೂವರು ಮೃತಪಟ್ಟರೆ, ಮತ್ತೋರ್ವ ದಾವಣಗೆರೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ. ಈ ಸಂಬಂಧ ಚಿಕ್ಕಜಾಜೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕುಡಿತದ ಅಮಲಿನಲ್ಲಿ ಪತ್ನಿಗೆ ನೇಣು ಬಿಗಿದು ಕೊಲೆ

ಹಾಸನ: ಕುಡಿತದ ಅಮಲಿನಲ್ಲಿ ಪತ್ನಿಯ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪದ ಬೆನ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲಾಸ್ಪತ್ರೆ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೂಹಿನಾ (೨೮) ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮೃತ ರೂಹಿನಾ ಮತ್ತು ಚಾಂದ್‌ಪಾಷಾ ಅವರು ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯ ನಂತರ ತುಮಕೂರು ಜಿಲ್ಲೆಯ ತಿಪಟೂರಿನ ಶಾಂತಿನಗರದಲ್ಲಿ ವಾಸವಾಗಿದ್ದರು. ಪತಿ ಚಾಂದ್‌ಪಾಷಾ ಕುಡಿತದ ಚಟಕ್ಕೆ ದಾಸನಾಗಿದ್ದು, ಹಣ ತರುವಂತೆ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದನು ಎಂಬ ಆರೋಪವನ್ನು ರೂಹಿನಾ ಪೋಷಕರು ಮಾಡಿದ್ದಾರೆ.

ಡಿಸೆಂಬರ್ 31ರಂದು ಕುಡಿದು ಮನೆಗೆ ಬಂದ ಚಾಂದ್‌ಪಾಷಾ ಪತ್ನಿಯ ಕುತ್ತಿಗೆಗೆ ನೇಣು ಬಿಗಿದು ಕೊಲೆ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ರೂಹಿನಾವನ್ನು ಪೋಷಕರು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಹಿಮ್ಸ್‌ನಲ್ಲಿ ನಡೆಸಿದ ನಂತರ ಮೃತದೇಹವನ್ನು ಪೋಷಕರು ಕೊಂಡೊಯ್ದಿದ್ದಾರೆ. ರೂಹಿನಾ ಮೂಲತಃ ತುಮಕೂರು ಜಿಲ್ಲೆಯ ತಿಪಟೂರಿನ ನಿವಾಸಿಯಾಗಿದ್ದು, ಚಾಂದ್‌ಪಾಷಾ ತುಮಕೂರು ಜಿಲ್ಲೆಯ ಕುನ್ನಾಲ್ ಗ್ರಾಮದವರು ಎಂದು ತಿಳಿದುಬಂದಿದೆ. ಈ ಘಟನೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ರೂಹಿನಾ ಪೋಷಕರ ದೂರಿನ ಆಧಾರದ ಮೇಲೆ ಪತಿ ಚಾಂದ್ ಪಾಷಾ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆ ಸಾವು ಹಾಗೂ ಗೃಹಹಿಂಸೆ ಆರೋಪ ಪ್ರಕರಣವು ಸ್ಥಳೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.