ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಸೊಸೆಯ ಕಾಟದಿಂದ ಬೇಸತ್ತ ಅತ್ತೆಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರತ್ಯೇಕ ವಾಸಕ್ಕೆ ಒತ್ತಾಯಿಸುತ್ತಿದ್ದ ಸೊಸೆಯ ಮಾನಸಿಕ ಹಿಂಸೆಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತುಮಕೂರು: ಸೊಸೆ ಕಾಟಕ್ಕೆ ಬೇಸತ್ತ ಅತ್ತೆಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ನಡೆದಿದೆ. ಅತ್ತೆಯ ಆತ್ಮ*ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಸೊಸೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತ ಮಹಿಳೆಯನ್ನು ಭ್ರಮರಾಂಭಿಕೆ (60) ಎಂದು ಗುರುತಿಸಲಾಗಿದೆ. ಬುಧವಾರ ಬೆಳಗಿನ ಜಾವ ಅನುಮಾನಾಸ್ಪದ ಸ್ಥಿತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಪ್ರಕರಣವು ಕೊಲೆಯೆಂಬ ಅನುಮಾನಕ್ಕೂ ಕಾರಣವಾಗಿತ್ತು.

ಗ್ರಾಮದ ತೋಟದ ಮನೆಯಲ್ಲಿದ್ದ ಪಂಪ್ ಹೌಸ್‌ನಲ್ಲಿ, ಫಾರ್ಮ್ ಹೌಸ್‌ನಿಂದ ಸುಮಾರು 200 ಮೀಟರ್ ದೂರದಲ್ಲಿ, ಭ್ರಮರಾಂಭಿಕೆ ಅವರ ಮೃತದೇಹ ಪತ್ತೆಯಾಗಿದೆ. ಬೆಳಿಗ್ಗೆ ಪಂಪ್ ಹೌಸ್‌ಗೆ ತೆರಳಿದ ಮಗ ಮನುಕುಮಾರ್, ತಾಯಿಯ ಶವವನ್ನು ಕಂಡು ಬೆಚ್ಚಿಬಿದ್ದು, ತಕ್ಷಣ ಶವವನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿದ್ದಾನೆ. ಬಳಿಕ ಕುಟುಂಬಸ್ಥರು ಚೇಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಚೇಳೂರು ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ, ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿತ್ತು. ಬಳಿಕ ಅದನ್ನು ಪೊಲೀಸರು ಪತ್ತೆ ಮಾಡಿ ಕೊಲೆ ನಡೆದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ ನಡೆಸಿದರು.

ಮಧ್ಯರಾತ್ರಿ ಬಂದು ಸಾವಿಗೆ ಶರಣು

ಪರಿಶೀಲನೆಯ ವೇಳೆ, ಮೃತದೇಹವನ್ನು ನೇಣು ಬಿಗಿದ ಸ್ಥಿತಿಯಿಂದ ಕೆಳಗಿಳಿಸುವಾಗ ಕಣ್ಣಿಗೆ ಗಾಯವಾಗಿದ್ದು, ಆ ಕಾರಣದಿಂದ ಕಣ್ಣಿನ ಭಾಗಕ್ಕೆ ಹಾನಿಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ. ಅಲ್ಲದೆ, ಮಧ್ಯರಾತ್ರಿ ಸುಮಾರು 1:45ರ ವೇಳೆಗೆ ಭ್ರಮರಾಂಭಿಕೆ ಸ್ವತಃ ಪಂಪ್ ಹೌಸ್‌ಗೆ ನಡೆದುಕೊಂಡು ಬಂದು ಆತ್ಮ*ಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಸೊಸೆಯಿಂದ ಹಿಂಸೆ ಅತ್ತೆಗೆ ಚಿಂತೆ

ಈ ನಡುವೆ, ಭ್ರಮರಾಂಭಿಕೆ ಅವರ ಸಾವಿಗೆ ಸೊಸೆ ಕಾವ್ಯಶ್ರೀ ಕಾರಣ ಎಂಬ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ. ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ವಾಸಿಸಲು ಬಯಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಅಡುಗೆ ಸೇರಿದಂತೆ ಎಲ್ಲಾ ಕೆಲಸವನ್ನು ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದು, ತನ್ನ ಗಂಡನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕುತ್ತಿದ್ದಳೆಂಬ ಆರೋಪವೂ ಕೇಳಿಬಂದಿದೆ. ಸೊಸೆಯ ಈ ವರ್ತನೆ ಹಾಗೂ ಮಾತುಗಳಿಂದ ಮನನೊಂದಿದ್ದ ಭ್ರಮರಾಂಭಿಕೆ, ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ, ಮೃತರ ಮಗನ ದೂರಿನ ಮೇರೆಗೆ ಸೊಸೆ ಕಾವ್ಯಶ್ರೀ ವಿರುದ್ಧ ಆತ್ಮ*ಹತ್ಯೆಗೆ ಪ್ರೇರಣೆ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣವನ್ನು ಚೇಳೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಬೇಕಿದೆ.