- Home
- Karnataka Districts
- ಚಿಕ್ಕೋಡಿ: ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ
ಚಿಕ್ಕೋಡಿ: ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ, ತಂದೆಯೊಬ್ಬ ಮಗನನ್ನು ಕೊಂದು ಹೃದಯಾಘಾತವೆಂದು ನಾಟಕವಾಡಿದ್ದಾನೆ. ಮಗನ ಸ್ನೇಹಿತರಿಗೆ ಅಂತ್ಯಸಂಸ್ಕಾರದ ವೇಳೆ ಅನುಮಾನ ಮೂಡಿ ತನಿಖೆ ನಡೆಸಿದಾಗ, ಈ ಭೀಕರ ಕೊಲೆ ರಹಸ್ಯ ಬಯಲಾಗಿದ್ದು, ಪೊಲೀಸರು ತಂದೆ ಹಾಗೂ ಆತನ ಸಹಚರನನ್ನು ಬಂಧಿಸಿದ್ದಾರೆ.

ಸ್ನೇಹಿತರ ಶಂಕೆಯಿಂದ ಬಯಲಾದ ಭೀಕರ ಕೊಲೆ ರಹಸ್ಯ
ಚಿಕ್ಕೋಡಿ: ತಂದೆಯೇ ಸ್ವಂತ ಮಗನನ್ನು ಕೊಲೆ ಮಾಡಿ, ಹೃದಯಾಘಾತವೆಂದು ನಾಟಕವಾಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಮಗನ ಸ್ನೇಹಿತರಿಗೆ ಬಂದ ಅನುಮಾನದಿಂದ ತನಿಖೆ ನಡೆಸಿದಾಗ ಈ ಭೀಕರ ಕೊಲೆ ರಹಸ್ಯ ಬಯಲಾಗಿದ್ದು, ಇದೀಗ ತಂದೆ ಹಾಗೂ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ಈ ಘಟನೆ ನಡೆದಿದ್ದೆ. ಕೊಲೆಯಾದವನ ಹೆಸರು 31 ವರ್ಷದ ಕಿರಣ ಆಲೂರೆ. ಸ್ವಂತ ಮಗನನ್ನು ಕೊಲೆ ಮಾಡಿದ ಆರೋಪಿ ತಂದೆ ಹೆಸರು ನಿಜಗುಣಿ ಆಲೂರೆ. ಈ ಕೃತ್ಯಕ್ಕೆ ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾ ಕೂಡ ಕೈಜೋಡಿಸಿದ್ದಾನೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಕುತ್ತಿಗೆಗೆ ವೈಯರ್ ಬಿಗಿದು ಕೊಲೆ
ಕಳೆದ ಸೋಮವಾರ ಮಧ್ಯಾಹ್ನ ಕಿರಣನನ್ನು ಕುತ್ತಿಗೆಗೆ ವೈಯರ್ ಬಿಗಿದು ಕೊಲೆ ಮಾಡಲಾಗಿದೆ. ಕೊಲೆಯ ನಂತರ, ಕಿರಣ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ ತಂದೆ, ತನ್ನ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿದ್ದ. ಘಟನೆ ನಡೆದ ದಿನವೇ ನಿಜಗುಣಿ ತನ್ನ ಮಗನ ಸ್ನೇಹಿತರಿಗೆ ತರಾತುರಿಯಾಗಿ ಕರೆ ಮಾಡಿ, ಕಿರಣ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ. ಅದೇ ದಿನ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮೃತದೇಹವನ್ನು ತಂದು, ಹಿಂದೂ ಸಂಪ್ರದಾಯದಂತೆ ಹೂಳುವ ಬದಲು ಸುಡಲು ಮುಂದಾಗಿದ್ದಾನೆ.
ಶವಸಂಸ್ಕಾರ ಹುಟ್ಟಿಸಿದ ಅನುಮಾನ
ತಂದೆಯ ಈ ಆತುರದ ನಡೆ ಕಿರಣನ ಸ್ನೇಹಿತರಲ್ಲಿ ತೀವ್ರ ಅನುಮಾನ ಹುಟ್ಟಿಸಿತು. ಮೃತದೇಹವನ್ನು ಪರಿಶೀಲಿಸಿದಾಗ, ಕಿರಣನ ಕುತ್ತಿಗೆ ಬಳಿ ಗಾಯದ ಗುರುತುಗಳು ಹಾಗೂ ಕಿವಿಯಲ್ಲಿ ರಕ್ತ ಕಂಡುಬಂದಿತ್ತು. ಇದರಿಂದ ಸಾವಿನ ಕುರಿತು ಗಂಭೀರ ಶಂಕೆ ಮೂಡಿತು. ಈ ಹಿನ್ನೆಲೆಯಲ್ಲಿ ಕಿರಣನ ಸ್ನೇಹಿತರಾದ ಉದಯ ವಾಗಮರೆ ಹಾಗೂ ಜೀವನ ಮಾಂಜರೆಕರ ಸೇರಿದಂತೆ ಇತರರು, ಸಾವಿನ ಹಿನ್ನೆಲೆ ತನಿಖೆ ಆರಂಭಿಸಿದರು.
ಹಣಕಾಸಿನ ವಿಚಾರದಲ್ಲಿ ತಂದೆ–ಮಗನ ನಡುವೆ ಗಲಾಟೆ
ತನಿಖೆಯಲ್ಲಿ ತಿಳಿದುಬಂದಂತೆ, ಕಿರಣ ಹಲವು ದಿನಗಳಿಂದ ಮದ್ಯಪಾನ ಹಾಗೂ ಗಾಂಜಾ ನಶೆಯ ಚಟಕ್ಕೆ ಒಳಗಾಗಿದ್ದ. ಈ ಕಾರಣದಿಂದಾಗಿ ಮನೆಯಲ್ಲಿ ಹಣಕಾಸಿನ ವಿಚಾರವಾಗಿ ತಂದೆ ನಿಜಗುಣಿಯೊಂದಿಗೆ ಪದೇಪದೇ ಜಗಳವಾಡುತ್ತಿದ್ದ. ಈ ಗಲಾಟೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಹೋಟೆಲ್ ಮಾಲಿಕನ ವಿಚಾರಣೆಯಿಂದ ಸತ್ಯ ಬಹಿರಂಗ
ಸ್ನೇಹಿತರು ತನಿಖೆಯ ವೇಳೆ ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲಿಕ ಉಸ್ಮಾನ ಮುಲ್ಲಾನನ್ನು ವಿಚಾರಣೆಗೆ ಒಳಪಡಿಸಿದರು. ಆತನ ಮೇಲೆ ಒತ್ತಡ ಹಾಕಿ ವಿಚಾರಣೆ ನಡೆಸಿದಾಗ, ಕೊಲೆ ಪ್ರಕರಣದ ಸತ್ಯ ಹೊರಬಂದಿದೆ. ಉಸ್ಮಾನ ನೀಡಿದ ಮಾಹಿತಿಯ ಆಧಾರದಲ್ಲಿ, ಕಿರಣನ ತಂದೆ ನಿಜಗುಣಿಯನ್ನು ಸ್ಮಶಾನಕ್ಕೆ ಕರೆಸಿ ಸ್ನೇಹಿತರು ಪ್ರಶ್ನಿಸಿದ್ದಾರೆ. ಗಂಭೀರ ವಿಚಾರಣೆ ವೇಳೆ ನಿಜಗುಣಿ, ಮಗನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರಿಗೆ ಮಾಹಿತಿ, ಆರೋಪಿಗಳು ವಶಕ್ಕೆ
ತಕ್ಷಣವೇ ಕಿರಣನ ಸ್ನೇಹಿತರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿ ತಂದೆ ನಿಜಗುಣಿ ಆಲೂರೆ ಹಾಗೂ ಸಹ ಆರೋಪಿ ಉಸ್ಮಾನ ಮುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕೋಡಿ ಪೊಲೀಸರು, ಕೊಲೆಯ ನಿಖರ ಹಿನ್ನೆಲೆ, ಉದ್ದೇಶ ಹಾಗೂ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

