ಮಕ್ಕಳು ಆನ್‌ಲೈನ್‌ ಪಾಠ ಕೇಳಬೇಕಾದರೆ ನದಿ ತಟಕ್ಕೆ ಹೋಗಲೇ ಬೇಕು ಆಫ್‌ಲೈನ್‌ ಪಾಠಗಳ ಡೌನ್‌ ಲೋಡ್‌ ಗೂ ನದಿ ತಟವೇ ಗತಿ ಹೋಮ್‌ ವರ್ಕ್ ಕಳುಹಿಸಬೇಕಾದರೆ ನದಿ ತಟದಲ್ಲೇ ಒಂದಷ್ಟುಹೊತ್ತು ಕಳೆಯಲೇಬೇಕು

ವರದಿ : ಮೌನೇಶ್‌ ವಿಶ್ವಕರ್ಮ

 ಬಂಟ್ವಾಳ (ಜು.06):  ಈ ಊರ ಮಕ್ಕಳು ಆನ್‌ಲೈನ್‌ ಪಾಠ ಕೇಳಬೇಕಾದರೆ ನದಿ ತಟಕ್ಕೆ ಹೋಗಲೇ ಬೇಕು, ಆಫ್‌ಲೈನ್‌ ಪಾಠಗಳ ಡೌನ್‌ ಲೋಡ್‌ ಗೂ ನದಿ ತಟವೇ ಗತಿ, ಹೋಮ್‌ ವರ್ಕ್ ಕಳುಹಿಸಬೇಕಾದರೆ ನದಿ ತಟದಲ್ಲೇ ಒಂದಷ್ಟುಹೊತ್ತು ಕಳೆಯಲೇಬೇಕು.

ಅಂದ ಹಾಗೆ ಇದು ಯಾವುದೋ ಕುಗ್ರಾಮದ ಕಥೆಯಲ್ಲ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಚೆಂಡ್ತಿಮಾರ್‌-ಮಣಿಹಳ್ಳ ಪರಿಸರದ ಮಕ್ಕಳ ವ್ಯಥೆ.

ಬಂಟ್ವಾಳ ತಾಲೂಕಿನ ಚೆಂಡ್ತಿಮಾರ್‌ ಮತ್ತು ಮಣಿಹಳ್ಳ ಪರಿಸರ ವ್ಯಾಪ್ತಿಯಲ್ಲಿ ವಾಸಿಸುವ ಜನರು ನೆಟ್‌ ವರ್ಕ್ ಸಮಸ್ಯೆ ಅನುಭವಿಸುತ್ತಿದ್ದು, ಆನ್‌ಲೈನ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಡು ಅಯ್ಯೋ ಎನ್ನುವಂತಿದೆ.

ಗ್ರಾಮೀಣ ಮಕ್ಕಳಿಗೆ ಮೊಬೈಲ್ ಇಲ್ಲ; ಆನ್‌ಲೈನ್ ಶಿಕ್ಷಣವೂ ಸಿಗುತ್ತಿಲ್ಲ: ಸಮೀಕ್ಷಾ ವರದಿ! ...

ಈ ಪರಿಸರದ ಆಸುಪಾಸಿನಲ್ಲಿ ಸುಮಾರು 250 ಮನೆಗಳಿದ್ದು ಸಾವಿರಕ್ಕಿಂತಲೂ ಹೆಚ್ಚು ಜನ ವಾಸ್ತವ್ಯವಿದ್ದಾರೆ. ಆದರೆ ಇಲ್ಲಿ ಕಾಡುತ್ತಿರುವ ನೆಟ್‌ವರ್ಕ್ ಸಮಸ್ಯೆಯಿಂದ ಕರೆ ಮಾಡಬೇಕಾದರೆ ಮನೆಯಿಂದ ಹೊರಬರಬೇಕು. ಇಂಟರ್ನೆಟ್‌ ಕೆಲಸಮಾಡಬೇಕಾದರೆ ಮನೆಯ ಟೆರೇಸ್‌ ಹತ್ತಬೇಕು. ಇಲ್ಲವೇ ಸಮೀಪದ ನೇತ್ರಾವತಿ ನದಿ ತಟಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೆ ತಲೆನೋವು: ಕಳೆದ ಕೆಲವು ದಿನಗಳಿಂದ ಆನ್‌ಲೈನ್‌ ತರಗತಿಗಳು ಆರಂಭಗೊಂಡಿದ್ದು, ನೆಟ್‌ವರ್ಕ್ ಅರಸಿಕೊಂಡು ಇಲ್ಲಿನ ನದಿ ತಟಕ್ಕೆ ಬರುವ ಮಕ್ಕಳಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಫ್‌ಲೈನ್‌ ರೂಪದ ಪಾಠದ ಬಳಿಕ ಕಳುಹಿಸಿಕೊಡುವ ಹೋಂ ವರ್ಕ್ಗಳನ್ನು ಡೌನ್‌ ಲೋಡ್‌ ಮಾಡಲು, ಮಾಡಿದ ಹೋಮ್‌ ವರ್ಕ್ಗಳನ್ನು ಶಾಲೆಗೆ ಕಳುಹಿಸಲೂ ನದಿ ತಟವೇ ಬೇಕು ಎನ್ನುವಂತಿದ್ದರೆ, ಮಕ್ಕಳ ಜೊತೆಗೆ ಹೆತ್ತವರೂ ಬರಲೇಬೇಕಾದ ಸ್ಥಿತಿಯೂ ಇಲ್ಲಿದೆ. ಕೆಲವೊಮ್ಮೆ ಇಲ್ಲಿಯೂ ಉಂಟಾಗುವ ನೆಟ್‌ವರ್ಕ್ ಸಮಸ್ಯೆ ಹಲವು ಬಾರಿ ಆನ್‌ಲೈನ್‌ನಲ್ಲಿ ಮಕ್ಕಳ ಹಾಜರಾತಿಗೂ ಸಮಸ್ಯೆ ತಂದುಕೊಟ್ಟಿದೆ ಎನ್ನುತ್ತಾರೆ ಪೋಷಕಿ ಶಾಂತಲಾ.

ಗದಗ: ನೆಟ್‌ವರ್ಕ್‌ ಸಮಸ್ಯೆ, ಸರಿಯಾಗಿ ಪಾಠ ಕೇಳಲಾಗದೆ SSLC ವಿದ್ಯಾರ್ಥಿಗಳ ಪರದಾಟ ...

ವಿದ್ಯಾರ್ಥಿಗಳು ಮಳೆಗಾಲದಲ್ಲಿ ರಸ್ತೆ ಬದಿಗೆ ಬಂದು ನಿಂತು ಅಥವಾ ಟೆರೇಸ್‌ನ ಮೇಲೆ ಹೋಗಿ ಆನ್‌ ಲೈನ್‌ ತರಗತಿಗಳಿಗೆ ಹಾಜರಾಗುವುದು ಕಷ್ಟದ ಮಾತು. ಕೊರೋನದಿಂದ ಈಗಾಗಲೇ ತರಗತಿಗಳು ಚುಟುಕಾಗಿದ್ದು ನೆಟ್‌ವರ್ಕ್ ಸಮಸ್ಯೆಯು ಈ ಪ್ರದೇಶದ ವಿದ್ಯಾರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಳೆಯ ಸಂದರ್ಭದಲ್ಲಿ ಕೊಡೆ ಹಿಡಿದುಕೊಂಡು ನೆಟ್‌ವರ್ಕ್ ಹುಡುಕಿಕೊಂಡು ಹೋಗುವುದು ಕಷ್ಟವಾಗುತ್ತದೆ ಎನ್ನುತ್ತಾಳೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸುಪ್ರಿಯಾ.

ನಗರಪ್ರದೇಶಕ್ಕೆ ಹತ್ತಿರವಿದ್ದರೂ ಇಲ್ಲಿನವರನ್ನು ಕಾಡುತ್ತಿರುವ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ.

ಹೋಂ ವರ್ಕ್ ನಾವು ಮಾಡಿದ್ರೂ ಕಳಿಸ್ಲಿಕ್ಕೆ ಕಷ್ಟಆಗ್ತದೆ, ಇಲ್ಲಿ ಬಂದು ಕಳಿಸ್ಬೇಕಾದ್ರೆ ಅಮ್ಮನೂ ಜೊತೆಗೆ ಬರಬೇಕಾಗ್ತದೆ.

 ದಿಶಾಂತ್‌ 4ನೇ ತರಗತಿ

ಪ್ರತಿನಿತ್ಯ ಮಕ್ಕಳ ಆನ್‌ಲೈನ್‌ ಪಾಠ ಕೇಳಿಸುವುದೇ ಕಷ್ಟವಾಗುತ್ತಿದೆ. ಮಂಗಳವಾರ ಕರೆಂಟ್‌ ಇಲ್ಲ. ಚಂದನ ವಾಹಿನಿಯ ಪಾಠ ವನ್ನೂ ನದಿತಟಕ್ಕೆ ಬಂದು ಮೊಬೈಲ್‌ನಲ್ಲಿ ಕೇಳ್ಬೇಕಾಗ್ತದೆ.

-ರಮ್ಯ, ಪೋಷಕರು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona