ಅರಳದಿನ್ನಿ ಗ್ರಾಮದಲ್ಲಿ ಮೈಕೈ ಬೇನೆ, ಜ್ವರ ಸೇರಿದಂತೆ ನಾನಾ ರೋಗ ಲಕ್ಷಣಗಳು

ಗಂಗಾಧರ ಹಿರೇಮಠ

ಆಲಮಟ್ಟಿ(ಅ.15): ಕೃಷ್ಣಾ ತೀರದ ಅರಳದಿನ್ನಿ ಗ್ರಾಮದಲ್ಲಿ ಶಂಕಿತ ಚಿಕೂನ್‌ ಗುನ್ಯಾ ರೋಗ ಉಲ್ಬಣಗೊಂಡಿದ್ದು, ಗ್ರಾಮದ 80ಕ್ಕೂ ಅಧಿಕ ರೋಗಿಗಳು ಈ ರೋಗದಿಂದ ಬಳಲುತ್ತಿದ್ದಾರೆ. ಶೌಚಕ್ಕೂ ಹೋಗದಷ್ಟು ಮೈಕೈ ಬೇನೆ, ಜ್ವರ ಸೇರಿದಂತೆ ನಾನಾ ರೋಗ ಲಕ್ಷಣಗಳಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಗ್ರಾಮದಲ್ಲಿ ಡೆಂಘೀ, ಮಲೇರಿಯಾ, ಚಿಕೂನ್‌ ಗುನ್ಯಾ, ವಾಂತಿ ಬೇಧಿ ಸೇರಿದಂತೆ ನಾನಾ ರೀತಿಯ ರೋಗಗಳಿಂದ ಪ್ರತಿ ವರ್ಷವೂ ಗ್ರಾಮದ ಬಹುತೇಕ ಜನ ಈ ರೋಗದಿಂದ ಬಳಲುತ್ತಾರೆ.

ಅಸ್ವಚ್ಛತೆ:

ಗ್ರಾಮದ ತುಂಬಾ ಕಣ್ಣಾಡಿಸಿದಾಗ ಕಂಡು ಬರುವ ತಿಪ್ಪೆಗುಂಡಿಗಳು, ನಾನಾ ಕಡೆ ನಿಂತ ಮಳೆ ನೀರು, ಬಯಲು ಶೌಚ, ಕೆಟ್ಟಶುದ್ಧ ಕುಡಿಯುವ ನೀರಿನ ಘಟಕಗಳು ಕಂಡು ಬರುತ್ತವೆ. ನದಿ ತೀರದಲ್ಲಿರುವುದರಿಂದ ಸೊಳ್ಳೆಗಳ ಕಾಟವೂ ಹೆಚ್ಚು. ಗ್ರಾಮ ಇಕ್ಕಟ್ಟಾಗಿದ್ದು, ವೈಯಕ್ತಿಕ ಶೌಚಾಲಯ ಇಲ್ಲದಿರುವುದು, ಬಯಲು ಶೌಚವನ್ನೇ ಅವಲಂಬಿಸಬೇಕಿದೆ. ಹೀಗಾಗಿ ಗ್ರಾಮದಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಮಳೆಯ ಕಾರಣ ಹೊಲ, ಗದ್ದೆಗಳಲ್ಲಿ ವ್ಯಾಪಕ ನೀರು ನಿಲ್ಲುತ್ತದೆ, ಜತೆಗೆ ಪಕ್ಕದಲ್ಲಿಯೇ ಕೃಷ್ಣೆ ಹರಿಯುತ್ತಿದ್ದು, ಅದರಿಂದಲೂ ನೀರು, ಅಂತರಜಲ ಹೆಚ್ಚುತ್ತದೆ. ಹೀಗಾಗಿ ಪ್ರತಿ ವರ್ಷವೂ ಇಲ್ಲಿ ಸಾಂಕ್ರಾಮಿಕ ರೀತಿಯಲ್ಲಿ ರೋಗ ಉಲ್ಬಣಗೊಳ್ಳುವುದು ಸಾಮಾನ್ಯವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡೆಂಘೀ 216, ಚಿಕನ್‌ ಗುನ್ಯಾ 14 ಕೇಸ್‌, ಹೆಚ್ಚಿದ ಆತಂಕ

ಚಿಕೂನ್‌ ಗುನ್ಯಾ:

ಕಳೆದ 15 ದಿನಗಳಿಂದ ಗ್ರಾಮದ ಬಹುತೇಕ ಕುಟುಂಬಗಳಲ್ಲಿ ಒಂದಿಬ್ಬರೂ ಈ ರೀತಿ ಮೈಕೈ ಬೇನೆಯಿಂದ ಬಳಲುವುದು ಸಾಮಾನ್ಯವಾಗಿದೆ. ಆಲಮಟ್ಟಿ, ನಿಡಗುಂದಿಯ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ. ಬಹುತೇಕ ಜನರು ಖಾಸಗಿ ಆಸ್ಪತ್ರೆಗೆ ತೆರಳಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಶಂಕಿತ ಡೆಂಗೆಯಿಂದ ಬಾಗಲಕೋಟೆ ಸೇರಿದಂತೆ ನಾನಾ ಕಡೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ ಜ್ವರ, ಕೈಕಾಲು ನೋವಿನಿಂದ ಮೇಲೆ ಏಳಲು ಆಗದೆ ಹಾಸಿಗೆ ಹಿಡಿದಿದ್ದಾರೆ. ವೃದ್ಧರು, ಮಕ್ಕಳು, ಮಹಿಳೆಯರಿಗೆ ಈ ಕಾಯಿಲೆ ಬಂದಿದೆ. ಕೆಲ ಮನೆಯಲ್ಲಿ ಎರಡ್ಮೂರು ಜನರಿಗೆ ರೋಗ ಆವರಿಸಿಕೊಂಡಿದ್ದರಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದು ಅಲ್ಲಲ್ಲಿ ಚರಂಡಿಗಳು ತುಂಬಿಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿವೆ ಜತೆಗೆ ಗಬ್ಬು ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮನೆ ಮನೆ ತೆರಳಿ ಲಾರ್ವಾ ಸಮೀಕ್ಷೆ, ಆರೋಗ್ಯ ತಪಾಸಣೆ, ರಕ್ತದ ಮಾದರಿ ಸಂಗ್ರಹ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಆರೋಗ್ಯದ ಬಗ್ಗೆ ತಿಳುವಳಿಕೆಯನ್ನು ನೀಡುತ್ತಿದ್ದಾರೆ. ಆದರೆ ರೋಗ ಮಾತ್ರ ದಿನೇ ದಿನೇ ಉಲ್ಬಣವಾಗುತ್ತಿದೆ.

ಗ್ರಾಮಸ್ಥರು ಜಲ ಸಂಗ್ರಹಾರಕ್ಕಾಗಿ ಬಳಸುವ ಬ್ಯಾರಲ್‌, ನೀರಿನ ತೊಟ್ಟಿಯಲ್ಲಿ ಲಾರ್ವಾ ಕಂಡು ಬರುತ್ತಿದೆ. ವಾರಕ್ಕೊಮ್ಮೆಯಾದರೂ ನೀರಿನ ತೊಟ್ಟಿಖಾಲಿ ಮಾಡಿ ಒಣಗಿಸಿ ಭರ್ತಿ ಮಾಡಬೇಕಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.

ಧಾರವಾಡ: ಹೆಚ್ಚಿದ ಡೆಂಘೀ, ಚಿಕೂನ್‌ಗುನ್ಯಾ, ಸಾಂಕ್ರಾಮಿಕ ರೋಗ ಭೀತಿ

ಗ್ರಾಮದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯತಿ ಅ​ಧಿಕಾರಿಗಳು ಶುಕ್ರವಾರದವರೆಗೂ ಫಾಗಿಂಗ್‌ ಆರಂಭಿಸಿಲ್ಲ. ಕನಿಷ್ಠ ಪಕ್ಷ ಐದು ಬಾರಿಯಾದರೂ ಅಗತ್ಯ ಪ್ರಮಾಣದ ಔಷಧಿ ಹಾಕಿ ವೈಜ್ಞಾನಿಕವಾಗಿ ಫಾಗಿಂಗ್‌ ಮಾಡಬೇಕಿದೆ.
ಚರಂಡಿಗಳನ್ನು ಸ್ವಚ್ಛತೆ ಮಾಡದ ಕಾರಣ ಸೊಳ್ಳೆಗಳು ಹೆಚ್ಚಾಗಿವೆ. ರಾತ್ರಿಯಾದ್ರೆ ಸಾಕು ದಾಳಿ ಮಾಡುತ್ತಿವೆ. ಇದರಿಂದ ಸಾಂಕ್ರಾಮಿಕ ಕಾಯಿಲೆ ಬರುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸುವ ಜನ ಹಾಸಿಗೆ ಹಿಡದಿದ್ದಾರೆ. ಸಂಬಂಧಿತರು ಎಚ್ಚೆತ್ತುಕೊಂಡು ಜನರ ಆರೋಗ್ಯ ಕಾಪಾಡಬೇಕು ಎಂದು ಗ್ರಾಮಸ್ಥರ ಆಗ್ರಹ.

ಆಲಮಟ್ಟಿ ಗ್ರಾಮ ಪಂಚಾಯತಿ ವತಿಯಿಂದ ಅರಳದಿನ್ನಿ ಗ್ರಾಮದ ನಾನಾ ಕಡೆ ನೀರು ನಿಲ್ಲದಂತೆ, ಚರಂಡಿ ಸ್ವಚ್ಛತೆ ಮಾಡಲಾಗಿದೆ. ಅಲ್ಲಿನ ಕುಡಿಯುವ ನೀರಿನ ಜಲಸಂಗ್ರಹಾರವನ್ನು ಖಾಲಿ ಮಾಡಿಸಿ ಸ್ವಚ್ಛಗೊಳಿಸಲಾಗಿದೆ, ನಾನಾ ಕಡೆ ರಾಸಾಯನಿಕ ಪೌಡರ್‌ ಸಿಂಪಡಿಸಲಾಗುತ್ತಿದೆ ಅಂತ ಆಲಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಹಿರೇಮಠ ತಿಳಿಸಿದ್ದಾರೆ.