ಧಾರವಾಡ: ಹೆಚ್ಚಿದ ಡೆಂಘೀ, ಚಿಕೂನ್‌ಗುನ್ಯಾ, ಸಾಂಕ್ರಾಮಿಕ ರೋಗ ಭೀತಿ
ಜನವರಿಗೆ ಹೋಲಿಸಿದರೆ ಐದು ಪಟ್ಟು ಸಾಂಕ್ರಾಮಿಕ ರೋಗ ಹೆಚ್ಚಳ
ಮಯೂರ ಹೆಗಡೆ
ಹುಬ್ಬಳ್ಳಿ(ಆ.10): ಕಳೆದ ಹದಿನೈದು ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಾಂಕ್ರಾಮಿಕ, ಸಾಮಾನ್ಯ ಜ್ವರದ ಪ್ರಕರಣಗಳು ಹೆಚ್ಚಿವೆ. ಜನವರಿಗೆ ಹೋಲಿಸಿದರೆ ಕಳೆದೊಂದು ತಿಂಗಳಲ್ಲಿ ಡೆಂಘೀ, ಚಿಕೂನ್‌ಗುನ್ಯಾದಿಂದ ಬಳಲಿ ಕಿಮ್ಸ್‌ನಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಐದಾರು ಪಟ್ಟು ಹೆಚ್ಚಿದೆ. ಕಳೆದ ಜನವರಿಯಿಂದ ಇಲ್ಲಿವರೆಗೆ 118 ಹಾಗೂ 75 ಚಿಕೂನ್‌ಗುನ್ಯಾ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ 42 ಡೆಂಘೀ, 28 ಚಿಕೂನ್‌ಗುನ್ಯಾ ಪತ್ತೆಯಾಗಿದೆ. ಮಲೇರಿಯಾ ಜ್ವರದ ಪ್ರಕರಣ ದಾಖಲಾಗಿಲ್ಲ. ಕಿಮ್ಸ್‌ನಲ್ಲಿ ಡೆಂಘೀ ಜ್ವರದಿಂದ ದಾಖಲಾಗುವವರ ಸಂಖ್ಯೆ ವಿಪರೀತವಾಗಿದ್ದು, ಇತರ ಜಿಲ್ಲೆಗಳ ರೋಗಿಗಳು ಕೂಡ ಸೇರಿದ್ದಾರೆ. ಗ್ರಾಮೀಣ ಹಾಗೂ ನಗರದ ಸ್ಲಂ ಪ್ರದೇಶದಲ್ಲಿ ಹೆಚ್ಚಾಗಿ ಸಾಂಕ್ರಾಮಿಕ ರೋಗ ಕಂಡುಬಂದಿದೆ. ಜತೆಗೆ ನೆಗಡಿ, ತಲೆನೋವು, ಸಾಮಾನ್ಯ ಥಂಡಿ ಜ್ವರದಿಂದ ಬಳಲುವವರು ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ.
ಕಿಮ್ಸ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಈಶ್ವರ ಹಸಬಿ, ‘ಕಳೆದ ಜನವರಿಗೆ ಹೋಲಿಕೆ ಮಾಡಿದರೆ ಈಗ ಕಿಮ್ಸ್‌ಗೆ ಸಾಂಕ್ರಾಮಿಕ ರೋಗದಿಂದ ದಾಖಲಾಗುತ್ತಿರುವವರ ಸಂಖ್ಯೆ ಐದಾರು ಪಟ್ಟು ಹೆಚ್ಚಿದೆ. ಕಳೆದ ಎರಡು ವರ್ಷದಂತೆ ಮಳೆಗಾಲದಲ್ಲಿ ಈ ಪ್ರಮಾಣ ಮುಂದುವರಿದಿದೆ. ಡೆಂಘೀ ಶಾಕ್ ಫೀವರ್ ಸೇರಿ ಕಡಿಮೆ ಪ್ಲೆಟ್‌ಲೆಟ್, ಕಡಿಮೆ ರಕ್ತದೊತ್ತಡ, ನಿರ್ಜಲಿಕರಣ ಹೆಚ್ಚಿದ್ದರೆ ದಾಖಲು ಮಾಡಿಕೊಳ್ಳುತ್ತಿದ್ದೇವೆ. ಸಣ್ಣಪುಟ್ಟಜ್ವರ ಬಂದರೂ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ಎಂದರು.
DHARWAD; ಮುಂಗಾರು ಮಳೆ 89 ಸಾವಿರ ಹೆಕ್ಟೇರ್ ಕೃಷಿ ಬೆಳೆ ಹಾನಿ
ಮಹಾನಗರದಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಸೊಳ್ಳೆ ನಿಯಂತ್ರಿಸಲು ವಿಶೇಷ ಕ್ರಮ ವಹಿಸಿದ್ದೇವೆ. ಹೊಸದಾಗಿ 10 ಫಾಗಿಂಗ್ ಮಷಿನ್ ಖರೀದಿ ಮಾಡಲಾಗಿದೆ. ಎಲ್ಲ 82 ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಅಲ್ಲದೆ, ಡೆಂಘೀ, ಚಿಕೂನ್‌ಗುನ್ಯಾ ಸೇರಿ ಇತರೆ ಸಾಂಕ್ರಾಮಿಕ ರೋಗ ತಡೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ತಿಳಿಸಿದರು.
ಕೊರೋನಾ ಹೆಚ್ಚಳ:
ಇನ್ನು ಕೊರೋನಾ ಪ್ರಕರಣ ಕೂಡ ಹೆಚ್ಚಳವಾಗಿದೆ. ಭಾನುವಾರ 113, ಸೋಮವಾರ ..... ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ನೆಗಡಿ, ಜ್ವರ ಪ್ರಕರಣಕ್ಕಷ್ಟೇ ಕೋವಿಡ್ ಸೀಮಿತವಾಗಿದೆ. ಹೀಗಾಗಿ ಜನತೆ ಕೋವಿಡ್ ಪಾಸಿಟಿವ್ ಬಂದರೂ ಹೆದರುವ ಅಗತ್ಯವಿಲ್ಲ ಎಂದು ಡಿಎಚ್‌ಒ ಡಾ. ಬಿ.ಸಿ. ಕರಿಗೌಡರ ಹೇಳಿದ್ದಾರೆ. ಇನ್ನು ಜಿಲ್ಲೆಯಲ್ಲಿ ಈ ವರೆಗೆ ಮಂಕಿಪಾಕ್ಸ್ ಕಂಡುಬಂದಿಲ್ಲ. ಆದರೆ ಮುಂಜಾಗೃತಾ ಕ್ರಮವಾಗಿ ಕಿಮ್ಸ್‌ನಲ್ಲಿ 4, ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ 2 ಬೆಡ್‌ಗಳನ್ನು ಮೀಸಲಿಟ್ಟಿದ್ದೇವೆ ಎಂದರು. ಸಾಂಕ್ರಾಮಿಕ ರೋಗದ ಜತೆಗೆ ಕೋವಿಡ್ ಪ್ರಕರಣ ಕೂಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಿಮ್ಸ್‌ನಲ್ಲಿ ಇವರ ಚಿಕಿತ್ಸೆಗೆ ಪ್ರತ್ಯೇಕವಾಗಿ ಕ್ರಮ ವಹಿಸಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.
ತಾಕತ್ತಿದ್ದರೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಿಲ್ಲಿಸಿ: ಮುತಾಲಿಕ್
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ಕಡಿಮೆ ಇದೆ. ಡೆಂಘೀ ಹೆಚ್ಚಾಗದಂತೆ ಹಳ್ಳ-ಕೊಳ್ಳಗಳಿಗೆ ಗಪ್ಪುಗಂಬೂಸಿಯಾ ಮೀನು ಬಿಡಲಾಗಿದೆ. ಗ್ರಾಮಗಳಲ್ಲಿ ಮುನ್ನೆಚ್ಚರಿಗೆ ತೆಗೆದುಕೊಳ್ಳಲು ಡಂಗುರ ಸಾರಲಾಗುತ್ತಿದೆ ಅಂತ ಧಾರವಾಡ ಡಿಎಚ್‌ಒ ಡಾ. ಬಿ.ಸಿ. ಕರಿಗೌಡರ ತಿಳಿಸಿದ್ದಾರೆ.
ಮಹಾನಗರದ ಸ್ಲಂ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಿದೆ. ಸೊಳ್ಳೆ ನಿಯಂತ್ರಣಕ್ಕೆ ಎಲ್ಲ ವಾರ್ಡ್‌ನಲ್ಲಿ ಫಾಗಿಂಗ್ ಸೇರಿ ಇತರೆ ಕ್ರಮ ಕೈಗೊಂಡಿದ್ದೇವೆ ಅಂತ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಹೇಳಿದ್ದಾರೆ.