ಚಿಕ್ಕಮಗಳೂರಿನ ಕೊಪ್ಪದಲ್ಲಿ ತಹಶೀಲ್ದಾರ್ ಲಿಖಿತಾ ಮೋಹನ್ ಮತ್ತು ಬಿಜೆಪಿ ಕಾರ್ಯಕರ್ತ ಮಂಜುನಾಥ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಕಠಿಣ ಜಾಮೀನು ಷರತ್ತುಗಳನ್ನು ಪೂರೈಸಲಾಗದ ಕಾರಣ ಮಂಜುನಾಥ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ತಹಶೀಲ್ದಾರ್ ಮೇಲೆ ಅಧಿಕಾರ ದುರುಪಯೋಗ ಆರೋಪ ಮಾಡಲಾಗಿದೆ.

ಚಿಕ್ಕಮಗಳೂರು (ಏ.30): ಕಾಫಿನಾಡು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ತಹಶೀಲ್ದಾರ್ ಮತ್ತು ಬಿಜೆಪಿ ಕಾರ್ಯಕರ್ತನ ನಡುವಿನ 'ಕೋಲ್ಡ್ ವಾರ್' ಈಗ ಬೀದಿಗೆ ಬಂದಿದೆ. ತಹಶೀಲ್ದಾರ್ ಮತ್ತು ಬಿಜೆಪಿ ಕಾರ್ಯಕರ್ತ ಮಂಜುನಾಥ್ ನಡುವಿನ ಹಗ್ಗಜಗ್ಗಾಟ ತಾರಕಕ್ಕೇರಿದ್ದು, ಮಂಜುನಾಥ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದು ಮಲೆನಾಡು ರೈತ ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ.

ಸಂಘರ್ಷದ ಹಿನ್ನೆಲೆ ಏನು?

ಈ ವಿವಾದದ ಕಿಡಿ ಹತ್ತಿದ್ದು ಆರು ತಿಂಗಳ ಹಿಂದೆ. ಕೊಪ್ಪ ತಾಲೂಕಿನ ಹೊಳೆಹೊದ್ದು ಎಂಬಲ್ಲಿನ ಸರ್ಕಾರಿ ಜಾಗದಲ್ಲಿನ ಕಟ್ಟಡ ತೆರವಿಗೆ ತಹಶೀಲ್ದಾರ್ ಲಿಖಿತಾ ಮೋಹನ್ ಅವರು ತೆರಳಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಮತ್ತು ತಹಶೀಲ್ದಾರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ, ತಹಶೀಲ್ದಾರ್ ಅವರು ಸರ್ಕಾರಿ ಜೀಪನ್ನು ಹೊರ ತಾಲೂಕಿನ ರೆಸಾರ್ಟ್‌ವೊಂದಕ್ಕೆ ಕರೆಸಿಕೊಂಡಿದ್ದನ್ನು ಮಂಜುನಾಥ್ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಇದು ತಹಶೀಲ್ದಾರ್ ಮತ್ತು ಮಂಜುನಾಥ್ ನಡುವಿನ ವೈಮನಸ್ಸನ್ನು ಮತ್ತಷ್ಟು ಹೆಚ್ಚಿಸಿತ್ತು.

ಕಾನೂನು ಸಮರ ಮತ್ತು ತಹಶೀಲ್ದಾರ್ ಪಟ್ಟು:

ಈ ಘಟನೆಗಳ ಬೆನ್ನಲ್ಲೇ ತಹಶೀಲ್ದಾರ್ ಲಿಖಿತಾ ಮೋಹನ್ ಅವರು ಮಂಜುನಾಥ್ ವಿರುದ್ಧ ಐಪಿಸಿ ಸೆಕ್ಷನ್ 107ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ದಾಖಲಾದ ಈ ಕೇಸ್‌ನಲ್ಲಿ ಮಂಜುನಾಥ್ ಅವರು ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಅರ್ಜಿ ತಿರಸ್ಕೃತಗೊಂಡಾಗ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಮಂಜುನಾಥ್ ಅವರಿಗೆ ಶ್ಯೂರಿಟಿ (Surety) ನೀಡಿ ಬೇಲ್ ಪಡೆಯುವಂತೆ ಸೂಚಿಸಿತ್ತು.

ಆದರೆ ಅಸಲಿ ಆಟ ಶುರುವಾಗಿದ್ದೇ ಇಲ್ಲಿ. ತಹಶೀಲ್ದಾರ್ ಅವರು ಮಂಜುನಾಥ್ ಅವರಿಗೆ ಜಾಮೀನು ನೀಡಲು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ. 3 ಲಕ್ಷ ರೂಪಾಯಿ ಬಾಂಡ್, ಫ್ಯಾಮಿಲಿ ಬಾಂಡ್ ಜೊತೆಗೆ ಇಬ್ಬರು ಸರ್ಕಾರಿ ನೌಕರರ ಶ್ಯೂರಿಟಿ ನೀಡುವಂತೆ ಸೂಚಿಸಿದ್ದರು. ಮಂಜುನಾಥ್ ಅವರು 3 ಲಕ್ಷ ರೂ. ಹಣ, ತಂದೆಯ ಜಮೀನಿನ ಆರ್‌ಟಿ ಹಾಗೂ ಸಿ-ದರ್ಜೆಯ (C-Grade) ನೌಕರರ ಶ್ಯೂರಿಟಿ ನೀಡಲು ಮುಂದಾದರು. ಆದರೆ ಇದಕ್ಕೆ ಒಪ್ಪದ ತಹಶೀಲ್ದಾರ್ ಲಿಖಿತಾ ಮೋಹನ್, 'ನನಗೆ ಸಿ-ದರ್ಜೆ ನೌಕರರು ಬೇಡ, ಎ-ಗ್ರೇಡ್ (A-Grade) ಅಧಿಕಾರಿಯ ಶ್ಯೂರಿಟಿಯೇ ಬೇಕು' ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕಸ್ಟಡಿಗೆ ಮಂಜುನಾಥ್:

ಎ-ಗ್ರೇಡ್ ಅಧಿಕಾರಿಗಳ ಶ್ಯೂರಿಟಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ತಹಶೀಲ್ದಾರ್ ಅವರು ಮಂಜುನಾಥ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಇದರಿಂದ ಮಂಜುನಾಥ್ ಸದ್ಯ ಜೈಲು ಪಾಲಾಗಿದ್ದಾರೆ. ಈ ಕ್ರಮವು ಈಗ ರೈತ ಸಂಘಟನೆಗಳನ್ನು ಕೆರಳುವಂತೆ ಮಾಡಿದೆ.

ಕೊಪ್ಪದಲ್ಲಿ ರೈತರಿಂದ ಧರಣಿ:

ಮಂಜುನಾಥ್ ವಿರುದ್ಧ ಉದ್ದೇಶಪೂರ್ವಕವಾಗಿ ಕೇಸ್ ದಾಖಲಿಸಲಾಗಿದೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ 'ಮಲೆನಾಡು ರೈತ ಒಕ್ಕೂಟ' ಕೊಪ್ಪ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಆರಂಭಿಸಿದೆ. ತಾಲೂಕು ಮ್ಯಾಜಿಸ್ಟ್ರೇಟ್ ಆಗಿರುವ ತಹಶೀಲ್ದಾರ್ ಅವರು ಆದೇಶದ ಪ್ರತಿಯನ್ನು ನೀಡುತ್ತಿಲ್ಲ, ಮಂಜುನಾಥ್ ಜೈಲಲ್ಲೇ ಇರಲಿ ಎನ್ನುವ ಕಾರಣಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಒಬ್ಬ ಸಾಮಾನ್ಯ ವ್ಯಕ್ತಿಯ ಮೇಲೆ ತಹಶೀಲ್ದಾರ್ ವೈಯಕ್ತಿಕ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಎ-ಗ್ರೇಡ್ ಅಧಿಕಾರಿ ಶ್ಯೂರಿಟಿ ಬೇಕೆಂದು ಕೇಳುವುದು ಯಾವ ನ್ಯಾಯ?' ಎಂದು ಪ್ರತಿಭಟನಾಕಾರರು ಪ್ರಶ್ನಿಸುತ್ತಿದ್ದಾರೆ. ಸದ್ಯ ಕೊಪ್ಪದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಈ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.