ತುಮಕೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಕರ್ನಾಟಕ ಮಾದರಿ'ಯನ್ನು ಶ್ಲಾಘಿಸಿ, 'ಗುಜರಾತ್ ಮಾದರಿ'ಯನ್ನು ಟೀಕಿಸಿದರು. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಶ್ಲಾಘಿಸಿದ ಅವರು, ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ಬೆಲೆ ಏರಿಕೆಯನ್ನು ಖಂಡಿಸಿದರು.

ತುಮಕೂರು (ಮೇ.20): ‘ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಮೂರು ವರ್ಷಗಳ ಸಾಧನಾ ಸಮರ್ಪಣಾ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 35 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೊನ್ನೆಯಷ್ಟೇ ಕೇವಲ ₹2000 ಮನೆ ಬಾಡಿಗೆ ಕಟ್ಟಲಾಗದ ಕಾರಣಕ್ಕೆ ಬಾಡಿಗೆಗಿದ್ದ ಬಡ ಕುಟುಂಬದ 13 ವರ್ಷದ ಮಗಳ ಮೇಲೆ ಮನೆಯ ಮಾಲೀಕ ಅತ್ಯಾ೧ಚಾರ ಎಸಗಿರುವ ಘಟನೆ ನಡೆದಿದೆ. ಇದು ನಿಜವಾದ ಗುಜರಾತ್ ಮಾದರಿ ಎಂದು ವ್ಯಂಗ್ಯವಾಡಿದರು.

ಚುನಾವಣಾ ಪೂರ್ವದಲ್ಲಿ ನಾವು ರಾಜ್ಯದ ಜನತೆಗೆ ನೀಡಿದ್ದ ವಚನದಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದೊಳಗೆ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆಗಳು ನಾಡಿನ ಆರ್ಥಿಕತೆಗೆ ಅಪಾಯವಾಗಲಿವೆ ಎಂಬ ಹಲವರ ಮಾತುಗಳು ಹುಸಿಯಾಗಿ, ಕರ್ನಾಟಕ ಇಂದು ದೇಶದ ತಲಾದಾಯದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಿದೆ. ಕಳೆದ ಮೂರು ವರ್ಷಗಳಲ್ಲಿ ನಾವು ಗ್ಯಾರಂಟಿಗಳ ಮೂಲಕ ನವ ಕರ್ನಾಟಕ ಕಟ್ಟಿದ್ದೇವೆ ಎಂದು ಹೇಳಿದರು. ನಾವು ನುಡಿದಂತೆ ನಡೆದಿರುವುದರಿಂದ ಮತ್ತೆ 2028ರ ವಿಧಾನಸಭಾ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರ.

ಮೋದಿಯವರು ಪ್ರಧಾನಿಯಾಗುವ ಮೊದಲು ದೇಶದಲ್ಲಿ ಡೀಸೆಲ್, ಪೆಟ್ರೋಲ್, ಚಿನ್ನದ ಬೆಲೆ ಎಷ್ಟಿತ್ತು? ಈಗ ಅದು ಆಕಾಶಕ್ಕೆ ಏರಿದೆ. ಟ್ರಂಪ್ ಅವರ ಬಾಲ ಹಿಡಿದು ಸುತ್ತುತ್ತಿದ್ದ ಮೋದಿಯವರೇ ಈ ಬೆಲೆ ಏರಿಕೆಗೆ ಕಾರಣ. ಮೋದಿ ದರ್ಬಾರಿನಲ್ಲಿ ಅಂಬಾನಿ ಮತ್ತು ಅದಾನಿ ಮಾತ್ರ ಲಾಭ ಮಾಡಿಕೊಂಡರು. ಈಗ ಅವರ ಆಸ್ತಿ ₹8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಆದಾಯ ಮತ್ತು ಬದುಕು ನೆಲಕಚ್ಚಿದೆ. ಮೋದಿ, ಮೋದಿ ಎಂದು ಕುಣಿಯುತ್ತಿದ್ದ ಭಾರತದ ಬಡ ಜನರು ಮತ್ತು ಮಧ್ಯಮ ವರ್ಗದವರಿಗೆ ಭ್ರಮನಿರಸನವಾಗಿದೆ ಎಂದರು.

ನೀಟ್ ಪರೀಕ್ಷೆ ರದ್ದು ಮಾಡಿ 22 ಲಕ್ಷ ವಿದ್ಯಾರ್ಥಿಗಳ‌ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದಾರೆ. ನೀಟ್‌ ಪರೀಕ್ಷೆ ರದ್ದಾಗಿದ್ದರಿಂದ ಕೆಲ ವಿದ್ಯಾರ್ಥಿಗಳು ಆತ್ಮ೧ಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಮೋದಿ ಸರ್ಕಾರವೇ ಕಾರಣ. ರಾಜ್ಯದ ಸಿಇಟಿ ಮಾದರಿಯಲ್ಲಿ ಪರೀಕ್ಷೆ ನಡೆಸಿ ಎನ್ನುವ ನಮ್ಮ ಸಲಹೆ ತಿರಸ್ಕರಿಸಿ, ನೀಟ್ ನಲ್ಲಿ ಅಧ್ವಾನ ಮಾಡಿದ್ದಾರೆ ಎಂದು ಆರೋಪಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಮೋದಿಯ ಅಚ್ಚೇ ದಿನ್‌ ಬರಲಿಲ್ಲ. ರೈತರ ಆದಾಯವನ್ನೂ ದುಪ್ಪಟ್ಟು ಮಾಡಲಿಲ್ಲ. ವಿದೇಶದಿಂದ ಕಪ್ಪು ಹಣವನ್ನು ವಾಪಸ್‌ ತರಲಿಲ್ಲ. ದೇಶದ ಸಾಲವನ್ನು ₹220 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು.

250ಕ್ಕೂ ಹೆಚ್ಚು ಭರವಸೆ ಈಡೇರಿಕೆ:

ಕಳೆದ ಚುನಾವಣೆ ವೇಳೆ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸಿದ್ಧಗೊಂಡಿದ್ದ ಪ್ರಣಾಳಿಕೆಯಲ್ಲಿ ಒಟ್ಟು 592 ಭರವಸೆಗಳನ್ನು ಜನರಿಗೆ ನೀಡಲಾಗಿತ್ತು. ಆ ಪೈಕಿ ಈಗಾಗಲೇ 250ಕ್ಕೂ ಹೆಚ್ಚು ಭರವಸೆಗಳನ್ನು ಸರ್ಕಾರ ಯಶಸ್ವಿಯಾಗಿ ಈಡೇರಿಸಿದ್ದು, ಉಳಿದ ಭರವಸೆಗಳನ್ನೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿತ್ತು. ಅಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸುಮಾರು 30ಕ್ಕೂ ಹೆಚ್ಚು ಆದ್ಯತಾ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇತಿಹಾಸ ನಮ್ಮ ಸರ್ಕಾರದ್ದು ಎಂದು ಅವರು ಸ್ಮರಿಸಿಕೊಂಡರು.

ಒಂದೇ ವರ್ಷದಲ್ಲಿ ಗ್ಯಾರಂಟಿ ಜಾರಿ:

ಸ್ವತಃ ದೇಶದ ಪ್ರಧಾನಿ ಮೋದಿ ಸೇರಿ ವಿರೋಧ ಪಕ್ಷದವರು ನಮ್ಮ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದರು. ಇವನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ, ಒಂದು ವೇಳೆ ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹಣವಿರುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ನಾವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಈ ಎಲ್ಲಾ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ ಈವರೆಗೆ ₹1.40 ಲಕ್ಷ ಕೋಟಿ ವೆಚ್ಚ ಮಾಡಿದೆ. ಅಲ್ಲದೆ, ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದೇವೆ ಎಂದು ತಿಳಿಸಿದರು.

ನಾವು ನುಡಿದಂತೆ ನಡೆದಿದ್ದೇವೆ. ತಲಾದಾಯದಲ್ಲಿ ಕನ್ನಡಿಗರು ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದ್ದಾರೆ. ಇಡೀ ದೇಶದ ಜಿಎಸ್‌ಟಿಗೆ ನಮ್ಮ ಕೊಡುಗೆಯೇ ಅಪಾರವಾಗಿದೆ. ದೇಶದ ತಲಾದಾಯಕ್ಕಿಂತ ರಾಜ್ಯದ ತಲಾದಾಯ ಹೆಚ್ಚಾಗಿರುವ ರೀತಿಯಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ ಎಂದರು.