ಆನ್‌ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ದೇಶಾದ್ಯಂತ ಬಂದ್‌ಗೆ ಕರೆ ನೀಡಿದೆ. ಈ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ. ಕೆಲವು ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದರೆ, ಬೆಂಗಳೂರಿನ ಕೆಲವು ಮಳಿಗೆಗಳು ಬಂದ್ ಸಾಧ್ಯತೆ.

ಬೆಂಗಳೂರು (ಮೇ.20): ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಬುಧವಾರ ಔಷಧ ಮಳಿಗೆ ಬಂದ್ ಮಾಡುವಂತೆ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ನೀಡಿರುವ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಬಹುತೇಕ ಔಷಧ ಮಳಿಗೆಗಳು ವ್ಯಾಪಾರ ಚಟುವಟಿಕೆ ನಡೆಸುವ ಸಾಧ್ಯತೆಯಿದ್ದು, ಕೆಲ ಔಷಧ ಮಳಿಗೆಗಳು ಬಂದ್‌ ಆಗಲಿವೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗಳ ಸದಸ್ಯತ್ವ ಹೊಂದಿರುವ ಕರ್ನಾಟಕ ಫಾರ್ಮಾ ರೀಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಬಂದ್‌ಗೆ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದು, ಮಳಿಗೆಗಳನ್ನು ಮುಚ್ಚದೆ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವಂತೆ ಔಷಧ ವ್ಯಾಪಾರಿಗಳಿಗೆ ಸೂಚಿಸಿದೆ.

ಆದರೆ ಬೆಂಗಳೂರು ಫಾರ್ಮಾ ರೀಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಔಷಧ ಮಳಿಗೆಗಳನ್ನು ಬಂದ್ ಮಾಡುವುದಾಗಿ ತಿಳಿಸಿದೆ.

ಕೆಲ ಔಷಧ ಮಳಿಗೆ ಬಂದ್:

ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ದೇಶಾದ್ಯಂತ 12.40 ಲಕ್ಷಕ್ಕೂ ಅಧಿಕ ಔಷಧ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತದೆ. ರಾಜ್ಯದಲ್ಲಿ 45 ಸಾವಿರ ಚಿಲ್ಲರೆ ಔಷಧ ವ್ಯಾಪಾರಿಗಳಿದ್ದು, ಈ ಪೈಕಿ 20,000 ಸಂಖ್ಯೆಯಷ್ಟು ಅಪೋಲೊ, ಮೆಡ್‌ಪ್ಲಸ್‌ನಂತಹ ಚೈನ್‌ ಮಳಿಗೆಗಳು ಇದ್ದು, ಇವು ಎರಡೂ ಸಂಘಟನೆಗಳ ವ್ಯಾಪ್ತಿಗೆ ಬರುವುದಿಲ್ಲ.

ಉಳಿದಂತೆ ಬೆಂಗಳೂರು ಫಾರ್ಮಾ ರೀಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿರುವುದರಿಂದ 5,000 ರಿಂದ 10,000 ಮಳಿಗೆಗಳು ಬಂದ್‌ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆಸ್ಪತ್ರೆಗಳ ಒಳಗಿನ ಔಷಧ ಮಳಿಗೆಗಳು ಹಾಗೂ ತುರ್ತು ಸೇವೆಯ ಔಷಧ ಮಳಿಗೆಗಳ ಸೇವೆಯಲ್ಲಿ ವ್ಯತ್ಯಯವಿಲ್ಲ ಎಂದು ತಿಳಿದುಬಂದಿದೆ.

ರಿಯಾಯ್ತಿಗೆ ವಿರೋಧ:

ಆನ್‌ಲೈನ್ ಔಷಧ ಮಾರಾಟ ಹಾಗೂ ಇ-ಫಾರ್ಮಸಿ ವೇದಿಕೆಗಳು ಒದಗಿಸುವ ಔಷಧಗಳಿಗೆ ಭಾರಿ ರಿಯಾಯಿತಿ ನೀಡಲಾಗುತ್ತಿದ್ದು, ಇದಕ್ಕೆ ಔಷಧ ಮಳಿಗೆಗಳ ವಿರೋಧವಿದೆ. ಆದರೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮಳಿಗೆಗಳನ್ನು ಬಂದ್ ಮಾಡದೆ, ಕಪ್ಪು ಪಟ್ಟಿ ಧರಿಸಿ ಎಐಒಸಿಡಿ ಕರೆಗೆ ನೈತಿಕ ಬೆಂಬಲ ನೀಡಲಾಗುವುದು. ಹೀಗಾಗಿ ಶೇ. 80ಕ್ಕೂ ಅಧಿಕ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಉಳಿದಂತೆ ಶೇ.15-20 ಮಳಿಗೆಗಳು ಮಾತ್ರ ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಫಾರ್ಮಾ ರೀಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಅಧ್ಯಕ್ಷ ಜಯರಾಮ್‌ ತಿಳಿಸಿದ್ದಾರೆ.

ಬಂದ್‌ ಅನಿವಾರ್ಯ

ಇ-ಫಾರ್ಮಸಿಗಳಲ್ಲಿ ಯಾವುದೇ ನಿಯಂತ್ರಣವಿಲ್ಲದೆ ನಕಲಿ ವೈದ್ಯರ ಚೀಟಿಗಳನ್ನು ಬಳಸಿ ಔಷಧ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಇದು ಸಾರ್ವಜನಿಕರ ಆರೋಗ್ಯದ ಪ್ರಶ್ನೆಯಾಗಿದ್ದು, ಬಂದ್ ಮಾಡುವುದು ಅನಿವಾರ್ಯ.

- ರಘುನಾಥ ರೆಡ್ಡಿ, ಅಧ್ಯಕ್ಷ, ಬೆಂಗಳೂರು ಫಾರ್ಮಾ ರೀಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಫೋರಂ

ಔಷಧ ಮಳಿಗೆಗಳ ಕಳವಳಗಳೇನು?

- ನಿಯಂತ್ರಣವಿಲ್ಲದ ಆನ್‌ಲೈನ್ ಔಷಧ ಮಾರಾಟ

- ಅಕ್ರಮ ಇ-ಫಾರ್ಮಸಿಗಳ ಹಾವಳಿಯಿಂದ ಸಮಸ್ಯೆ

- ನಕಲಿ ವೈದ್ಯರ ಚೀಟಿ ಬಳಕೆಯಿಂದ ಹೆಚ್ಚಿನ ಅಪಾಯ

- ಆ್ಯಂಟಿಬಯೋಟಿಕ್, ಚಟಕ್ಕೆಬೀಳಿಸುವ ಔಷಧಗಳ ದುರ್ಬಳಕೆ

- ರೋಗಿ-ಫಾರ್ಮಾಸಿಸ್ಟ್‌ ನಡುವೆ ನೇರ ಸಂಪರ್ಕದ ಕೊರತೆ

- ಅನಗತ್ಯ ಹಾಗೂ ಅತಿಯಾದ ರಿಯಾಯ್ತಿ ನೀತಿ ಮಾರಕ

- ಔಷಧಿ ಮಾರುಕಟ್ಟೆಯಲ್ಲಿ ಏಕಾಧಿಪತ್ಯ ಸೃಷ್ಟಿಯ ಆತಂಕ

ಬೇಡಿಕೆಗಳೇನು?

- ಜಿಎಸ್‌ಆರ್ 220(ಇ)/ ಜಿಎಸ್‌ಆರ್ 817 (ಇ) ಹಿಂಪಡೆಯಬೇಕು

- ಅಕ್ರಮ ಇ-ಫಾರ್ಮಸಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು

- ಅತಿಯಾದ ರಿಯಾಯ್ತಿ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

- ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು