ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬೃಹತ್ ಭೂ ಹಗರಣವೊಂದು ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸುಮಾರು 9 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಮೃತ ನಿವೃತ್ತ ತಹಶೀಲ್ದಾರ್ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು (ಏ.24): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಬೃಹತ್ ಭೂ ಹಗರಣ ಬೆಳಕಿಗೆ ಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತಪಟ್ಟ ನಿವೃತ್ತ ತಹಶೀಲ್ದಾರ್ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add Asianetnews Kannada as a Preferred SourcegooglePreferred

ಏನಿದು ಪ್ರಕರಣ?

ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ದೇವವೃಂದ ಗ್ರಾಮದಲ್ಲಿ ಈ ಅಕ್ರಮ ನಡೆದಿದೆ. ದೇವವೃಂದ ಗ್ರಾಮದ ಸರ್ವೆ ನಂಬರ್ 313ರ ಹೆಚ್.4 ಮತ್ತು ಹೆಚ್.5 ರಲ್ಲಿರುವ ಸುಮಾರು 9 ಎಕರೆ ಸರ್ಕಾರಿ ಜಮೀನನ್ನು ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿದ್ದಾರೆ. 2018-19ನೇ ಇಸವಿಯಲ್ಲಿ ಈ ಭೂ ಮಂಜೂರಾತಿ ಪ್ರಕ್ರಿಯೆ ನಡೆದಿದ್ದು, ಈಗ ಇದರ ಅಸಲಿಯತ್ತು ಬಯಲಾಗಿದೆ.

ಅಕ್ರಮದ ಹಾದಿ ಹೀಗಿತ್ತು:

ಅಚ್ಚರಿಯ ವಿಷಯವೆಂದರೆ, ಈ ಜಮೀನು ಪಡೆಯಲು ಸಂಬಂಧಪಟ್ಟ ವ್ಯಕ್ತಿಗಳು ನಿಯಮಾನುಸಾರ ಯಾವುದೇ ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಆದರೂ ಅಧಿಕಾರಿಗಳು ದಾಖಲೆಗಳನ್ನು ತಿರುಚಿ, ಬೇರೆ ಯಾವುದೋ ಕಡತದಲ್ಲಿದ್ದ ಸಾಗುವಳಿ ಚೀಟಿಗಳನ್ನು ಈ ಪ್ರಕರಣಕ್ಕೆ ಅಪ್‌ಲೋಡ್ ಮಾಡಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ನೇರವಾಗಿ ಖಾತೆ (ಖಾತಾ) ಮಾಡುವ ಮೂಲಕ ಸರ್ಕಾರದ ಆಸ್ತಿಯನ್ನು ಲೂಟಿ ಹೊಡೆಯಲು ಸಹಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸತ್ತವರ ಮೇಲೂ ಕೇಸ್!

ಈ ಭೂ ಹಗರಣದಲ್ಲಿ ಅಂದಿನ ತಹಶೀಲ್ದಾರ್ ಸೇರಿದಂತೆ ಒಟ್ಟು ನಾಲ್ವರು ಅಧಿಕಾರಿಗಳ ಕೈವಾಡ ಇರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಈ ನಾಲ್ವರ ಪೈಕಿ ಓರ್ವ ನಿವೃತ್ತ ತಹಶೀಲ್ದಾರ್ ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ ಮೂವರು ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಪ್ರಸ್ತುತ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಅವರು ನೀಡಿದ ದೂರಿನ ಮೇರೆಗೆ, ಮೃತಪಟ್ಟ ಅಧಿಕಾರಿಯನ್ನೂ ಒಳಗೊಂಡಂತೆ ನಾಲ್ವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆಯ ಅಡಿಯಲ್ಲಿ ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಾನುಭವಿಗಳು ಯಾರು?

ಅಕ್ರಮವಾಗಿ ಈ 9 ಎಕರೆ ಜಮೀನನ್ನು ನಿಕೇಶ್ ಪೆರೇರಾ ಮತ್ತು ಅನಿಶ್ ಪೆರೇರಾ ಎಂಬುವರಿಗೆ ಮಂಜೂರು ಮಾಡಲಾಗಿತ್ತು ಎನ್ನಲಾಗಿದೆ. ಅರ್ಹತೆ ಇಲ್ಲದಿದ್ದರೂ ಮತ್ತು ಯಾವುದೇ ಅರ್ಜಿ ಸಲ್ಲಿಸದಿದ್ದರೂ ಅಧಿಕಾರಿಗಳ ಬೆಂಬಲದೊಂದಿಗೆ ಈ ವ್ಯಕ್ತಿಗಳು ಸರ್ಕಾರಿ ಭೂಮಿಯನ್ನು ತಮ್ಮದಾಗಿಸಿಕೊಂಡಿದ್ದರು. ಪ್ರಸ್ತುತ ತಹಶೀಲ್ದಾರ್ ಅಶ್ವಿನಿ ಅವರು ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಸರ್ಕಾರಿ ಜಮೀನುಗಳನ್ನು ಸಂರಕ್ಷಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅಧಿಕಾರಿಗಳೇ ಕಳ್ಳಾಟವಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.