ಹೈಕೋರ್ಟ್‌ ಸೂಚನೆಯ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳು ಬುಧವಾರದಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಟ್ಟಿವೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿವೆ. ಇದರ ನಡುವೆ, ಎರಡು ಸಂಘಟನೆಗಳು ಮುಷ್ಕರದಿಂದ ಹಿಂದೆ ಸರಿದಿವೆ.

- ಬೆಂಗಳೂರು (ಮೇ.20): ಬುಧವಾರದಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸಾರಿಗೆ ನೌಕರರ ಸಂಘಟನೆಗಳು ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಕೈಬಿಟ್ಟಿದ್ದು, ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಮಾತುಕತೆಗೆ ಆಹ್ವಾನಿಸಬೇಕು ಎಂದು ಆಗ್ರಹಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸೋಮವಾರ ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟವಾದ ಜಂಟಿ ಕ್ರಿಯಾ ಸಮಿತಿ ಪಟ್ಟು ಹಿಡಿದಿತ್ತು. ಆದರೆ, ಮುಷ್ಕರ ನಡೆಸದೆ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಮಂಗಳವಾರ ಹೈಕೋರ್ಟ್‌ ಸೂಚನೆ ನೀಡುತ್ತಿದ್ದಂತೆ ಮುಷ್ಕರ ವಾಪಸ್‌ ಪಡೆಯುವುದಾಗಿ ಸಮಿತಿ ಘೋಷಿಸಿದೆ.

ಈ ಸಂಬಂಧ ಶೇಷಾದ್ರಿಪುರದ ಎಐಟಿಯುಸಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವ ರಾಜೇಗೌಡ ಅರಸು, ಹೈಕೋರ್ಟ್ ಸೂಚನೆಯನ್ನು ಗೌರವಿಸಿ ಮುಷ್ಕರ ಹಿಂಪಡೆಯುತ್ತಿದ್ದೇವೆ. ನ್ಯಾಯಾಲಯವು ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಸಭೆ ನಡೆಸಬೇಕು ಎಂದು ಸೂಚನೆ ನೀಡಿದೆ. ಆದ್ದರಿಂದ ಮೇ 21 ರಿಂದ 26 ರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಮತ್ತೊಂದು ಸಂಘಟನೆಯಿಂದ ಬೆಂಬಲ ವಾಪಸ್‌:

ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂದು ಸೋಮವಾರವೇ ಕೆಎಸ್‌ಆರ್‌ಟಿಸಿ ಎಸ್ಸಿ-ಎಸ್ಟಿ ನೌಕರರ ಸಂಘ ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿತ್ತು. ಇದರ ಬೆನ್ನಲ್ಲೇ ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘವು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ನಾವು ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ. ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಜಗದೀಶ್‌, ಸೋಮವಾರ ರಾತ್ರಿಯವರೆಗೂ ನಮ್ಮ ಜೊತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಚರ್ಚೆ ಮಾಡಿದ್ದಾರೆ. ನಮ್ಮ ಕಾರ್ಮಿಕರ ಜೊತೆ ಚರ್ಚಿಸಿ ಮುಷ್ಕರದಿಂದ ಹಿಂದಕ್ಕೆ ಸರಿದಿದ್ದೇವೆ. ಸರ್ಕಾರದ ಜೊತೆ ಮಾತುಕತೆ ನಡೆಸಿ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಭರವಸೆ ನೀಡಿದ್ದು, ನಮಗೆ ಅವರ ಮೇಲೆ ವಿಶ್ವಾಸವಿದೆ. ಹೀಗಾಗಿ ನಾವು ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ. ಬುಧವಾರ ಕರ್ತವ್ಯ ನಿರ್ವಹಿಸುತ್ತೇವೆ ಎಂದು ವಿವರಿಸಿದರು. ಜಂಟಿ ಕ್ರಿಯಾ ಸಮಿತಿಯಲ್ಲಿ ಈ ಮೊದಲು 7 ಸಂಘಟನೆಗಳಿದ್ದವು. ಈಗ 2 ಸಂಘಟನೆಗಳು ಹೊರಬಂದಿದ್ದು 5 ಸಂಘಟನೆಗಳು ಮಾತ್ರ ಉಳಿದಿವೆ.