ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಪ್ರಯುಕ್ತ ಹಿಂದೂ ಸಂಘಟನೆಗಳು ಅಳವಡಿಸಿದ್ದ ಬ್ಯಾನರ್‌ಗಳನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಹರಿದು ಹಾನಿಗೊಳಿಸಿದ್ದಾರೆ. ಈ ಘಟನೆಯು ನಗರದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದು, ಧಾರ್ಮಿಕ ಸೌಹಾರ್ದತೆ ಕದಡುವ ಯತ್ನದ ವಿರುದ್ಧ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ.
ಚಿಕ್ಕಮಗಳೂರು (ನ.30): ಧಾರ್ಮಿಕ ಭಾವನೆ ಕೆರಳಿಸುವ ದುರುದ್ದೇಶದಿಂದ ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಪ್ರಯುಕ್ತ ಹಿಂದೂ ಸಂಘಟನೆಗಳು ಹಾಕಿದ್ದ ಬ್ಯಾನರ್‌ಗಳಿಗೆ ಕಿಡಿಗೇಡಿಗಳು ಬ್ಲೇಡ್‌ನಿಂದ ಹಾನಿ ಮಾಡಿರುವ ಘಟನೆ ವರದಿಯಾಗಿದೆ. ಈ ಕೃತ್ಯದಿಂದಾಗಿ ನಗರದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಡಿಸೆಂಬರ್ 2, 3 ಮತ್ತು 4 ರಂದು ನಡೆಯಲಿರುವ ಈ ವರ್ಷದ ದತ್ತ ಜಯಂತಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ನಗರದಾದ್ಯಂತ ವಿವಿಧ ಜಾಗಗಳಲ್ಲಿ ದತ್ತ ಜಯಂತಿಯ ಬ್ಯಾನರ್‌ಗಳನ್ನು ಅಳವಡಿಸಿದ್ದವು. ಆದರೆ, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಐ.ಜಿ. ರಸ್ತೆಯ ಉರ್ದು ಶಾಲೆಯ ಮುಂಭಾಗದಲ್ಲಿ ಹಾಕಿದ್ದ ಬೃಹತ್ ಫ್ಲೆಕ್ಸ್‌ಗಳಿಗೆ ಕಿಡಿಗೇಡಿಗಳು ಬ್ಲೇಡ್ ಬಳಸಿ ಕತ್ತರಿಸಿ ಹಾಕಿರುವುದು ಬೆಳಕಿಗೆ ಬಂದಿದೆ.
ಸೂಕ್ಷ್ಮ ಪ್ರದೇಶದಲ್ಲಿ ದುಷ್ಕೃತ್ಯ
ಸಮವಸ್ತ್ರದಲ್ಲಿನ ದತ್ತಮಾಲಾಧಾರಿಗಳ ಚಿತ್ರಗಳುಳ್ಳ ಫ್ಲೆಕ್ಸ್‌ಗಳನ್ನು ಉದ್ದೇಶಪೂರ್ವಕವಾಗಿ ಹರಿದು ಹಾಕಿರುವುದು ಸ್ಪಷ್ಟವಾಗಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ದುರುದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳದಲ್ಲಿ ಸ್ವಲ್ಪಮಟ್ಟಿಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಪ್ಪಿಸಲು ಮತ್ತು ಕೋಮು ಪ್ರಚೋದನೆಗೆ ಆಸ್ಪದ ನೀಡದಂತೆ, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಸಿಸಿಟಿವಿ ಮೊರೆ ಹೋದ ಪೊಲೀಸರು
ಈ ಕೃತ್ಯಕ್ಕೆ ಕಾರಣರಾದ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತರಾಗಿ (Suo Moto Case) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐ.ಜಿ. ರಸ್ತೆಯ ಸುತ್ತಮುತ್ತ ಅಳವಡಿಸಲಾದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳ ಸುಳಿವು ಪಡೆಯಲು ತೀವ್ರ ಶೋಧ ನಡೆಸುತ್ತಿದ್ದಾರೆ.
ದತ್ತ ಜಯಂತಿಯಂತಹ ದೊಡ್ಡ ಕಾರ್ಯಕ್ರಮಕ್ಕೂ ಮುನ್ನವೇ ಇಂತಹ ಘಟನೆ ನಡೆದಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳು ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಿ, ಶಾಂತಿಭಂಗ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಗರದ ಸಾರ್ವಜನಿಕರು ಒತ್ತಾಯಿಸಿದ್ದಾರೆ.


