ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದಕ್ಕೆ ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು, ಗದಗಿನ ಖಾಸಗಿ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಚಂದ್ರಿಕಾ ನಡುವಿನಮನಿ ಭೀಷ್ಮ ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಹೋದರನ ಬುದ್ಧಿವಾದದಿಂದ ನೊಂದ ಯುವತಿ ಈ ದುಡುಕಿನ ನಿರ್ಧಾರ.
ಗದಗ (ನ.30): ಗೆಳೆಯರೊಂದಿಗೆ ಪ್ರವಾಸ ಹೋಗಿ ಬಂದಿದ್ದಕ್ಕೆ ಮನೆಯವರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಗದಗ ನಗರದ ಭೀಷ್ಮ ಕೆರೆಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿರುವ ದುಃಖಕರ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆಯಾಗಿದೆ.
ಆತ್ಮ*ಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ಮೂಲದವರಾದ ಚಂದ್ರಿಕಾ ನಡುವಿನಮನಿ (21) ಎಂದು ಗುರುತಿಸಲಾಗಿದೆ. ಚಂದ್ರಿಕಾ ಅವರು ಗದಗಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಇವರು ಗದಗಿನ ಸಂಭಾಪೂರ ರಸ್ತೆಯ ಲಕ್ಷ್ಮೀ ನಗರದಲ್ಲಿ ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಬುದ್ಧಿವಾದದಿಂದ ಮನನೊಂದು ದುಡುಕಿನ ನಿರ್ಧಾರ
ಇತ್ತೀಚೆಗೆ ಚಂದ್ರಿಕಾ ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿ ಬಂದಿದ್ದರು. ಈ ವಿಚಾರವು ಮನೆಯವರಿಗೆ ತಿಳಿದು, ಅವರು ಚಂದ್ರಿಕಾ ಅವರಿಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಅದರಂತೆ, ಆತ್ಮ*ಹತ್ಯೆಗೂ ಹಿಂದಿನ ದಿನ, ಚಂದ್ರಿಕಾ ಅವರ ಸಹೋದರ ಚೇತನ್ ಅವರು ಫೋನ್ ಮಾಡಿ, ಚನ್ನಾಗಿ ಅಭ್ಯಾಸ ಮಾಡುವಂತೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಗಮನ ಕೊಡುವಂತೆ ಬುದ್ಧಿವಾದ ಹೇಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಸಹೋದರನ ಬುದ್ಧಿವಾದದಿಂದ ಅತಿಯಾಗಿ ಮನನೊಂದ ಚಂದ್ರಿಕಾ ಅವರು ತಡರಾತ್ರಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಸುಮಾರು 1.30ರ ಸುಮಾರಿಗೆ ಬಾಡಿಗೆ ಮನೆಯಿಂದ ಹೊರಹೋಗಿದ್ದ ಚಂದ್ರಿಕಾ, ಇಂದು ಮುಂಜಾನೆ ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಭೇಟಿ, ಪರಿಶೀಲನೆ
ಭೀಷ್ಮ ಕೆರೆಯಲ್ಲಿ ಯುವತಿಯ ಶವ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಜನಜಂಗುಳಿ ಸೇರಿತ್ತು. ಶಹರ ಪೊಲೀಸ್ ಠಾಣೆ ಸಿಪಿಐ ಎಲ್.ಕೆ ಜೂಲಕಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಯಿಂದ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಒಂದು ಸಣ್ಣ ವಿಷಯಕ್ಕೆ, ಮನೆಯವರ ಮತ್ತು ಸಹೋದರನ ಒಳ್ಳೆಯ ಮಾತುಗಳಿಗೆ ಬೇಸತ್ತು ಇಂಜಿನಿಯರಿಂಗ್‌ನಂತಹ ಉನ್ನತ ವ್ಯಾಸಂಗ ಮಾಡುತ್ತಿದ್ದ ಯುವತಿ ತನ್ನ ಜೀವನವನ್ನೇ ಮುಗಿಸಿಕೊಂಡಿರುವುದು ಎಲ್ಲರಿಗೂ ಆಘಾತ ತಂದಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


