ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ 1983ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು 43 ವರ್ಷಗಳ ನಂತರ ಒಂದೆಡೆ ಸೇರಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.

ಮಂಗಳೂರು (ಜು.154): ಸೇಂಟ್ ಅಲೋಶಿಯಸ್ ಪ್ರೌಢಶಾಲೆಯಿಂದ ಉತ್ತೀರ್ಣರಾಗಿ ಸುಮಾರು 43 ವರ್ಷಗಳ ನಂತರ ಒಂದೆಡೆ ಸೇರಿದ 1983ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು, ಮುಂದಿನ ತಲೆಮಾರುಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಬರೋಬ್ಬರಿ 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು (Scholarship Endowment) ಸಂಸ್ಥೆಗೆ ಕೊಡುಗೆಯಾಗಿ ನೀಡಿದ್ದಾರೆ. ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಯ 146 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಹಳೆಯ ವಿದ್ಯಾರ್ಥಿಗಳ ನಿರ್ದಿಷ್ಟ ಬ್ಯಾಚ್‌ವೊಂದರಿಂದ ಸ್ಥಾಪನೆಯಾದ ಮೊದಲ ಸ್ವಾವಲಂಬಿ ದತ್ತಿ ನಿಧಿ ಇದಾಗಿದೆ ಎಂದು ಅಂದಾಜಿಸಲಾಗಿದೆ. ಈ ನಿಧಿಯು ಕಾಲಾನಂತರದಲ್ಲಿ ಮತ್ತಷ್ಟು ಬೆಳೆಯಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ನಿರಂತರ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ವರ್ಷದ ವಿದ್ಯಾರ್ಥಿವೇತನ ವಿತರಣೆ

ಅಲೋಶಿಯಸ್ ಗೊನ್ಜಾಗಾ ಅವರ ವಾರ್ಷಿಕ ಹಬ್ಬದ ಆಚರಣೆಯ ಸಂದರ್ಭದಲ್ಲಿ ಚೊಚ್ಚಲ 'ಸೇಂಟ್ ಅಲೋಶಿಯಸ್ ಕ್ಲಾಸ್ ಆಫ್ 1983 ವಿದ್ಯಾರ್ಥಿವೇತನ' ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ವರ್ಷ ಅಶ್ವಿನ್ ಶೆಟ್ಟಿಗಾರ್, ಎಂ.ಎ. ಅಬ್ದುಲ್ ಅಜಾಜ್ ಶಯಾನ್ ಮತ್ತು ಶರೋನ್ ಡಿಕೋಸ್ಟಾ ಅವರು ಈ ವಿದ್ಯಾರ್ಥಿವೇತನವನ್ನು ಸ್ವೀಕರಿಸಿದರು. ಮತ್ತೊಬ್ಬ ಅರ್ಹ ವಿದ್ಯಾರ್ಥಿ ಸ್ನಿಥಿಕ್ ಚೂರಿಯಾ ಅವರಿಗೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಕಚೇರಿಯಲ್ಲಿ ನಂತರ ಈ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಲಾಯಿತು.

ವಾಟ್ಸಾಪ್ ಗ್ರೂಪ್‌ನಿಂದ ಆರಂಭವಾದ ಕನಸು

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪರಸ್ಪರ ಸಂಪರ್ಕ ಕಳೆದುಕೊಂಡಿದ್ದ ಈ ಬ್ಯಾಚ್‌ನ ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸುಮಾರು 70 ಕ್ಕೂ ಹೆಚ್ಚು ಸಹಪಾಠಿಗಳು 2024 ರಲ್ಲಿ ಸೋಶಿಯಲ್‌ ಮೀಡಿಯಾ ಮೂಲಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಕೇವಲ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಪುನರ್ಮಿಲನ ಕೂಟವಾಗಿ ಆರಂಭವಾದ ಇವರ ಒಡನಾಟ, ಕೊನೆಗೆ ಸಮಾಜಮುಖಿ ಕಾರ್ಯವೊಂದಕ್ಕೆ ನಾಂದಿ ಹಾಡಿತು. ಅಂದಿನ ರೆಕ್ಟರ್ ಆಗಿದ್ದ ದಿವಂಗತ ಫಾದರ್ ಮೆಲ್ವಿನ್ ಪಿಂಟೋ ಅವರ ಮಾರ್ಗದರ್ಶನದೊಂದಿಗೆ, 2025 ರ ಏಪ್ರಿಲ್‌ನಲ್ಲಿ ಈ ದತ್ತಿ ನಿಧಿಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.

ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ

ಈ 65 ಲಕ್ಷ ರೂಪಾಯಿಗಳ ಬೃಹತ್ ನಿಧಿಯನ್ನು ಹಣಕಾಸು ವಲಯದಲ್ಲಿ ಕೆಲಸ ಮಾಡುತ್ತಿರುವ ಈ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಆಯ್ದ ಸುರಕ್ಷಿತ ಹಣಕಾಸು ಮಾರುಕಟ್ಟೆ ಸಾಧನಗಳಲ್ಲಿ (Financial Market Instruments) ಹೂಡಿಕೆ ಮಾಡಲಾಗಿದೆ.

ಮೂಲ ನಿಧಿಗೆ ಯಾವುದೇ ಧಕ್ಕೆ ಬರದಂತೆ ಕೇವಲ ಈ ಹೂಡಿಕೆಯಿಂದ ಬರುವ ವಾರ್ಷಿಕ ಬಡ್ಡಿಯನ್ನು ಮಾತ್ರ ವಿದ್ಯಾರ್ಥಿವೇತನಕ್ಕಾಗಿ ಬಳಸಲಾಗುತ್ತದೆ. ಮೂಲ ನಿಧಿಯು ಭವಿಷ್ಯದಲ್ಲಿ ಬರಲಿರುವ ದೇಣಿಗೆಗಳು ಮತ್ತು ಹೂಡಿಕೆಯ ಆದಾಯದೊಂದಿಗೆ ನಿರಂತರವಾಗಿ ಬೆಳೆಯುತ್ತಾ ಸಾಗುತ್ತದೆ. 10 ನೇ ತರಗತಿಯಿಂದ ಹಿಡಿದು ದ್ವಿತೀಯ ಪಿಯುಸಿವರೆಗಿನ ಒಟ್ಟು 12 ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಿರಂತರವಾಗಿ ನೆರವು ನೀಡುವುದು ಈ ಯೋಜನೆಯ ದೀರ್ಘಾವಧಿಯ ಗುರಿಯಾಗಿದೆ.

ಗುರುಗಳಿಗೆ ಗೌರವ ಸಮರ್ಪಣೆ

ಇದೇ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಾಜಿ ಸಹಾಯಕ ಮುಖ್ಯೋಪಾಧ್ಯಾಯರಾದ ಶಂಭು ಶೆಟ್ಟಿ ಮತ್ತು ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿಯರಾದ ಲಿಡ್ವಿನ್ ಡಿಸೋಜಾ ಹಾಗೂ ಸೆಲಿನ್ ರೇಗೋ ಅವರನ್ನು ಹಳೆಯ ವಿದ್ಯಾರ್ಥಿಗಳು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶಂಭು ಶೆಟ್ಟಿ ಅವರು ಕಿರಿಯ ಪೀಳಿಗೆಯು ಈ ಸತ್ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. "ಒಂದು ಬೀಜವನ್ನು ಬಿತ್ತುವುದು ತುಂಬಾ ಸುಲಭ. ಆದರೆ ಅದನ್ನು ಪೋಷಿಸಿ, ಮರವಾಗಿಸಿ ಬೆಳೆಸುವುದೇ ನಿಜವಾದ ಸವಾಲು" ಎಂದರು.