ಬೆಂಗಳೂರಿನ ಗೋಲ್ಡ್ ಫಿಂಚ್ ನರ್ಸಿಂಗ್ ಕಾಲೇಜಿನಲ್ಲಿ ಚಿಕನ್ ಪಾಕ್ಸ್ ಸೋಂಕು ಬಂದಿದ್ದು, ಹಲವು ವಿದ್ಯಾರ್ಥಿಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಕಾಲೇಜು ಆಡಳಿತವು ತಮ್ಮನ್ನು ರೂಮ್‌ಗಳಲ್ಲಿ ಕೂಡಿಹಾಕಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರೆ, ಪ್ರಾಂಶುಪಾಲರು ಇದನ್ನು ನಿರಾಕರಿಸಿದ್ದಾರೆ.

ಬೆಂಗಳೂರು: ಮಲತ್ತಹಳ್ಳಿ ಸಮೀಪದಲ್ಲಿರುವ ಪ್ರತಿಷ್ಠಿತ ಗೋಲ್ಡ್ ಫಿಂಚ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಹಾಸ್ಟೆಲ್‌ನಲ್ಲಿ ಚಿಕನ್ ಪಾಕ್ಸ್ ಸೋಂಕಿನಿಂದ ವಿದ್ಯಾರ್ಥಿಗಳಲ್ಲಿ ಭೀತಿ ಮನೆ ಮಾಡಿದೆ. ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳನ್ನು ಸೇರಿಸಿ ಸುಮಾರು 6 ರಿಂದ 7 ವಿದ್ಯಾರ್ಥಿಗಳಿಗೆ ಚಿಕನ್ ಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಸೋಂಕಿನ ಮಾಹಿತಿ ಹೊರಗೆ ಗೊತ್ತಾದರೆ ಕಾಲೇಜಿನ ಹೆಸರಿಗೆ ಧಕ್ಕೆಯಾಗಬಹುದು ಎಂಬ ಭಯದಿಂದ, ಕೆಲ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ರೂಮ್‌ಗಳಲ್ಲೇ ಕೂಡಿ ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಚಿಕನ್ ಫಕ್ಸ್ ಸೊಂಕು ಗೊತ್ತಾಗ್ತಿದ್ದಂತೆ ಮನೆಗೆ ಹೋಗ್ತೀವಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರೂ ಕಾಲೇಜು ಆಡಳಿತ ಮಂಡಳಿ ಕಳುಹಿಸಿಲ್ಲ ಎಂಬ ಆರೋಪವಿದೆ.

ಕಾಲೇಜು ನಿರ್ವಾಹಕ ಮಂಡಳಿಯ ಸ್ಪಷ್ಟನೆ

ಆರೋಪಗಳಿಗೆ ಪ್ರತಿಕ್ರಿಯಿಸಿದ ಗೋಲ್ಡ್ ಫಿಂಚ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸ್ವರ್ಣಲತಾ ಅವರು, ವಿದ್ಯಾರ್ಥಿಗಳ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಚಿಕನ್ ಪಾಕ್ಸ್ ಬಂದಿರುವುದು ದೃಢಪಟ್ಟಿದೆ. ಅವರಲ್ಲಿ ಒಬ್ಬ ವಿದ್ಯಾರ್ಥಿಯನ್ನು ಈಗಾಗಲೇ ಅವರ ಊರಿಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ. ಯಾರನ್ನೂ ರೂಮ್‌ಗಳಲ್ಲಿ ಕೂಡಿ ಹಾಕುವಂತಹುದು ನಡೆದಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಬೇರೆ ವಿದ್ಯಾರ್ಥಿಗಳು ಎಲ್ಲಿ ಹೋಗದಂತೆ ಸಿಬ್ಬಂದಿ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದದ್ದು, ಸಂಪೂರ್ಣ ಮುನ್ನೆಚ್ಚರಿಕೆ ಕ್ರಮ ಮಾತ್ರ. ಇದರಲ್ಲಿ ಯಾರನ್ನೂ ಬಲವಂತಪಡಿಸಲಾಗಿಲ್ಲ ಎಂದಿದ್ದಾರೆ.

ಸ್ಥಿತಿ ಗಂಭೀರವಾಗದಂತೆ ಆರೋಗ್ಯ ಇಲಾಖೆ ಗಮನ ಅಗತ್ಯ

ಕ್ಯಾಂಪಸ್‌ನಲ್ಲಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ, ವಿದ್ಯಾರ್ಥಿಗಳ ಮತ್ತು ಕಾಲೇಜು ಆಡಳಿತ ಮಂಡಳಿಯ ಹೇಳಿಕೆಗಳು ಪರಸ್ಪರ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ನಿಜಸ್ಥಿತಿ ತಿಳಿಯಲು ಮೇಲ್ವಿಚಾರಣೆ ಅಗತ್ಯವಾಗಿದೆ.