ಮಂಡ್ಯ(ಆ.24): ಕೆ.ಆರ್‌.ಪೇಟೆಯಲ್ಲಿ ಸಾಕು ಪ್ರಾಣಿಗಳನ್ನು ತಿಂದು ರೈತರು, ಜನರಿಗೆ ಆತಂಕ ಉಂಟು ಮಾಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ತಾಲೂಕಿನ ಬೂಕಹಳ್ಳಿ ಕೊಪ್ಪಲು ಗ್ರಾಮದ ಬಳಿ ಕಳೆದ ಒಂದು ತಿಂಗಳಿನಿಂದ ಆಗಾಗ್ಗೆ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದ್ದ ಚಿರತೆಯು ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

ಜಮೀನಿನ ಬಳಿ ಮೇಯಲು ಬಿಟ್ಟಿದ್ದ ಕುರಿ, ಮೇಕೆ ಹಾಗೂ ಸಾಕುನಾಯಿಗಳನ್ನು ಕೊಂದು ತಿನ್ನುವ ಮೂಲಕ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಈ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಚಿರತೆ ಹಿಡಿಯುವಂತೆ ಮನವಿ ಮಾಡಿದ್ದರು.

ಮಂಡ್ಯ: ಸಣ್ಣೇನಹಳ್ಳಿ ಜಮೀನಿನಲ್ಲಿ ಚಿರತೆ ಕಳೇಬರ ಪತ್ತೆ

ಈ ಹಿನ್ನೆಲೆಯಲ್ಲಿ ಬೂಕಹಳ್ಳಿಕೊಪ್ಪಲು ಗ್ರಾಮದ ಭಾಸ್ಕರ್‌ ಕೆ.ಗೌಡರ ಜಮೀನಿನಲ್ಲಿ ಅರಣ್ಯಾಧಿಕಾರಿಗಳು ಬೋನಿಟ್ಟಿದ್ದರು. 6 ವರ್ಷದ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್‌, ಸಿಬ್ಬಂದಿಯಾದ ಮನೋಜ್‌, ಮೋಹನ್‌, ನಾಗೇಂದ್ರ ಇತರರು ಭಾಗವಹಿಸಿದ್ದರು.

ಮಂಡ್ಯ: ನೆರೆ ಸಂತ್ರಸ್ತರಿಗೆ ಸೀರೆ, ನಗದು ಹಸ್ತಾಂತರ

ಈ ವೇಳೆ ಮಾತನಾಡಿದ ತಾಲೂಕು ಅರಣ್ಯಾಧಿಕಾರಿ ಮಧುಸೂಧನ್‌, ಚಿರತೆಗೆ ಅಗತ್ಯ ಆಹಾರ ನೀರು ಸಿಗದ ಹಿನ್ನೆಲೆಯಲ್ಲಿ ಜನವಸತಿಯತ್ತ ಆಹಾರ ಹುಡುಕಿ ಬರುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯ ಉಳಿಸಲು ಸಹಕಾರ ನೀಡಬೇಕು. ಈ ಸೆರೆ ಸಿಕ್ಕಿರುವ ಸುಮಾರು ಮೂರು ವರ್ಷದ ಚಿರತೆಯನ್ನು ಮಲೆ ಮಹದೇಶ್ವರ ವನ್ಯಜೀವಿ ಸಂರಕ್ಷಣಾ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಮಾಹಿತಿ ನೀಡಿದರು.