ಆಮ್ಲಜನಕ ದುರಂತ: 5 ಕಡೆ ಪೊಲೀಸರ ದಾಳಿ
ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಕಡೆ ದಾಳಿ ನಡೆಸಿದ್ದು ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಚಾಮರಾಜನಗರ (ಮೇ.06): ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಇಪ್ಪತ್ತನಾಲ್ಕು ಮಂದಿಯನ್ನು ಬಲಿಪಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ಇಲಾಖೆಯ ಐದು ತಂಡಗಳು ಬುಧವಾರ ವಿವಿಧ ಇಲಾಖೆ, ಕಚೇರಿಗಳಿಂದ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿವೆ. ಹೈಕೋರ್ಟ್ ನೀಡಿದ ಆದೇಶದಂತೆ ಈ ದಾಳಿ ನಡೆಸಲಾಗಿದೆ.
ಆಮ್ಲಜನಕ ಪೂರೈಕೆ ಮತ್ತು ದುರಂತ ನಡೆದ ದಿನ ಸಿಲಿಂಡರ್ ಲಭ್ಯತೆ ಬಗೆಗಿನ ದಾಖಲೆ ಜಪ್ತಿ ಮಾಡುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
'ಚಾಮರಾಜನಗರ ದುರಂತ : ಮೂವರ ತಲೆದಂಡ ಅಗತ್ಯ' ...
ಡಿಎಚ್‌ಒ ಕಚೇರಿ, ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ, ಡೀನ್ ಕಚೇರಿ ಹಾಗೂ ಜಿಲ್ಲಾಸ್ಪತ್ರೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಯಿತು. ಚಾಮರಾಜನಗರ ಡಿವೈಎಸ್ಪಿ, ಕೊಳ್ಳೇಗಾಲ ಡಿವೈಎಸ್ಪಿ, ಡಿಸಿಆರ್‌ಬಿ ಡಿವೈಎಸ್ಪಿ ಹಾಗೂ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona