'ಚಾಮರಾಜನಗರ ದುರಂತ : ಮೂವರ ತಲೆದಂಡ ಅಗತ್ಯ'
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದಕ್ಕೆ ಈ ಮೂವರ ತಲೆದಂಡ ಆಗಬೇಕು. ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಮುಖ್ಯಮಂತ್ರಿಗಳಿಗೆ ದುರಂತದ ಸ್ಥಳಕ್ಕೆ ತೆರಳಲು ಆಗಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ.
ಮೈಸೂರು (ಮೇ.05): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಸಾವಿಗೆ ಕಾರಣವಾಗಿರುವ ಆರೋಗ್ಯ ಸಚಿವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ತಲೆದಂಡಕ್ಕೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ರೋಗಿಗಳು ದುರ್ಮರಣಕ್ಕೀಡಾಗಿರುತ್ತಾರೆ. ಈ ಸಂಬಂಧ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಇಬ್ಬರು ಜಿಲ್ಲಾಧಿಕಾರಿಗಳ ಹೇಳಿಕೆಯೇ 24 ಮಂದಿ ಸಾವಿಗೆ ಕಾರಣ ಎಂಬತಕ್ಕದ್ದನ್ನು ಧೃಡಪಡಿಸುತ್ತದೆ. ಇವರ ಹೇಳಿಕೆಯೇ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತಿದೆ ಎಂದು ತಿಳಿಸಿದ್ದಾರೆ.
ಜ್ವರದಲ್ಲೂ ಕೂಡ ಇತ್ತೀಚಿನ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಪ್ರಚಾರ ಮಾಡಿರುತ್ತಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಧಾರುಣವಾಗಿ ಸಾವನ್ನಪ್ಪಿದ ಸ್ಥಳಕ್ಕೆ ಮುಖ್ಯಮಂತ್ರಿಗಳು ಬಾರದೆ ಇರುವುದು ಸಾಮಾನ್ಯ ಜನರ ಜೀವದ ಬಗ್ಗೆ ಅವರಿಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಚಾಮರಾಜನಗರ ದುರಂತ: ಅನುಮಾನ ಮೂಡಿಸುತ್ತಿದೆ ಡಿಸಿಗಳ ದ್ವಂದ್ವ ಹೇಳಿಕೆ ..
ಸ್ಥಳಕ್ಕೆ ಭೇಟಿ ನೀಡಿದಂತಹ ಆರೋಗ್ಯ ಸಚಿವರು, ಕೇವಲ 3 ಮಂದಿ ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಮೊದಲು ಅವಿವೇಕಿ, ಸುಳ್ಳುಗಾರ ಆರೋಗ್ಯ ಸಚಿವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
24 ಮಂದಿ ಬಲಿ ತೆಗೆದುಕೊಂಡ ಇಬ್ಬರು ಜಿಲ್ಲಾಧಿಕಾರಿಗಳು, ಒಬ್ಬ ಆರೋಗ್ಯ ಸಚಿವ ಈ ಸರ್ಕಾರಕ್ಕೆ ಬೇಕಾಗಿದೆ. ಆದರೆ, ಈ ನಾಡಿನ ಜನತೆಯ ಹಿತ ಬೇಕಿಲ್ಲ? ಎಂಬುದು ಈ ರೀತಿಯ ಆಡಳಿತ ವೈಖರಿಯಿಂದ ಅರ್ಥವಾಗುತ್ತಿದೆ. ಈ ಘಟನೆ ಸಂಬಂಧ ಎಲ್ಲಾ ಮಾಹಿತಿ ಈಗಾಗಲೇ ಸರ್ಕಾರಕ್ಕೆ ಇದ್ದರೂಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸರಿಯಲ್ಲ ಎಂದು ಅವರು ಖಂಡಿಸಿದ್ದಾರೆ.
ತಕ್ಷಣ ದುರ್ಮರಣಕ್ಕೀಡಾದ ಕುಟುಂಬದವರಿಗೆ ತಲಾ . 5 ಲಕ್ಷಗಳ ಪರಿಹಾರ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ನ್ಯಾಯಾಧೀಶರಿಂದ ಸೂಕ್ತ ತನಿಖೆಯಾಗಬೇಕು. 24 ಗಂಟೆಗಳಲ್ಲಿ ಈ ಮೂವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಅಸಮರ್ಥರಾದ ಪಕ್ಷದಲ್ಲಿ, ನಾಡಿನ ಜನತೆಯಲ್ಲಿ ಕ್ಷಮೆ ಕೇಳಿ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳ ಪದವಿಯಿಂದ ನಿರ್ಗಮಿಸುವುದೇ ಸೂಕ್ತ. ಈ ಸಂಬಂಧವಾಗಿ ತಪ್ಪು ಮಾಡಿರುವ ಅಧಿಕಾರಿ ಹಾಗೂ ಸಚಿವರ ಮೇಲೆ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಜನಾಂದೋಲನಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona