ಚಾಮರಾಜನಗರ ಜಿಲ್ಲೆಯ ಯಡವನಹಳ್ಳಿ ಗ್ರಾಮದಲ್ಲಿ, ಎರಡು ವರ್ಷಗಳ ಹಿಂದೆ ಸಾಮಾಜಿಕ ಬಹಿಷ್ಕಾರದಿಂದ ಆತ್ಮ*ಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬವನ್ನು ಬೆಂಬಲಿಸಿದ್ದಕ್ಕಾಗಿ 80 ಕುಟುಂಬಗಳನ್ನು ಕುಲದಿಂದ ಹೊರಹಾಕಲಾಗಿದೆ. ಕಟ್ಟೆಮನೆಯ ಈ ತೀರ್ಪಿನಿಂದಾಗಿ ಯಾವುದೇ ಶುಭ ಸಮಾರಂಭಗಳಲ್ಲಿ ಹೋಗುವಂತಿಲ್ಲ.
ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸಾಮಾಜಿಕ ಬಹಿಷ್ಕಾದಂತಹ ಪಿಡುಗು ಇನ್ನೂ ದೂರಾಗಿಲ್ಲ. 140 ಕುಟುಂಬ ವಾಸ ಮಾಡುವ ಒಂದೇ ಗ್ರಾಮದಲ್ಲಿ 80 ಕುಟುಂಬವನ್ನು ಕುಲದಿಂದ ಹೊರಹಾಕಿದ್ದಾರೆ. 16 ಹಳ್ಳಿಯ ಕಟ್ಟೆ ಮನೆಯವರು ಈ ತೀರ್ಪು ಕೊಟ್ಟಿದ್ದು, ನಮ್ಮನ್ನು ಯಾರೂ ಕೂಡ ಕರೆಯಲ್ಲ, ಮದುವೆ ಸಮಾರಂಭಕ್ಕೆ, ಹಬ್ಬಕ್ಕೆ ಹೋಗುವಂತಿಲ್ಲ. ಒಂದು ವೇಳೆ ಹೋದ್ರೆ ಅವರಿಗೂ ದಂಡ ಹಾಕ್ತಾರೆ ಅಂತಾ ಗಂಭೀರ ಆರೋಪ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಮದುವೆಯಾಗಲೂ ಹೆಣ್ಣು ಕೊಡಲ್ಲ,ಯಾವುದೇ ಶುಭ ಸಮಾರಂಭಗಳಿಗೂ ಆಹ್ವಾನವಿಲ್ಲ!
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇನ್ನೂ ಕೂಡ ಸಾಮಾಜಿಕ ಬಹಿಷ್ಕಾರದಂತಹ ಪಿಡುಗು ಜೀವಂತವಾಗಿದೆ. ಸ್ವಜಾತಿಯವರನ್ನೇ ಕುಲದಿಂದ ಹೋರಹಾಕಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅಂದ್ರೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದ ಶಿವರಾಜು ಎಂಬ ವ್ಯಕ್ತಿ ಆತ್ಮ*ಹತ್ಯೆ ಮಾಡಿಕೊಂಡಿದ್ದನು. ಘಟನೆ ಸಂಬಂಧ 17 ಮಂದಿ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಆತ್ಮ*ಹತ್ಯೆ ಮಾಡಿಕೊಂಡ ಶಿವರಾಜು ಕುಟುಂಬಸ್ಥರ ಪರವಾಗಿ ಸುಮಾರು 80 ಕುಟುಂಬಗಳು ನಿಂತಿದ್ದವು. ಕೇಸ್ ವಾಪಾಸ್ ಪಡೆದುಕೊಂಡು ರಾಜಿ ಪಂಚಾಯತಿ ಮಾಡಲೂ ಕಟ್ಟೆಮನೆಯವರು ಮುಂದಾಗಿದ್ದರು. ಆದ್ರೆ ಮೊದಲು ಆತ್ಮ*ಹತ್ಯೆ ಕೇಸ್ ವಾಪಾಸ್ ಪಡೆಯಿರಿ ನಂತರ ಕುಲದಿಂದ ಬಹಿಷ್ಕಾರ ಹಿಂಪಡೆಯುತ್ತೇವೆ ಎಂಬ ಮಾತನ್ನು ಕಟ್ಟೆಮನೆಯವರು ಹೇಳಿದ್ರಂತೆ, ಆ ಹಿನ್ನಲೆ ಕೇಸ್ ವಾಪಾಸ್ ತೆಗೆಯಲು ಮೃತ ಶಿವರಾಜು ಕುಟುಂಬಸ್ಥರು ಹಿಂದೇಟು ಹಾಕಿದ್ದಾರೆ. ಅಲ್ಲದೇ ಸಮಾಜದ ಯಾವುದೇ ಕೆಲವು, ಹಬ್ಬ,ಸಮಾರಂಭ ಎಲ್ಲಿಯೂ ಕೂಡ ಕರೆಯುತ್ತಿಲ್ಲ. ಈ ಸಾಮಾಜಿಕ ಬಹಿಷ್ಕಾರಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡ್ತಿದ್ದಾರೆ.
140 ಕುಟುಂಬದಲ್ಲಿ 80 ಕುಟುಂಬಗಳಿಗೆ ದಂಡ
ಇನ್ನೂ ಶಿವಣ್ಣ ನಾಯ್ಕ ಎಂಬಾತ ವ್ಯಕ್ತಿಯೊಬ್ಬರಿಗೆ ಚಪ್ಪಲಿಯಲ್ಲಿ ಥಳಿಸಿದ್ದರು ಅನ್ನೋ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಇದರಿಂದ ಮನನೊಂದು ಆತ್ಮ*ಹತ್ಯೆಗೆ ಮುಂದಾಗಿದ್ದ ಶಿವಣ್ಣನಾಯ್ಕ್ನನ್ನ ಶಿವರಾಜು ಮನವೊಲಿಸಿ ಸಮಾಧಾನ ಪಡಿಸಿದ್ದಕ್ಕೆ ಪ್ರಕರಣದಲ್ಲಿ ನೀನು ಶಾಮೀಲಾಗಿದ್ದೀಯಾ ಎಂದು ಶಿವರಾಜುಗೂ ಸಾಮಾಜಿಕ ಬಹಿಷ್ಕಾರ ಹಾಕಿ 6 ಸಾವಿರ ರೂ ದಂಡ ವಿಧಿಸಿದ್ದರು. ಹೀಗಾಗಿ ಶಿವರಾಜು ಮನನೊಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆಂದರು. ಅಲ್ಲದೇ ನಮ್ಮ ಮನೆಗೆ ನಮ್ಮ ಸಂಬಂಧಿಕರಾಗಿದ್ದ ಮೃತ ಶಿವರಾಜು ಅವರ ಅಣ್ಣ ಮಹೇಶ್ ಹಾಗೂ ಇತರರನ್ನು ಊಟಕ್ಕೆ ಆಹ್ವಾನಿಸಿದ್ದೆ, ಅವರು ಬಂದು ಊಟ ಮಾಡಿ ಹೋಗಿದ್ದಕ್ಕೆ ನನಗೂ ಕೂಡ 250 ರೂ ದಂಡ ವಿಧಿಸಿದ್ದರು. ಸದ್ಯ ನಮ್ಮನ್ನು ಕೂಡ ಕುಲದಿಂದ ಹೊರಗಿಟ್ಟಿದ್ದಾರೆಂದು ಕಣ್ಣೀರು ಹಾಕ್ತಿದ್ದಾರೆ ಮೃತ ಶಿವರಾಜು ಸಂಬಂಧಿಕ ನಾಗ ನಾಯಕ.
ಒಟ್ನಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಭೂತಕ್ಕೆ ಎರಡು ವರ್ಷದ ಹಿಂದೆಯೇ ಶಿವರಾಜು ಎಂಬ ವ್ಯಕ್ತಿ ಬಲಿಯಾಗಿದ್ದಾನೆ. ಆದ್ರೆ ಇನ್ನೂ ಕೂಡ ಅವರ ಕುಟುಂಬ ಹಾಗೂ ಅವರನ್ನು ಬೆಂಬಲಿಸಿದ 80 ಕುಟುಂಬಗಳು ಕುಲದಿಂದ ಹೊರಗಿದ್ದು, ನಮಗೆ ನ್ಯಾಯ ಕೊಡಿಸಿ ಅಂತಾ ಗೃಹ ಹಾಗೂ ಕಾನೂನು ಸಚಿವರ ಮೊರೆಯಿಟ್ಟಿದ್ದಾರೆ.


