ಗುಂಡ್ಲುಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಾಂಜಾ ವ್ಯಸನಿಗಳಿಂದ ಕೊಲೆಯಾದ ವ್ಯಕ್ತಿ. ಮೂರು ರಾಜ್ಯಗಳ ಗಡಿಯಂಚಿನ ಪಟ್ಟಣದಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು.
ವರದಿ; ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ: ಆ ಪಟ್ಟಣ ಮೂರು ರಾಜ್ಯಗಳ ಟ್ರೈಜಂಕ್ಷನ್ ಏರಿಯಾ. ಒಂದೆಡೆ ಗಾಂಜಾ ಗಮಲು ಮತ್ತೊಂದೆಡೆ ಮದ್ಯಪಾನದ ಅಮಲು. ಗಾಂಜಾ (Ganja) ಹೊಡೆದಿದ್ದ ಯುವಕರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಪಾನಮತ್ತ ವ್ಯಕ್ತಿಯನ್ನು ಕೊಲೆಗೈದಿದ್ದಾರೆ. ಎಣ್ಣೆ ತರಲು ಹೋದವವನು ಹೆಣವಾಗಿ ಹೋಗಿದ್ದಾನೆ.
ಚಾಮರಾಜನಗರ (chamarajanagar) ಜಿಲ್ಲೆಯ ಗುಂಡ್ಲುಪೇಟೆ (Gundlupete) ಪಟ್ಟಣ ಕರ್ನಾಟಕ ತಮಿಳುನಾಡು ಹಾಗು ಕೇರಳ ರಾಜ್ಯಗಳ ಗಡಿಯಂಚಿನಲ್ಲಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಸ್ಮಗ್ಲಿಂಗ್, ಕಸಾಯಿಖಾನೆಗಳಿಗೆ ಅಕ್ರಮ ಜಾನುವಾರು ಸಾಗಾಣೆ ಹೊರ ರಾಜ್ಯಗಳ ಲಾಟರಿ ದಂಧೆ, ಎಣ್ಣೆ, ಗಾಂಜಾ ಹೀಗೆ ಹತ್ತಾರು ರೀತಿಯ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕೂಲಿ ಕಾರ್ಮಿಕರು ಮದ್ಯದ ಮೊರೆ ಹೋದರೆ ಯುವಕರು ಗಾಂಜಾ ಚಟಕ್ಕೆ ದಾಸರಾಗುತ್ತಿದ್ದಾರೆ.
ಜನತಾ ಕಾಲೋನಿಯ ಶಿವ ಎಂಬ 36 ವರ್ಷದ ಕೂಲಿ ಕಾರ್ಮಿಕ ಗಾರೆ ಕೆಲಸ ಮಾಡಿಕೊಂಡು ಕುಟುಂಬದ ಆಧಾರ ಸ್ತಂಭವಾಗಿದ್ದ. ಆದರೆ ಕುಡಿಯುವ ಅಭ್ಯಾಸವಿದ್ದ ಶಿವು ಗಾರೆ ಕೆಲಸ ಮುಗಿಸಿಕೊಂಡು ಎಣ್ಣೆ ಏರಿಸಿ ಮನೆಗೆ ಬಂದಿದ್ದಾನೆ. ಯಾಕೋ ಕಿಕ್ಕೇ ಏರ್ತಿಲ್ಲ ಅಂತ ಮತ್ತೊಂದು ಬಾಟಲ್ ತರಲು ಬಾರ್ ಗೆ ಹೋಗಿ ಬೈಕ್ನಲ್ಲಿ ವಾಪಸ್ ಬರುವಾಗ ಮದ್ದಾನೇಶ್ವರ ಶಾಲೆಯ ಬಳಿ ಗಾಂಜಾ ಸೇವಿಸಿ ಪಾನಮತ್ತರಾಗಿದ್ದ ಇಬ್ಬರು ಮುಸ್ಲಿಂ ಯುವಕರು ಅಡ್ಡ ಹಾಕಿದ್ದಾರೆ. ಡ್ರಾಪ್ ಕೊಡುವಂತೆ ಶಿವುಗೆ ಧಮಕಿ ಹಾಕಿದ್ದಾರೆ. ಆದರೆ ಶಿವ ಡ್ರಾಪ್ ಕೊಡಲು ನಿರಾಕರಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಮುಸ್ಲಿಂ ಯುವಕರು ಶಿವು ಮೇಲೆ ದೊಣ್ಣೆ ಹಾಗು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಶಿವ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ. ಶಿವು ಕಿವಿಯಲ್ಲಿ ರಕ್ತ ಸೋರುತ್ತಿರುವುದನ್ನು ಕಂಡು ಕುಟುಂಬದವರು ಗಾಬರಿಯಾಗಿ ವಿಚಾರಿಸಿದಾಗ ಇಬ್ಬರು ಮುಸ್ಲಿಂ ಯುವಕರು ತನ್ನ ಮೇಲೆ ಹಲ್ಲೆ ನಡೆಸಿರುವ ವಿಚಾರ ತಿಳಿಸಿದ್ದಾನೆ ಒಳ ಏಟಿನಿಂದ ತೀವ್ರ ಗಾಯಗೊಂಡಿದ್ದ ಶಿವು ಎದೆ ನೋವೆಂದು ಹೇಳಿದ್ದು ತಕ್ಷಣ ಕುಟುಂಬದವರು ಆತನನ್ನು ಆಟೋದಲ್ಲಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿ ಆದರೆ ಮಾರ್ಗದಲ್ಲೇ ಶಿವು ಪ್ರಾಣಪಕ್ಷಿ ಹಾರಿಹೋಗಿದೆ.
ಶಿವುನ ಸಹೋದರ ಅಂಗವಿಕಲನಾಗಿದ್ದು ಇಡೀ ಕುಟುಂಬದ ಜವಬ್ದಾರಿ ಶಿವನದಾಗಿತ್ತು. ಮನೆಗೆ ಆಧಾರ ಸ್ತಂಭವಾಗಿದ್ದ ಶಿವು ಹತ್ಯೆಯಿಂದ ಇಡೀ ಕುಟುಂಬ ಕಂಗಾಲಾಗಿದೆ. ಎಣ್ಣೆ ತರಲು ಹೋದವನು ಹೆಣೆವಾಗಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹತ್ಯೆ ಮಾಡಿದ ಮಹಮದ್ ನಿಜಾಮುದ್ದೀನ್ ಎಂಬಾತನನ್ನು ಗುಂಡ್ಲುಪೇಟೆ ಪೊಲೀಸರು ಘಟನೆ ನಡೆದ ಒಂದು ಗಂಟೆಯೊಳಗೆ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದು ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಎಣ್ಣೆ ಹಾಗು ಗಾಂಜಾ ನಶೆಯಲ್ಲಿ ಹಿಂದೂ ಸಮುದಾಯದ ವ್ಯಕ್ತಿಯನ್ನು ಹತ್ಯೆ ಮಾಡಿರುವುದರಿಂದ ಎರಡು ಕೋಮುಗಳ ನಡುವೆ ಗಲಾಟೆಗೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಪೊಲೀಸರು ಭಾರೀ ಮುನ್ನೆಚ್ಚರಿಕೆ ವಹಿಸಿದ್ದಾರೆ.
