ಕಲಬುರಗಿಯಲ್ಲಿ ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಚಾಲುಕ್ಯರ ಕಾಲದ ಪುರಾತನ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಮತ್ತೊಂದೆಡೆ, ಗಂಗಾವತಿಯಲ್ಲಿ ಚಾರಣಿಗರ ತಂಡವು ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ, ಭೂದಾನದ ಮಾಹಿತಿ ನೀಡುವ ಅಪರೂಪದ ಶಿಲಾಶಾಸನವನ್ನು ಪತ್ತೆ ಮಾಡಿದೆ.

ಕಲಬುರಗಿ: ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಚಾಲುಕ್ಯರ ಕಾಲದ ಪುರಾತನ ದೇಗುಲವನ್ನು ಧ್ವಂಸ ಮಾಡಿ ಗರ್ಭಗುಡಿಯಲ್ಲಿದ್ದ ಶಿವಲಿಂಗ, ಬಸವಣ್ಣ (ನಂದಿ), ಹನುಮಾನ್ ಮೂರ್ತಿಗಳನ್ನು ಭಗ್ನಗೊಳಿಸಿರುವ ದುರ್ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ನಿಧಿಶೋಧ ಕಾರ್ಯ

ಬಡದಾಳ ಗ್ರಾಮದಲ್ಲಿರುವ ‘ಬನದ ಬಸವಣ್ಣ’ ದೇವಸ್ಥಾನಕ್ಕೆ ಮಾ.25ರಂದು ರಾತ್ರಿ ನುಗ್ಗಿದ ದುಷ್ಕರ್ಮಿಗಳು, ಅಲ್ಲಿ ಪೂಜೆ ಮಾಡುತ್ತಿದ್ದ ಶಿವಲಿಂಗ, ನಂದಿ ಹಾಗೂ ಹನುಮಾನ್ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಅಲ್ಲದೇ 4 ಅಡಿ ನೆಲವನ್ನು ಅಗೆದು ನಿಧಿ ಹುಡುಕಾಟ ನಡೆಸಿದ್ದಾರೆ. ಈ ದೇಗುಲ ಚಾಲುಕ್ಯರ ಕಾಲದ್ದಾಗಿದ್ದು, ಹಿರಿಯರು ಇಲ್ಲಿ ಸಾಕಷ್ಟು ನಿಧಿ ಇದೆ ಎಂದು ಹೇಳುತ್ತಿದ್ದರು. ಅದನ್ನೇ ನೆಪ ಮಾಡಿಕೊಂಡು ಕಳ್ಳರು ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಈ ಹಿಂದೊಮ್ಮೆ ದೇವಸ್ಥಾನದ ಮುಂಭಾಗದ ಕಟ್ಟೆಯನ್ನು ಅಗೆದು ನಿಧಿ ಶೋಧ ಮಾಡಲಾಗಿತ್ತು. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದವರನ್ನು ಪತ್ತೆಹಚ್ಚಿ ಬಂಧಿಸುವ ಮೂಲಕ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ

ಗಂಗಾವತಿ: ನಗರದ ವಿರುಪಾಪುರ ವ್ಯಾಪ್ತಿಯಲ್ಲಿ ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ ಶಿಲಾಶಾಸನವನ್ನು ಗಂಗಾವತಿ ಚಾರಣ ಬಳಗ ಪತ್ತೆ ಮಾಡಿದೆ ಎಂದು ಚಾರಣ ಬಳಗದ ಸಂಚಾಲಕ ದಂತವೈದ್ಯ ಡಾ. ಶಿವಕುಮಾರ್ ಮಾಲಿಪಾಟೀಲ್ ತಿಳಿಸಿದ್ದಾರೆ.

ನಗರದ ವಿರುಪಾಪುರ ವ್ಯಾಪ್ತಿಯ ಹಿರೇಜಂತಕಲ್ ವೀರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯೊಂದರಲ್ಲಿ ಈ ಶಾಸನ ಕಂಡು ಬಂದಿದೆ. ಶಾಸನವನ್ನು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಪರಿಶೀಲಿಸಿದ್ದು, ಶಾಸನವು 13 ಸಾಲುಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ. ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಶಾಸನವು ಶಾಲಿವಾಹನ 1448ನೇ ಸಂವತ್ಸರದ ಮಾಘ ಶುದ್ಧ 7ರ ಕಾಲ ಉಲ್ಲೇಖಿಸುತ್ತದೆ. ಅದು ಪ್ರಸ್ತುತ ಸಾಮಾನ್ಯ ಶಕೆ 1527 ಕ್ಕೆ ಸರಿಯಾಗುತ್ತದೆ. ಅಂದರೆ 16ನೇ ಶತಮಾನದ ಶಾಸನವಿದು.

ಇದನ್ನೂ ಓದಿ: ಲಕ್ಕುಂಡಿ ಹಳೇ ಹಂಡೆಯಲ್ಲಿ ಗೋಲ್ಡನ್ ಕವರ್ ಚಾಕ್ಲೆಟ್ ಹಾಕಿ 22 ಲಕ್ಷ ದೋಚಿದ್ದ ಮೌಲ್ವಿ ಅರೆಸ್ಟ್

ಭೂಮಿ ದಾನದ ಮಾಹಿತಿ ನೀಡುತ್ತಿರೋ ಶಾಸನ

ಶಾಸನದಲ್ಲಿ ಶ್ರೀ ಮನ್ಮಾಹಾರಾಜಾಧಿರಾಜ ಪರಮೇಶ್ವರ ವೀರಪ್ರತಾಪ ಕೃಷ್ಣರಾಯರ ಆಳ್ವಿಕೆ ಕಾಲದಲ್ಲಿ ಆನೆಗುಂದಿ ಮಾಗಣೆಯನ್ನು ಯಾವುದೋ ವ್ಯಕ್ತಿಯ (ಅಕ್ಷರ ಸವೆದಿವೆ) ಮಗ ಪಾಲಿಸುತ್ತಿರುವಾಗ ಭದ್ರಯ್ಯನ ಮಗ ಗಂಧದ ಸೂರಯ್ಯನು ವಿರುಪಾಪುರ ಸೀಮೆಯ ಮಲ್ಲಿಕಾರ್ಜುನ ದೇವರಿಗೆ ಹಾಗೂ ಕೆಲವು ಬ್ರಾಹ್ಮಣರಿಗೆ ಭೂಮಿ ದಾನ ನೀಡಿದ ಬಗ್ಗೆ ತಿಳಿಸುತ್ತದೆ. ಶಾಸನದ ಕೆಳಸಾಲುಗಳು ಸವೆದಿರುವುದರಿಂದ ಹೆಚ್ಚಿನ ವಿಷಯ ಸ್ಪಷ್ಟವಾಗುತ್ತಿಲ್ಲ.

ಗಂಗಾವತಿ ನಗರದಲ್ಲಿ ಈಗಾಗಲೇ ವಿಜಯನಗರದ ಪ್ರೌಢದೇವರಾಯ ಮತ್ತು ಸದಾಶಿವದೇವರಾಯನ ಶಾಸನಗಳು ಮಾತ್ರ ದೊರೆತಿದ್ದವು. ಈಗ ಕೃಷ್ಣದೇವರಾಯನ ಕಾಲದ ಶಾಸನ ದೊರೆತಿರುವುದು ಮಹತ್ವದ ಸಂಗತಿಯಾಗಿದೆ. ಹಾಗಾಗಿ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಮತ್ತು ಶಾಸನ ಶೋಧನೆಯಲ್ಲಿ ಚಾರಣ ಬಳಗದ ಕೇಶವ ನಾಯ್ಕ್,ಪ್ರಹ್ಲಾದ್ ಕುಲಕರ್ಣಿ, ಮಂಜುನಾಥ್ ಗುಡ್ಲಾನೂರ, ಚಿದಾನಂದ ಕೀರ್ತಿ ಮತ್ತು ವಿನಯ್ ಕುಮಾರ್ ಅಂಗಡಿ ನೆರವಾಗಿದ್ದಾರೆಂದು ಡಾ.ಕೋಲ್ಕಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ನಿಧಿ ಆಸೆ ತೋರಿಸಿ ಯಮಾರಿಸುವ ಹೂವಿನ ಹಡಗಲಿಯ ಗ್ಯಾಂಗ್ - ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ

Scroll to load tweet…