ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಇವು ಬಿಜೆಪಿ ಪಕ್ಷದ ಮೂಲಮಂತ್ರಗಳಾಗಿವೆ. ಸರ್ವರನ್ನು ಜೊತೆಗೆ ಕರೆದೊಯ್ಯುವುದೇ ಪಕ್ಷದ ಮಂತ್ರವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಯಳಂದೂರು (ಮೇ.27): ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಇವು ಬಿಜೆಪಿ ಪಕ್ಷದ ಮೂಲಮಂತ್ರಗಳಾಗಿವೆ. ಸರ್ವರನ್ನು ಜೊತೆಗೆ ಕರೆದೊಯ್ಯುವುದೇ ಪಕ್ಷದ ಮಂತ್ರವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ-2026ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದುತ್ವ ಎಂಬುದು ಧರ್ಮವಲ್ಲ ನಮ್ಮ ಸಂಸ್ಕೃತಿ ಹಾಗೂ ನಮ್ಮ ನಾಗರೀಕತೆಯಾಗಿದೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಹಿಂದೂಸ್ಥಾನಿಗಳೇ ಆಗಿದ್ದಾರೆ. ದೇಶದ ಆಸ್ಮಿತೆ ನಾವೆಲ್ಲರೂ ಒಂದೇ ಎಂಬುದೇ ಹಿಂದುತ್ವವಾಗಿದೆ. ಬಂಧುತ್ವ ಎಂದರೆ ದೇಶದಲ್ಲಿ ಹುಟ್ಟಿ ಇಲ್ಲೇ ವಾಸಿಸುವ ಪ್ರತಿ ಜಾತಿ ಧರ್ಮದವರು ವಾಸಿಸುವರು ಇಲ್ಲಿನ ಬಂಧುಗಳಾಗಿದ್ದಾರೆ. ಆದರೆ ಇಲ್ಲಿ ಹುಟ್ಟಿದವರಿಗೆ ಮಾತ್ರ ಇಲ್ಲಿ ಸ್ಥಾನವಿದೆ. ನುಸುಳುಕೋರರನ್ನು ನಾವು ಹೊಗರೆ ಕಳುಹಿಸುತ್ತೇವೆ. ಅವರಿಗೆ ಇಲ್ಲಿರಲು ಅವಕಾಶ ನೀಡದಿರುವುದೇ ಸಿಂಧುತ್ವವಾಗಿದೆ.
ನಮ್ಮ ಪಕ್ಷ ಮುಸ್ಲಿಮರ ವಿರೋಧಿಯಲ್ಲ, ನಾವು ಅವರಿಗೆ ಇದುವರೆವಿಗೂ ಯಾವುದೇ ತೊಂದರೆ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮತಗಳೂ ಬಿಜೆಪಿಗೆ ಬಿದ್ದಿವೆ. ಅವರಿಗೂ ಕೂಡ ಯಾವ ಪಕ್ಷ ರಾಷ್ಟ್ರದ ಪ್ರಗತಿಗೆ, ಇಲ್ಲಿ ವಾಸಿಸುವ ನಾಗರಿಕರ ಪರವಾಗಿ ನಿಂತಿದೆ ಎಂಬುದು ಈಗೀಗ ಅರಿವಾಗುತ್ತಿದೆ. ಬಿಜೆಪಿ ನಡೆಸುವ ಇಂತಹ ಪ್ರಶಿಕ್ಷಣ ಶಿಬಿರಗಳು ಯಾವ ರಾಜಕೀಯ ಪಕ್ಷಗಳು ಮಾಡುವುದಿಲ್ಲ. ಇದೊಂದು ನಮ್ಮ ಸಂಘಟನಾ ಶಕ್ತಿಯಾಗಿದೆ. ಇದನ್ನು ಹೆಚ್ಚು ಮಾಡಿಕೊಂಡು, ನಾವು ಮುಂದಿನ ಎಲ್ಲಾ ಚುನಾವಣೆಗಳಿಗೂ ಈಗಿಂದಲೇ ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು.
ಸಿದ್ದರಾಮಯ್ಯ ಹೈಕಮಾಂಡ್
ಕಾಂಗ್ರೆಸ್‌ನಲ್ಲಿ ಯಾವ ಹೈಕಮಾಂಡ್ ಕೂಡ ಇಲ್ಲ. ಇಲ್ಲಿ ಸಿದ್ದರಾಮಯ್ಯರೇ ಹೈಕಮಾಂಡ್ ಆಗಿದ್ದಾರೆ. ಇವರಿಗೆ ಸಿಎಂ ಕುರ್ಚಿಯಿಂದ ಕೆಳಕ್ಕೆ ಇಳಿಸಿದರೆ ಸರ್ಕಾರ ಬೀಳುತ್ತದೆ. ಈ ವ್ಯಕ್ತಿ 3 ವರ್ಷಗಳ ಅವಧಿಯಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, 4.5 ಲಕ್ಷ ಕೋಟಿ ಸಾಲ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ. ಬಜೆಟ್ ಚಾಂಪಿಯನ್ ಎನಿಸಿಕೊಳ್ಳುವ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು ಎಂದರು.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಈ ಶಿಬಿರ ನನಗೂ ಕೂಡ ಅನೇಕ ವಿಷಯಗಳನ್ನು ಕಲಿಸಿದೆ. ವ್ಯಕ್ತಿತ್ವ, ರಾಜಕೀಯ ಚತುರತೆ ರೂಪಿಸಲು ಇಂತಹ ಶಿಬಿರಗಳು ನಮಗೆ ಸಹಕಾರಿಯಾಗಿವೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟಿತ ಹೋರಾಟ ಮಾಡಬೇಕಿದೆ. ದೇಶದಲ್ಲಿ ಪಕ್ಷ ಹೆಚ್ಚು ಸಂಘಟಿತವಾಗಿವೆ. 17 ರಾಜ್ಯಗಳಲ್ಲಿ ನಾವು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ದೇಶದಲ್ಲಿ 1798 ಶಾಸಕರು ನಮ್ಮ ಪಕ್ಷದವರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿಯನ್ನೂ ಕೂಡ ನಾವೇ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


