ಚೈತ್ರಾ ಕುಂದಾಪುರ ಎಂಎಲ್ಎ ಸೀಟ್ ಡೀಲ್ ಪ್ರಕರಣ: ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ಬುಲಾವ್ ನೋಟಿಸ್!
ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಪ್ರಕರಣದಲ್ಲಿ ಮಂಗಳೂರಿನ ಗುರುಪುರ ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ಪೊಲೀಸರು ನೋಟೀಸ್ ಜಾರಿಮಾಡಿದ್ದಾರೆ.
ದಕ್ಷಿಣ ಕನ್ನಡ (ಅ.10): ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಉಡುಪಿಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ಪಡೆದು ವಂಚನೆ ಮಾಡಿರುವ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಹಿರೇಹಡಗಲಿ ಅಭಿನವಶ್ರೀ ಸ್ವಾಮೀಜಿ ಸೇರಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಮಂಗಳೂರಿನ ಗುರುಪುರ ವಜ್ರದೇಹಿ ಸ್ವಾಮೀಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಸಿಸಿಬಿ ನೋಟೀಸ್ ಜಾರಿಮಾಡಿದ್ದಾರೆ.
ಹೌದು, ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ಉದ್ಯಮಿ ಗೋವಿಂದಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಈಗ ಎಲ್ಲ ಆರೋಪಿಗಳನ್ನು ವಿಚಾರಣೆ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಗುರುಪುರ ವಜ್ರದೇಹಿ ಸ್ವಾಮೀಜಿಗೆ ಬೆಂಗಳೂರು ಸಿಸಿಬಿ ನೋಟೀಸ್ ನೀಡಲಾಗಿದೆ. ಬೆಂಗಳೂರು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ರೀನಾ ಸುವರ್ಣ ಅವರಿಂದ ನೋಟೀಸ್ ನೀಡಲಾಗಿದ್ದು, ಕಲಂ 91 ಸಿಆರ್‌ಪಿಸಿ ಅಡಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
ಚೈತ್ರಾ ಕುಂದಾಪುರ ಪ್ರಕರಣ: ಹಿಂದೂ ಸಂಘಟನೆಗಳಿಗೆ ಸಂಬಂಧ ಇಲ್ಲ, ಶರಣ್ ಪಂಪ್‌ವೆಲ್
ಸಿಸಿಬಿ ಪೊಲೀಸರ ನೋಟಿಸ್ ತಲುಪಿದ ಕೂಡಲೇ ಬೆಂಗಳೂರು ನಗರ ಸಿಸಿಬಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಇದರಿಂದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಗಲಿಬಿಲಿಗೊಂಡಿದ್ದಾರೆ. ಬಂಡೇಪಾಳ್ಯ ಪೊಲೀಸ್ ಠಾಣೆ ಮೊ.ಸಂ 206/2023 ರ ಕೇಸ್ ವಿಚಾರಣೆ ಮಾಡಲು ಸ್ವಾಮೀಜಿಗೆ ಬುಲಾವ್ ಮಾಡಲಾಗಿದೆ. ಇನ್ನು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಗ್ಯಾಂಗ್‌ನಲ್ಲಿ ವಜ್ರದೇಹಿ ಸ್ವಾಮೀಜಿ ಹೆಸರು ಪ್ರಸ್ತಾಪವಾಗಿತ್ತು. ಚೈತ್ರಾ ಐಟಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಉಲ್ಲೇಖಿಸಿದ್ದಳು. ಈ ವಿಚಾರದಲ್ಲಿ ನನಗೆ ಸ್ವಾಮೀಜಿ ಫೋನ್ ಮಾಡಿದ್ದರೆಂದು ಚೈತ್ರಾ ಕುಂದಾಪುರ ತಿಳಿಸಿದ್ದಳು. ಚೈತ್ರಾ ಬಂಧನವಾದ ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಜ್ರದೇಹಿ ಸ್ವಾಮೀಜಿ ಚೈತ್ರಾ ಬರೆದಿರುವ ಪತ್ರದ ಬಗ್ಗೆ ಯಾವುದೇ ತನಿಖೆಗೆ ಸಿದ್ದರೆಂದು ತಿಳಿಸಿದ್ದರು.
ಬೆಂಗಳೂರು ಹಿಂದೂಗಳಿಗೆ ಶಾಕಿಂಗ್ ನ್ಯೂಸ್: ಗಣೇಶ ಮೆರವಣಿಗೆ ನಿಷೇಧಿಸಿದ ಪೊಲೀಸ್ ಇಲಾಖೆ
ಸೆ.20ರಂದು ಪೊಲೀಸರ ಬಲೆಗೆ ಬಿದ್ದ ಆರೋಪಿ ಅಭಿನವ ಹಾಲಶ್ರೀ: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ 3.5 ಕೋಟಿ ರೂ. ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿ 1.5 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಚೈತ್ರಾ ಕುಂದಾಪುರ ಅವರು ಬಂಧನವಾದ ವೇಳೆ ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಬಯಲಿಗೆ ಬರಲಿದೆ ಎಂದು ಹೇಳಿದ್ದರು. ಇನ್ನು ಟಿಕೆಟ್ ವಂಚನೆ ದೂರು ದಾಖಲಾಗುತ್ತಿದ್ದಂತೆ ಪರಾರಿ ಆಗಿದ್ದ ಅಭಿನವ ಹಾಲಶ್ರೀ ತಮ್ಮ ಹಾಲಸ್ವಾಮಿ ಮಠವನ್ನು ತೊರೆದು ಪೊಲೀಸರ ಕಣ್ತಪ್ಪಿಸಿ 11 ದಿನಗಳ ಕಾಲ ಪರಾರಿ ಆಗಿದ್ದರು. ನಿನ್ನೆ ಮಂಗಳವಾರ ಒಡಿಶಾದ ಕಟಕ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆದರೆ, ಜಾಮೀನು ನಿರಾಕರಣೆ ಮಾಡಿ ಪೊಲೀಸರ ವಶಕ್ಕೆ ನೀಡಲಾಗಿತ್ತು.