Asianet Suvarna News Asianet Suvarna News

ಚೈತ್ರಾ ಕುಂದಾಪುರ ಪ್ರಕರಣ: ಹಿಂದೂ ಸಂಘಟನೆಗಳಿಗೆ ಸಂಬಂಧ ಇಲ್ಲ, ಶರಣ್‌ ಪಂಪ್‌ವೆಲ್‌

ಚೈತ್ರಾ ನಮ್ಮ ಸಂಘಟನೆಯ ಸದಸ್ಯೆ ಅಲ್ಲ, ಚೆನ್ನಾಗಿ ಭಾಷಣ ಮಾಡುತ್ತಿದ್ದುದರಿಂದ ಆಕೆಯನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗಿದೆ. ಈಗ ಆಕೆಯ ವಿರುದ್ಧ ವಂಚನೆಯ ಕೇಸ್‌ ದಾಖಲಾಗಿದೆ. ಯಾರು ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಇಂತಹ ಘಟನೆಗಳಿಗೆ ನಮ್ಮ ಸಂಘಟನೆ ಆಸ್ಪದ ಹಾಗೂ ಸಹಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಶರಣ್‌ ಪಂಪ್‌ವೆಲ್‌ 

Sharan Pumpwell Talks Over Chaitra Kundapura Case grg
Author
First Published Sep 22, 2023, 1:30 AM IST

ಮಂಗಳೂರು(ಸೆ.22): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಬಹುಕೋಟಿ ರು. ವಂಚಿಸಿದ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಮತ್ತು ವಿಶ್ವಹಿಂದು ಪರಿಷ್‌ ಹಾಗೂ ಬಜರಂಗದಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದ್ದಾರೆ.

ವಿಹಿಂಪ ಮಂಗಳೂರು ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈತ್ರಾ ನಮ್ಮ ಸಂಘಟನೆಯ ಸದಸ್ಯೆ ಅಲ್ಲ, ಚೆನ್ನಾಗಿ ಭಾಷಣ ಮಾಡುತ್ತಿದ್ದುದರಿಂದ ಆಕೆಯನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗಿದೆ. ಈಗ ಆಕೆಯ ವಿರುದ್ಧ ವಂಚನೆಯ ಕೇಸ್‌ ದಾಖಲಾಗಿದೆ. ಯಾರು ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಇಂತಹ ಘಟನೆಗಳಿಗೆ ನಮ್ಮ ಸಂಘಟನೆ ಆಸ್ಪದ ಹಾಗೂ ಸಹಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿನ ಗುರುಪುರ ಶ್ರೀರಾಜಶೇಖರಾನಂದ ಸ್ವಾಮೀಜಿಗೂ ಆಕೆಯ ವಂಚನೆ ಪ್ರಕರಣಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಸ್ವಾಮೀಜಿ ಅವರು ನಮ್ಮ ಗಮನಕ್ಕೆ ತಂದಿದ್ದರು. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಚೈತ್ರಾ ಕುಂದಾಪುರ ನಮ್ಮವಳಲ್ಲ ಎಂದು ಕೈಬಿಟ್ಟ ವಿಶ್ವ ಹಿಂದೂ ಪರಿಷತ್

ಸುಳ್ಳು ಕೇಸು ಹಾಕಿದರೆ ಹೋರಾಟ:

ಬಜರಂಗದಳ ದೇಶಭಕ್ತ ಸಂಘಟನೆಯಾಗಿದ್ದು, ಧರ್ಮ ವಿರೋಧಿಯಾಗಿ ಎಂದೂ ನಡೆಯುವುದಿಲ್ಲ, ಹೀಗಿರುವಾಗ ಬಜರಂಗದಳವನ್ನು ನಿಷೇಧಿಸುವುದು ಸಾಧ್ಯವಾಗದು ಎಂದು ಶರಣ್‌ ಪಂಪ್‌ವೆಲ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
2024ರ ಮಕರ ಸಂಕ್ರಮಣ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಇನ್ನು ಒಂದು ತಿಂಗಳಲ್ಲಿ ಮತ್ತೆ ಮಾರ್ಗದರ್ಶಕ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ ರಾಮಮಂದಿರ ಉದ್ಘಾಟನೆಯ ಎಲ್ಲ ವಿಚಾರಗಳೂ ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಅಯೋಧ್ಯೆಯಲ್ಲಿ ಕರ ಸೇವೆ ಸೇರಿದಂತೆ ಯಾವುದೇ ರೀತಿಯ ಸಹಕಾರಕ್ಕೆ ನಮ್ಮ ಸಂಘಟನೆ ಸದಾ ಸನ್ನದ್ಧವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಶರಣ್‌ ಪಂಪ್‌ವೆಲ್‌ ಉತ್ತರಿಸಿದರು.
ವಿಹಿಂಪ ಮಂಗಳೂರು ವಿಭಾಗ ಅಧ್ಯಕ್ಷ ಪುರುಷೋತ್ತಮ, ಮುಖಂಡರಾದ ಭುಜಂಗ ಕುಲಾಲ್‌, ನವೀನ್‌, ಪುನೀತ್‌ ಅತ್ತಾವರ ಇದ್ದರು.

9ರಂದು ಮಂಗಳೂರಲ್ಲಿ ಸಾರ್ವಜನಿಕ ಸಭೆ

ಬಜರಂಗದಳ ನೇತೃತ್ವದಲ್ಲಿ ಸೆ.25ರಿಂದ ರಾಜ್ಯಾದ್ಯಂತ ನಡೆಯುವ ಶೌರ್ಯ ಜಾಗರಣ ರಥಯಾತ್ರೆ ಅಕ್ಟೋಬರ್‌ 6ರಂದು ಸುಳ್ಯ ಮೂಲಕ ದ.ಕ.ಜಿಲ್ಲೆ ಪ್ರವೇಶಿಸಲಿದೆ. ಸುಳ್ಯದಲ್ಲಿ ಬೃಹತ್‌ ಕಾರ್ಯಕ್ರಮ ಬಳಿಕ ಅ.7ರಂದು ಪುತ್ತೂರು ನಗರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಅ.9ರಂದು ಮಂಗಳೂರಿನಲ್ಲಿ ಬೃಹತ್‌ ಶೋಭಾಯಾತ್ರೆಯೊಂದಿಗೆ ಕದ್ರಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ರಥಯಾತ್ರೆಯ ಸಮಾರೋಪ ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ನಡೆಯಲಿದೆ ಎಂದು ಶರಣ್‌ ಪಂಪ್‌ವೆಲ್‌ ಹೇಳಿದರು.

Follow Us:
Download App:
  • android
  • ios