ಮಂಗನ ಕಾಯಿಲೆ ಎಫೆಕ್ಟ್; ಬೀಚ್ ಗೆ ಬರ್ಬೇಡಿ, ಕಾಡಿಗೆ ಹೋಗ್ಬೇಡಿ...!
ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಮತ್ತು ಮಲೆನಾಡಿನ ಕಾಡಿನ ಪ್ರವಾಸಿ ತಾಣಗಳಿಗೆ ಹೋಗದಂತೆ, ಟ್ರಕ್ಕಿಂಗ್ ಮಾಡದಂತೆ ಸೂಚಿಸಲಾಗಿದೆ.
ಗೋಕರ್ಣ, [ಫೆ.02]: ಕರಾವಳಿ ಹಾಗು ಮಲೆನಾಡು ಪ್ರದೇಶಗಳಲ್ಲಿ ಮಂಗಲ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಬೇರೆ ಕಡೆಯಿಂದ ಬರುವ ಪ್ರವಾಸಿಗರಿಗೂ ತಗುಲುತ್ತಿದೆ. ಇದ್ರಿಂದ ಇಲ್ಲಿನ ಬೀಚ್ ಹೊಗದಂತೆ, ಟ್ರಕ್ಕಿಂಗ್ ಮಾಡದಂತೆ ಅಲ್ಲಲ್ಲಿ ನಾಮಫಲಕಗಳನ್ನು ಹಾಕಲಾಗಿದೆ.
ಪ್ರಾನ್ಸ್ ದೇಶದಿಂದ ಪ್ರವಾಸಕ್ಕೆ ಬಂದಿದ್ದ 33 ವರ್ಷ ಮಹಿಳೆಯೊಬ್ಬರು ಮಂಗನಕಾಯಿಲೆಗೆ ತುತ್ತಾಗಿದ್ದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಷ್ಟೇ ಸೀಮಿತವಾಗಿದ್ದ ಮಂಗನಕಾಯಿಲೆ ಇದೀಗ ಪ್ರವಾಸಿಗರಿಗೂ ಹರಡಿದ್ದು ಆತಂಕಕಾರಿಯಾಗಿದೆ.
ಈಕೆ ಕೆಲವು ಗೆಳೆಯರ ಜೊತೆಗೆ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದು, ನಾಲ್ಕು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬೀಚ್ ಮತ್ತು ಇಲ್ಲಿನ ಕಾಡಿನ ಮಧ್ಯೆ ಇರುವ ಪ್ರಸಿದ್ಧ ತಾಣ ಯಾಣಕ್ಕೆ ಹೋಗಿದ್ದರು.
ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿದ ಮಲೆನಾಡ ಹುಡುಗ..ಸಂಪೂರ್ಣ ಉಚಿತ
ನಂತರ ತೀವ್ರ ಜ್ವರಕ್ಕೆ ತುತ್ತಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಶುಕ್ರವಾರ ಕೆಎಂಸಿಗೆ ದಾಖಲಾಗಿದ್ದು ಹೆಚ್ಚಿನ ಪರೀಕ್ಷೆ ನಡೆಸಲಾಗಿತ್ತು, ಶನಿವಾರ ಅವರಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ.
ಬಹುಶಃ ಯಾಣದ ಕಾಡಿನಲ್ಲಿ ಆಕೆಗೆ ಮಂಗನಕಾಯಿಲೆಗೆ ತಗುಲಿರಬೇಕು ಎಂದು ಶಂಕಿಸಲಾಗಿದೆ. ಆಕೆಯ ಜೊತೆಗೆ ಬಂದಿದ್ದ ಇತರರ ಪ್ರವಾಸಿಗರನ್ನು ಪರೀಕ್ಷೆಗೊಳಪಡಿಸಲಾಗಿದೆ.
ಕರಾವಳಿ ಮತ್ತು ಮಲೆನಾಡಿನ ಕಾಡಿನ ಪ್ರವಾಸಿ ತಾಣಗಳಿಗೆ ಹೋಗದಂತೆ, ಟ್ರಕ್ಕಿಂಗ್ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸಾಲದಕ್ಕೂ ಅಲ್ಲಲ್ಲಿ ನಾಮಫಲಕಗಳನ್ನು ಹಾಕಲಾಗಿದೆ. ಇದನ್ನುತಿಳಿಯದೇ ಕಾಡಿಗೆ ಹೋಗುವ ವಿದೇಶ ಪ್ರವಾಸಿಗರಿಗೆ ಈ ಕಾಯಿಲೆ ಹರಡುವ ಸಾಧ್ಯತೆಗಳು ಹೆಚ್ಚಿವೆ.
ಉಡುಪಿ ಜಿಲ್ಲೆ: 80ಕ್ಕೂ ಹೆಚ್ಚು ಮಂಗಗಳ ಸಾವು ತಂದ ಆತಂಕ
55 ಮಂದಿಗೆ ಕಾಯಿಲೆ ದೃಢ :ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳೆದೊಂದು ತಿಂಗಳಲ್ಲಿ ಇದುವರೆಗೆ ಒಟ್ಟು152 ಮಂದಿ ತೀವ್ರ ಜ್ವರದಿಂದ ಚಿಕಿತ್ಸೆಗೆ ದಾಖಲಾಗಿದ್ದು, ಅವರಲ್ಲಿ ಒಟ್ಟು 55 ಮಂದಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ.10 ಜನರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಉಳಿದವರು ಸಾಮಾನ್ಯ ಜ್ವರದಿಂದ ನರಳುತ್ತಿದ್ದು, ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗದ 2 ಮಂದಿ ಬಲಿ
ಇದುವರೆಗೆ ಕೆಎಂಸಿ ಆಸ್ಪತ್ರೆಯಲ್ಲಿ ಪತ್ತೆಯಾಗಿರುವ ಎಲ್ಲಾ ಮಂಗನಕಾಯಿಲೆ ರೋಗಿಗಳು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಸುತ್ತಮುತ್ತಲಿನವರಾಗಿದ್ದಾರೆ.
ಅವರಲ್ಲಿ ಇದುವರೆಗೆ 82 ವರ್ಷದ ಮಹಿಳೆ ಜ.19ರಂದು ಮತ್ತು 75 ವರ್ಷದ ಗಂಡಸೊಬ್ಬರು ತೀವ್ರ ಮಂಗನಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಇಬ್ಬರು ರೋಗಿಗಳಿಗೆ ಎಚ್1ಎನ್1 ಇರುವುದು ಪತ್ತೆಯಾಗಿದೆ.
ಮಂಗನ ಕಾಯಿಲೆ: ಮಲೆನಾಡಲ್ಲಿ ಮರಣ ಮೃದಂಗ
118 ಮಂಗಗಳ ಸಾವು
ಉಡುಪಿ ಜಿಲ್ಲೆಯಲ್ಲಿ ಮನುಷ್ಯರಿಗೆ ಯಾರಿಗೂ ಮಂಗನಕಾಯಿಲೆ ಹರಡಿರದಿದ್ದರೂ, ಮಂಗನಕಾಯಿಲೆಯಿಂದ ಪ್ರತಿನಿತ್ಯ ಮಂಗಗಳು ಸಾವನಪ್ಪುತ್ತಿವೆ.
ಶುಕ್ರವಾರ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಮತ್ತು ಉಡುಪಿ ತಾಲೂಕಿನ ಮಣಿಪುರಗಳಲ್ಲಿ 2 ಮಂಗಗಳು ಅಸಹಜ ರೀತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 118 ಮಂಗಗಳು ಮೃತಪಟ್ಟಿವೆ.