ಗೋಪಾಲ್‌ ಯಡಗೆರೆ

ಕಳೆದ 15 ದಿನಗಳ ಅವಧಿಯಲ್ಲಿ ಸಾಗರ ತಾಲೂಕಿನ ಬಾರಂದೂರು ಹೋಬಳಿಯೊಂದರಲ್ಲಿಯೇ ಆರು ಜನರನ್ನು ಬಲಿ ಪಡೆದಿದೆ. 9 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಸುಮಾರು 30 ಜನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾಯಿಲೆ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲದೆ.

ರೋಗದ ಗುಣಲಕ್ಷಣಗಳೇನು?

ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ವಾಂತಿ, ತಲೆನೊವು, ಮೂಗು, ಬಾಯಿ, ಕರುಳು ಮತ್ತು ಗುದದ್ವಾರದಲ್ಲಿ ರಕ್ತಸ್ರಾವ, ಕೀಲುನೊವು ಹಾಗೂ ಮಾಂಸ ಖಂಡಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಜ್ವರ ಉಲ್ಬಣಿಸಿದರೆ ಹತೋಟಿ ಸುಲಭವಲ್ಲ. ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಕೊನೆಗೆ ರೋಗಿ ಮೃತಪಡುತ್ತಾನೆ. ಆರಂಭದಲ್ಲಿ ಚಿಕಿತ್ಸೆ ನೀಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಸ್ವಲ್ಪ ತಡವಾದರೂ ರೋಗಿ ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಸ್ಥಿತಿಗೆ ತಲುಪುತ್ತಾನೆ. ಬಹು ಅಂಗಾಂಗ ವೈಪಲ್ಯ ಕಾಣಿಸುತ್ತದೆ. ಪ್ರಜ್ಞೆ ಕಳೆದುಕೊಂಡು ಕೊನೆಗೆ ಸಾವನ್ನಪ್ಪುತ್ತಾನೆ.

ಯಾರು ಇದರ ಬಲಿಪಶುಗಳು?

ಸಾಮಾನ್ಯವಾಗಿ ಕಾಡಂಚಿನಲ್ಲಿ ವಾಸ ಮಾಡುವವರಿಗೆ, ಕಾಡಿನ ನಿರಂತರ ಸಂಪರ್ಕ ಇರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಜನರೇ ಇದರ ಬಲಿಪಶುಗಳು. ಕಾಡಿಗೆ ಹೋಗದೇ ಇದ್ದರೂ, ಕಾಡಿಗೆ ಜಾನುವಾರುಗಳನ್ನು ಬಿಡುವ ಮಂದಿ, ಬಳಿಕ ಇದರ ಸಂಪರ್ಕಕ್ಕೆ ಬಂದಾಗಲೂ ಈ ರೋಗ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.

ಇಡೀ ಊರಿಗೇ ಮಂಗನ ಕಾಯಿಲೆ, ಒಂದು ಹೃದಯ ವಿದ್ರಾವಕ ಪತ್ರ

ಮೊದಲು ಕಾಣಿಸಿಕೊಂಡಿದ್ದು ಎಲ್ಲಿ ?

ಈ ರೋಗ ಮೊದಲು ಕಾಣಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ. 1957ರಲ್ಲಿ ಕಾಣಿಸಿಕೊಂಡ ಚಿಕಿತ್ಸೆಯಿಲ್ಲದ ಈ ಕಾಯಿಲೆ ವೈದ್ಯರನ್ನು ದಂಗು ಬಡಿಸಿತ್ತು. ಇಲ್ಲಿ ಮೊದಲು ಕಾಣಿಸಿದ್ದರಿಂದ ಇದಕ್ಕೆ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌(ಕೆಎಫ್‌ಡಿ) ಎಂದು ಹೆಸರು ಬಂತು. ಕೆಲವೇ ವರ್ಷಗಳಲ್ಲಿ ಇದು ತೀರ್ಥಹಳ್ಳಿ ಮತ್ತು ಶಿಕಾರಿಪುರದಲ್ಲಿ ಕಾಣಿಸಿಕೊಂಡಿತು. ನಂತರ ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಕಾಣಿಸಿಕೊಂಡಿತು. ಇತ್ತೀಚಿನ ದಶಕದಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿಯೂ ಕೆಲವು ಪ್ರಕರಣ ವರದಿಯಾಗಿದೆ. ಕೇರಳದ ವೈನಾಡು ಮತ್ತು ಮಲ್ಲಂಪುರ ಜಿಲ್ಲೆ, ತಮಿಳುನಾಡಿನ ನೀಲಗಿರಿ ಜಿಲ್ಲೆಗಳಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನುತ್ತದೆ ಆರೋಗ್ಯ ಇಲಾಖೆಯ ಮೂಲಗಳು. 2013 ರಲ್ಲಿ ಬಂಡೀಪುರ ರಕ್ಷಿತಾರಣ್ಯದಲ್ಲಿಯೂ 2015ರಲ್ಲಿ ಈಶಾನ್ಯ ಗೋವಾ ರಾಜ್ಯದ ಗ್ರಾಮವೊಂದರಲ್ಲಿಯೂ ಈ ರೋಗ ಕಾಣಿಸಿಕೊಂಡಿತ್ತು. ಈ ರೋಗ ಕುರಿತಾದ ಸಂಶೋಧನೆ ವೇಳೆಯಲ್ಲಿ ಭಾರತದ ಸೌರಾಷ್ಟ್ರದ ಭಾಗಗಳು, ಕೊಲ್ಕತ್ತಾ, ಅಂಡಮಾನ್‌ ದ್ವೀಪಗಳಲ್ಲಿ ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್‌ ಮಾದರಿಯ ವೈರಸ್ಸುಗಳು ಪತ್ತೆಯಾಗಿದೆ.

ಬೇಸಿಗೆಯಲ್ಲೇ ಉಪಟಳ ಹೆಚ್ಚು

ಮಳೆಗಾಲ ಆರಂಭವಾಗುತ್ತಿದ್ದಂತೆ ಈ ವೈರಸ್‌ಗಳು ತನ್ನ ಪ್ರಭಾವ ನಿಲ್ಲಿಸುತ್ತವೆ. ನಾಶವಾದಂತೆ ಕಾಣುತ್ತವೆ. ಆದರೆ ಬಿದಿರಿನ ಮೇಳೆಗಳಲ್ಲಿ, ಉಣ್ಣೆಗಳ ಮೈಯಲ್ಲಿ ಸದ್ಲಿಲ್ದದೆ ಇದ್ದು ಬಿಡುತ್ತವೆ. ಮುಂದಿನ ಬೇಸಿಗೆ ಆರಂಭವಾಗುತ್ತಿದ್ದಂತೆ ಪುನಃ ಜಾಗೃತವಾಸ್ಥೆ ತಲುಪುತ್ತವೆ. ತನ್ನ ಉಪಟಳ ಆರಂಭಿಸಿ ಬಿಡುತ್ತವೆ. ಪ್ರತಿ ವರ್ಷ ದೇಶದಲ್ಲಿ ಸುಮಾರು 500 ಮಂದಿ ಈ ರೋಗದಿಂದ ಬಳಲುತ್ತಾರೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ. ರಾಜ್ಯದಲ್ಲಿ 1983-84ರಲ್ಲಿ ಅತಿ ಹೆಚ್ಚು ಎಂದರೆ 2,167 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಆ ವರ್ಷ 69 ಮಂದಿ ಸಾವು ಕಂಡಿದ್ದರು.

ಮಲೆನಾಡೇ ಈ ಕಾಯಿಲೆಯ ಹಾರ್ಟ್‌ಲ್ಯಾಂಡ್‌

ದೇಶದ ಕೆಲ ಭಾಗಗಳಲ್ಲಿ ಈ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದರೂ, ಕರ್ನಾಟಕದ ಮಲೆನಾಡು ಜಿಲ್ಲೆಯೇ ಇದರ ಕೇಂದ್ರ ಬಿಂದು. ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿಯೂ ಎಲ್ಲ ವರ್ಷಗಳಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ ಎಂದೇನಿಲ್ಲ. ಒಂದೊಂದು ವರ್ಷ ಒಂದೊಂದು ಭಾಗದಲ್ಲಿ ಕಾಣಿಸಿಕೊಂಡು ಇನ್ನಿಲ್ಲದಂತೆ ಕಾಡುತ್ತದೆ. ಇತ್ತೀಚೆಗೆ ಅಂದರೆ 2014ರಲ್ಲಿ ತೀರ್ಥಹಳ್ಳಿ ತಾಲೂಕು ಒಂದರಲ್ಲಿಯೇ 6 ಮಂದಿ ಈ ಕಾಯಿಲೆಯ ಸೋಂಕಿನಿಂದ ಮೃತರಾಗಿದ್ದರು. ಸಾಗರ ತಾಲೂಕಿನಲ್ಲಿ ಕಳೆದ 10 ವರ್ಷದಿಂದ ಈ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೆ ನವೆಂಬರ್‌ನಲ್ಲಿ ಜೋಗ ಸಮೀಪದಲ್ಲಿ ಮೊದಲ ಬಾರಿಗೆ ಮಂಗ ಸತ್ತ ಸುದ್ದಿ ಬಂದಿತು. ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ತಕ್ಷಣವೇ ಸುತ್ತಮುತ್ತಲ ಗ್ರಾಮಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ವ್ಯಾಕ್ಸಿನೇಶನ್‌ ಹಾಕಲು ಆರಂಭಿಸಿದರು. ಈ ಪ್ರಕ್ರಿಯೆ ನಡೆಯುತ್ತಿದ್ದರೂ ಕೆಎಫ್‌ಡಿ ಮಾರಿ ತನ್ನ ರೌದ್ರಾವತಾರ ತೋರಿಸಿಯೇ ಬಿಟ್ಟಿತು. ವಾಸ್ತವವಾಗಿ ಬೇಸಿಗೆ ಆರಂಭವಾಗುವ ಈ ಹೊತ್ತಿನಲ್ಲಿ ಕೆಎಫ್‌ಡಿ ತನ್ನ ಮೊದಲ ಹೆಜ್ಜೆ ಇಡುವ ಸಮಯ. ಈಗಲೇ ಈ ಪರಿ ಸಾವು ಸಂಭವಿಸಿದರೆ, ಮುಂದಿನ ದಿನಗಳು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ವ್ಯಾಕ್ಸಿನೇಶನ್‌ ತೆಗೆದುಕೊಂಡವರಲ್ಲಿಯೂ ಈ ರೋಗ ಕಾಣಿಸಿದೆ. ಅಶಕ್ತರಲ್ಲಿ, ರೋಗ ನಿರೋಧಕ ಶಕ್ತಿ ಕಳೆದುಕೊಂಡವರಲ್ಲಿ ಇದು ಹೆಚ್ಚು ಕಾಣಿಸುತ್ತದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆಯಾದರೂ, ಈ ಬಾರಿ ಬಲಿಯಾದವರಲ್ಲಿ ಹರಯದವರೇ ಜಾಸ್ತಿ.

ವೈರಸ್‌ ಬೇಗನೆ ಹರಡಲು ಕಾರಣ ಏನು?

ಈಗಾಗಲೇ ಆರೋಗ್ಯ ಇಲಾಖೆ ರೋಗ ಕಾಣಿಸಿಕೊಂಡ ಪ್ರದೇಶಗಳಲ್ಲಿ ತನ್ನ ಮಿತಿಯಲ್ಲಿ ಕಾರ್ಯಕ್ರಮ ರೂಪಿಸಿದೆ. ಇಲ್ಲಿರುವ ಸಮಸ್ಯೆಯೆಂದರೆ ಈ ರೋಗ ಇರುವುದು ಗೊತ್ತಾಗುವಷ್ಟರಲ್ಲಿ ವೈರಸ್ಸುಗಳು ದೊಡ್ಡ ಪ್ರಮಾಣದಲ್ಲಿ ದಾಳಿಗೆ ಸಿದ್ಧವಾಗಿರುತ್ತವೆ. ಮೊದಲು ಕಾಡಿನಲ್ಲಿರುವ ಮಂಗಗಳ ಮೇಲೆ ದಾಳಿ ಮಾಡುತ್ತವೆ. ಮಂಗಗಳು ಸಾಯಲಾರಂಭಿಸುತ್ತವೆ. ಈ ರೀತಿ ಮಂಗಗಳು ಸತ್ತು ಬಿದ್ದ ವಿಷಯ ಗೊತ್ತಾದ ತಕ್ಷಣ ಆ ಜಾಗದ ಸುತ್ತ ಔಷಧಿಯ ಪುಡಿ ಹಾಕಿ, ಬಳಿಕ ಮಂಗಗಳನ್ನು ಅಲ್ಲಿಯೇ ಸುಟ್ಟು ಹಾಕುತ್ತಾರೆ. ಆದರೆ ಮಂಗ ಸತ್ತ ಸುದ್ದಿಯನ್ನು ಕಾಡಿಗೆ ಹೋಗುವವರು ಹೇಳಬೇಕು. ಬಹುತೇಕ ಸಂದರ್ಭದಲ್ಲಿ ಯಾರೂ ಈ ಬಗ್ಗೆ ಮಾಹಿತಿಯನ್ನೇ ನೀಡುವುದಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯವರು. ಮಂಗಗಳು ಸತ್ತ ಬಳಿಕ ಉಣ್ಣೆಗಳು ಮತ್ತಷ್ಟುಉತ್ಪತ್ತಿಯಾಗಿ ಕಾಡಿನಲ್ಲಿ ಹರಡತೊಡಗುತ್ತದೆ. ಈ ವೈರಸ್‌ ಹೊತ್ತ ಸಾಲಿಸ್‌ ಸ್ಪಿನಿಂಜರಾ ಜಾತಿಯ ಉಣ್ಣೆಗಳು ಕಾಡಿಗೆ ಬರುವ ಜಾನುವಾರು, ಜನರನ್ನು ಕಚ್ಚಿ ವೈರಸ್ಸುಗಳನ್ನು ದಾಟಿಸುತ್ತದೆ. ಮಂಗನ ಕಾಯಿಲೆಗೆ ಕಾರಣವಾಗುವುದು ‘ಫ್ಲಾವಿವೈರಸ್‌’ಎಂದು ಗುರುತಿಸಲಾಗಿದೆ. ಇದು ಫ್ಲೇವಿವಿರಿಡಿ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಕ್ಕಿಗಳು, ಮೊಲ, ಇಲಿ ಮೊದಲಾದವುಗಳು ಈ ವೈರಸ್ಸುಗಳ ವಾಹಕಗಳಾಗಿವೆ. ಮಂಗ ಮತ್ತು ಮನುಷ್ಯರು ಮಾತ್ರ ಈ ರೋಗ ತಗುಲಿದರೆ ಸಾಯುವ ಸಾಧ್ಯತೆ ಇರುತ್ತದೆ.

ರಕ್ತ ಮಾದರಿ ಪುಣೆಗೇ ಕಳುಹಿಸಬೇಕು

ಕಾಯಿಲೆಗೆ ತುತ್ತಾದವರ ರಕ್ತ ಮಾದರಿಗಳನ್ನು ತಕ್ಷಣವೇ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಬೇಕು. ಸದ್ಯ ಎಲ್ಲ ಮಾದರಿಗಳನ್ನು ಪುಣೆಯಲ್ಲಿನ ಸಂಶೋಧನಾ ಕೇಂದ್ರಕ್ಕೇ ಕಳುಹಿಸಲಾಗುತ್ತಿದೆ. ಇಲ್ಲಿಂದ ವರದಿ ಬರುವುದು ತಡವಾಗುತ್ತಿದೆ. ಕೆಲವೊಮ್ಮೆ ವರದಿ ಬರುವ ಮೊದಲೇ ರೋಗಿಗಳು ಮೃತಪಟ್ಟಪ್ರಕರಣಗಳೂ ಇವೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ನೀಡಲಾಗುವ ವ್ಯಾಕ್ಸಿನೇಶನ್‌ ಘಟಕ ಮೊದಲು ಶಿವಮೊಗ್ಗದಲ್ಲಿಯೇ ಇತ್ತು. ಆದರೆ ದಶಕದ ಹಿಂದೆ ಇದನ್ನು ಮುಚ್ಚಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಬೇಕಾದಷ್ಟುವ್ಯಾಕ್ಸಿನೇಶನ್‌ ಸರಿಯಾದ ವೇಳೆಯಲ್ಲಿ ಸಿಗುತ್ತಿಲ್ಲ ಎಂಬ ಮಾತೂ ಇದೆ.

ಮಂಗನಕಾಯಿಲೆ ಒಂದು ಜೈವಿಕ ಅಸ್ತ್ರವೇ?

‘ಮಂಗನಕಾಯಿಲೆ’ಗೆ ಕಾರಣವಾಗುವ ವೈರಸ್‌ ಒಂದು ಜೈವಿಕ ಅಸ್ತ್ರವೇ ಎಂಬ ಮಾತು ಕೇಳಿ ಬರುತ್ತಲೇ ಇದೆ. ಆದರೆ ಈ ಬಗ್ಗೆ ಭಾರತ ಸರ್ಕಾರ ಮಾತ್ರ ಗಂಭೀರವಾಗಿ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ದಶಕಗಳ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾದ ಎಚ್ಚರಿಕೆಯ ಮಾತುಗಳನ್ನು ಹೇಳಿದೆ. 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯದಲ್ಲಿ ಈ ಕಾಯಿಲೆ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಈ ವೈರಸ್ಸುಗಳು ಬೇರೆ ದೇಶದಿಂದ ಪಕ್ಷಿಗಳ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ ಎಂಬುದು ಊಹೆ. ಇಲ್ಲಿಗೆ ರಷ್ಯಾದ ಸೈಬೀರಿಯಾದಿಂದ ಪ್ರತಿ ವರ್ಷ ವಲಸೆ ಬರುವ ಪಕ್ಷಿಗಳ ಮೂಲಕ ಮಲೆನಾಡನ್ನೇ ಕೇಂದ್ರವಾಗಿಟ್ಟುಕೊಂಡು ಜೈವಿಕ ಅಸ್ತ್ರಗಳ ಪ್ರಯೋಗ ಮಾಡಲಾಗಿದೆ ಎಂಬ ಸಂಶಯ ಪಕ್ಷಿತಜ್ಞ ಸಲೀಂ ಆಲಿ ಅವರದು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿಯೂ ಸಲೀಂ ಆಲಿಯವರು ಇದನ್ನು ಬಲವಾಗಿ ಪ್ರತಿಪಾದಿಸಿದ್ದರು. ಪುಣೆಯ ವಿಷಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ನ್ಯೂಯಾರ್ಕ್ ರಾಕ್ಫೆಲರ್‌ ಸಂಶೋಧನಾಲಯದ ನೆರವಿನಿಂದ ನಡೆಸಿದ ಸಂಶೋಧನೆಯಿಂದ ಪಕ್ಷಿಗಳ ಮೂಲಕ ಈ ವೈರಾಣು ಬಂದಿದೆ ಎಂಬುದು ಬಹಿರಂಗಗೊಂಡಿದೆ. ಅಂದರೆ ರಷ್ಯಾ ಕಡೆಯಿಂದ ಬರುವ ಹಕ್ಕಿಗಳ ಮೂಲಕ ಈ ವೈರಾಣುಗಳನ್ನು ಕಳುಹಿಸಲಾಗಿದೆ ಎಂಬುದು ಖಚಿತವಾದಂತಾಗಿದೆ. ಇದೇ ವೇಳೆಗೆ ಅಮೆರಿಕ ದೇಶವು ಏಷ್ಯಾ ಮತ್ತು ಆಫ್ರಿಕನ್‌ ದೇಶಗಳ ಮೇಲೆ ‘ಅಂಥ್ರಾಕ್ಸ್‌’ ಮಾದರಿಯ ವೈರಾಣುಗಳನ್ನು ಪ್ರಯೋಗಾರ್ಥ ಜೈವಿಕ ಅಸ್ತ್ರವಾಗಿ ಪ್ರಯೋಗಿಸಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಅಮೆರಿಕ ಮಾಧ್ಯಮಗಳೇ ಈ ಕುರಿತು ಮಾಹಿತಿ ಬಿತ್ತರಿಸಿದ್ದವು. ವಿಶ್ವಸಂಸ್ಥೆ 2009ರಲ್ಲಿ ಬಿಡುಗಡೆ ಮಾಡಿರುವ ಸಾಗಾಣಿಕೆ ಕೈಪಿಡಿಯಲ್ಲಿಯೂ ಇದರ ಬಗ್ಗೆ ಎಚ್ಚರಿಕೆಯ ಸೂಚನೆಗಳಿವೆ. ಬ್ರಿಟನ್‌ ಸೇನೆ ಈ ರೋಗಾಣುವನ್ನು ‘ಜೈವಿಕ ಅಸ್ತ್ರ’ ಎಂದು ಮೊದಲು ಘೋಷಿಸಿತು.

ಮಂಗನ ಕಾಯಿಲೆಗೆ ಮತ್ತೆರಡು ಬಲಿ..!