ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿದ ಮಲೆನಾಡ ಹುಡುಗ..ಸಂಪೂರ್ಣ ಉಚಿತ

|ನಿವೇದನ್ ನೆಂಪೆ ಹೊಸ ಆವಿಷ್ಕಾರ | ಡಿಎಂಪಿ ಆಯಿಲ್ ಬದಲಿಗೆ ಜೆಲ್ ತಯಾರಿಕೆ | ಅಡಿಕೆ ಚಹಾ ಕಂಡುಹಿಡಿದಿದ್ದ ಸಂಶೋಧಕ |  ಮಂಗನ ಕಾಯಿಲೆಗೆ ಪರಿಹಾರ ಸಿಕ್ಕಿತೆ?

New medicine for monkey fever by Nivedan Nempe Shivamogga

ಶಿವಮೊಗ್ಗ[ಜ.30] ಮಂಗನಕಾಯಿಲೆ ಅಟ್ಟಹಾಸ ಮಲೆನಾಡಿನಲ್ಲಿ ದಿನೇ ದಿನೇ ಮಿತಿಮೀರುತ್ತಿದೆ. ಉಣ್ಣೆಗಳಿಂದ ಹಬ್ಬುವ ರೋಗ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಮೈಗೆ ಹಚ್ಚಿಕೊಳ್ಳುವ ಡಿಎಂಪಿ ಎಣ್ಣೆಗೂ ಕೊರತೆ ಉಂಟಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ಸಾಂಪ್ರದಾಯಿಕ ಆಯರ್ವೇದ ಕ್ರಮದಲ್ಲೇ ಮಲೆನಾಡಿನ ಯುವಕನೊಬ್ಬ ಡಿಎಂಪಿ ಎಣ್ಣೆಗೆ ಪರ್ಯಾಯವಾಗಿ ಜೆಲ್ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ.

ಅಡಿಕೆ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಗೆ ಮುಂದಾಗಿ ಅರೇಕಾ ಟೀ ತಯಾರಿಸಿದ್ದ ತೀರ್ಥಹಳ್ಳಿ ತಾಲೂಕು ಮಂಡಗದ್ದೆಯ ನಿವೇದನ್ ನೆಂಪೆ ಇದೀಗ ಡಿಎಂಪಿ ಎಣ್ಣೆಗೆ ಪರ್ಯಾಯವಾಗಿ ಕೆಎಫ್ ಡಿ ಆರ್ ಜೆಲ್ ತಯಾರಿಸಿದ್ದಾರೆ.

ಮಂಗನ ಕಾಯಿಲೆ ಎಂದರೇನು?

ಏನಿದು ಜೆಲ್? ಡಿಎಂಪಿ ಎಣ್ಣೆಯನ್ನು ಮೈಗೆ ಹಚ್ಚಿಕೊಂಡರೆ ಉಣ್ಣೆಗಳು ಮೈಗೆ ಹತ್ತುವುದಿಲ್ಲ. ಆದರೆ ಡಿಎಂಪಿ ಎಣ್ಣೆ ರಾಸಾಯನಿಕಗಳ ಮಿಶ್ರಣ. ಹೀಗಾಗಿ ಡಿಎಂಪಿ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳದಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ ನಿವೇದನ್ ನೆಂಪೆ ತಯಾರಿಸಿರುವ ಜೆಲ್ ಮುಖಕ್ಕೂ ಹಚ್ಚಿಕೊಳ್ಳಬಹುದು. ಈ ಜೆಲ್ ಅನ್ನು ತಿಂದರೂ ಯಾವುದೇ ದುಷ್ಪರಿಣಾಮವಿಲ್ಲ. ಈ ಜೆಲ್ ಹಚ್ಚಿಕೊಂಡರೂ ಉಣ್ಣೆಗಳು ಕಚ್ಚುವುದಿಲ್ಲ ಜೊತೆಗೆ ಸೊಳ್ಳೆಗಳೂ ಹತ್ತಿರ ಸುಳಿಯುವುದಿಲ್ಲ. ಡಿಎಂಪಿ ಎಣ್ಣೆ ಕೊರತೆಯಾಗಿರುವ ಈ ಸಂದರ್ಭದಲ್ಲಿ ನಿವೇದನ್ ನೆಂಪೆ ತಯಾರಿಸಿರುವ ಜೆಲ್ ಜನರಲ್ಲಿ ಹೊಸ ವಿಶ್ವಾಸ ಮೂಡಿಸಿದೆ.

ಜೆಲ್ ತಯಾರಿಕೆ ಹೇಗೆ: ಫಾರ್ಮಸಿ ಪದವೀದರರಾಗಿರುವ ನಿವೇದನ್ ನೆಂಪೆ ಕಾಲೇಜು ದಿನಗಳಲ್ಲಿಯೇ ಮಂಗನಕಾಯಿಲೆ ಹಾಗೂ ಹಂದಿಗೋಡು ಕಾಯಿಲೆ ಬಗ್ಗೆ ಸಂಶೋಧನೆ ಆರಂಭಿಸಿದ್ದರು. ಆದರೆ ಕಾಲೇಜು ಬಳಿಕ ಸಂಶೋಧನೆಯನ್ನು ನಿಲ್ಲಿಸಿದ್ದರು. ಆದರೆ ಈ ಬಾರಿ ಮಂಗನಕಾಯಿಲೆ ಎಲ್ಲೆಡೆ ವ್ಯಾಪಿಸಲಾರಂಭಿಸಿದಾಗ ಮತ್ತೆ ಮಂಗನಕಾಯಿಲೆ ನಿಯಂತ್ರಣದ ಕುರಿತು ಸಂಶೋಧನೆ ಆರಂಭಿಸಿದರು.

ಆರಂಭಿಕ ಹಂತವಾಗಿ ಉಣ್ಣೆಗಳು ಹಾಗೂ ಅವುಗಳಿಂದ ಹರಡುವ ರೋಗಗಳ ನಿಯಂತ್ರಣ, ಉಣ್ಣೆಗಳು ಮೈಗೆ ಹತ್ತದಂತೆ ತಡೆಯುವ ಕ್ರಮಗಳ ಬಗ್ಗೆ ವಿದೇಶಗಳಲ್ಲಿ ನಡೆದಿರುವ ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡಿದ ನಿವೇದನ್ ನೆಂಪೆ ಗೆ ಥೈಮೋಕ್ವಿನೋನ್ ನಿಂದ ನಿಂದ ಉಣ್ಣೆಗಳನ್ನು ನಿಯಂತ್ರಿಸಬಹುದು ಎಂಬುದು ಸ್ಪಷ್ಟವಾಗಿದೆ. ಇದೇ ಅಂಶವನ್ನಿಟ್ಟುಕೊಂಡು ತಮ್ಮದೇ ಆದ ಪ್ರಯೋಗಾಲಯದಲ್ಲಿ ಸಂಶೋಧನೆ ಮುಂದುವರಿಸಿದ್ದಾರೆ.

ಕರಿಜೀರಿಗೆಯಲ್ಲಿ ಮಾತ್ರ ಥೈಮೋಕ್ವಿನೋನ್ ಅಂಶ ಇರುವುದು ಗೊತ್ತಾಗುತ್ತಿದ್ದಂತೆ ಕರಿಜೀರಿಗೆಯನ್ನಿಟ್ಟುಕೊಂಡು ಡಿಎಂಪಿ ಎಣ್ಣೆಗೆ ಪರ್ಯಾಯವಾಗಿ ಜೆಲ್ ತಯಾರಿಸುವ ಕಾರ್ಯ ಆರಂಭಿಸಿದ್ದಾರೆ. ಕರಿಜೀರಿಗೆಯಿಂದ ಥೈಮೋಕ್ವಿನೋನ್ ಅಂಶವನ್ನು ಪಡೆದ ನಿವೇದನ್ ಜೆಲ್ ಕಹಿಯಾಗಿದ್ದರೆ ಉಣ್ಣೆ ಹತ್ತಿರಬರುವ ಸಾಧ್ಯತೆಯೂ ಇರುವುದಿಲ್ಲ ಎಂಬ ಕಾರಣಕ್ಕೆ ಜೆಲ್ ನಲ್ಲಿ ಕಾಳುಜೀರಿಗೆಯನ್ನೂ ಸೇರಿಸಿದ್ದಾರೆ. ಇವೆರಡರ ಮಿಶ್ರಣವನ್ನು ಮೈಗೆ ಹಚ್ಚಿಕೊಳ್ಳಲು ಸುಲಭವಾಗಲಿ ಎಂಬ ಕಾರಣಕ್ಕೆ ಗೋಆರ್ ಗಮ್ ನೊಂದಿಗೆ ಮಿಶ್ರಣವನ್ನು ಬೆರೆಯಿಸಿ ಜೆಲ್ ತಯಾರಿಸಿದ್ದಾರೆ. ಬಳಿಕ ಈ ಜೆಲ್ ಅನ್ನು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಹಾಯವಾಗುವಂತೆ ಇದೇ ಜೆಲ್ ಗೆ ಬಳಿಕ ಸಿಟ್ರೋಲೆಲಾ (ಹುಲ್ಲೆಣ್ಣೆ) ಸೇರಿಸಿ ಕೆಎಫ್ ಡಿ ಆರ್ ಎಂಬ ಜೆಲ್ ತಯಾರಿಸಿದ್ದಾರೆ.

ಕರ್ನಲ್ ಮೆಗ್ಗಾನ್ ಮತ್ತು ಮಂಗನ ಕಾಯಿಲೆ..ಒಂದು ನೆನಪು

ಸ್ವಯಂ ಪರೀಕ್ಷೆ: ಜೆಲ್ ತಯಾರಿಸಿದ ಬಳಿಕ ನಿವೇದನ್ ನೆಂಪೆ ತಾವೇ ಈ ಜೆಲ್ ಹಚ್ಚಿಕೊಂಡು ತೋಟದಲ್ಲಿ ಓಡಾಡಿದ್ದಾರೆ. ಆಗ ಉಣ್ಣೆಗಳು ಇವರಿಗೆ ಹತ್ತಿಲ್ಲ. ಜೊತೆಗೆ ಸೊಳ್ಳೆಗಳು ಇವರ ಬಳಿ ಸುಳಿದಿಲ್ಲ. ಬಳಿಕ ಈ ಜೆಲ್ ಅನ್ನು ಕಾಡಿಗೆ ಹೋಗುವ ತಮ್ಮ ಪರಿಚಯದವರಿಗೆ ಈ ಜೆಲ್ ಹಚ್ಚಿಕೊಳ್ಳಿ ಉಣ್ಣೆಗಳು ಮೈಗೆ ಹತ್ತುವುದಿಲ್ಲ ಎಂದು ನೀಡಿದ್ದಾರೆ. ಹೀಗೆ ಈ ಜೆಲ್ ಹಚ್ಚಿಕೊಂಡವರು ತಮಗೆ ಉಣ್ಣೆಗಳು ಮೈಗೆ ಹತ್ತಿಲ್ಲದಿರುವುದನ್ನು ನಿವೇದನ್ ಗೆ ತಿಳಿಸಿದ್ದಾರೆ. 

ಬಳಿಕ ಈ ವಿಷಯವನ್ನು ನಿವೇದನ್ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಗಮನಕ್ಕೆ ತಂದಿದ್ದಾರೆ. ಜೆಲ್ ಬಗ್ಗೆ ಮಾಹಿತಿಪಡೆದ ಜಿಲ್ಲಾಧಿಕಾರಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ. 

ಈಗಾಗಲೇ ನಿವೇದನ್ ನೆಂಪೆ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬೆಂಗಳೂರಿನ ತಾನಿರಾ ಲೈಫ್ ಸೈನ್ಸನ್ ಸಂಸ್ಥೆಯವರು ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಕೆಎಫ್ ಡಿ ಜೆಲ್ ಗೆ ಪರವಾನಗಿ ಸಿಕ್ಕ ಕೂಡಲೇ ಹೆಚ್ಚಿನ ಪ್ರಮಾಣದ ಜೆಲ್ ಉತ್ಪಾದನೆಯನ್ನು ಉಚಿತವಾಗಿ ತಯಾರಿಸಿಕೊಡುವ ಭರವಸೆಯನ್ನು ಸಂಸ್ಥೆ ನೀಡಿದೆ.

ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿರುವ ನಿವೇದನ್ ಜೆಲ್ ಗೆ ಆಯುಲ್ ಇಲಾಖೆಯಿಂದ ಪರವಾನಗಿ ಪಡೆಯಲು ಸೂಕ್ತ ದಾಖಲೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಪರವಾನಗಿ ಸಿಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಜೆಲ್ ತಯಾರಿಸಿ ಮಲೆನಾಡಿನ ಜನರಿಗೆ ಉಚಿತವಾಗಿ ನೀಡುವ ಯೋಜನೆ ನಿವೇದನ್ ಅವರದ್ದಾಗಿದೆ.

ಕೆಎಫ್ ಡಿ ವೈರಾಣು ಇರುವ ಪ್ರದೇಶ ಅತಿ ಕಡಿಮೆಯಿದ್ದು ರೋಗಿಗಳ ಸಂಖ್ಯೆ ಗಣನೀಯವಾಗಿ ಇಲ್ಲದಿರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಈ ಬಗ್ಗೆ ಸಂಶೋಧನೆ ನಡೆಸಿ ಔಷಧ ತಯಾರಿಕೆಗೆ ಆಸಕ್ತಿ ತೋರುವುದಿಲ್ಲ. ಹೀಗಾಗಿ ನಾನೇ ಸಂಶೋಧನೆ ಆರಂಭಿಸಿದೆ. ಆಗ ಸ್ವಿಟ್ಜರ್ ಲ್ಯಾಂಡ್ ಸ್ಪ್ರಿಂಗರ್ ಇಂಟರ್ ನ್ಯಾಷನಲ್ ಪಬ್ಲಿಷಿಂಗ್ ನಲ್ಲಿ ಉಣ್ಣೆಗಳ ಬಗ್ಗೆ ಸಂಶೋಧನೆ ನಡೆದಿರುವುದನ್ನು ಗಮನಿಸಿ ಅದೇ ಅಂಶಗಳ ಆಧಾರದ ಮೇಲೆ ಗಿಡಮೂಲಿಕೆಗಳಿಂದಲೇ ಕೆಎಫ್ ಡಿ ಹರಡದಂತೆ ಮುಂಜಾಗ್ರತೆ ವಹಿಸಲು ಜೆಲ್ ಕಂಡುಹಿಡಿದಿದ್ದೇನೆ ಎಂದು ನಿವೇದನ್ ನೆಂಪೆ ಹೇಳುತ್ತಾರೆ.

ಒಟ್ಟಿನಲ್ಲಿ ಸಂಶೋಧನೆಯನ್ನು ಸ್ವಯಂ ಆಗಿ ನಡೆಸಿ ಅದಕ್ಕೊಂದು ತಾರ್ಕಿಕ ಫಲಿತಾಂಶವನ್ನು ನಿವೇದನ್ ಕಂಡುಹಿಡಿದು ಉತ್ಪನ್ನವನ್ನು ಸಿದ್ಧಮಾಡಿದ್ದಾರೆ. ಸರಕಾರ ಮತ್ತು ಆರೋಗ್ಯ ಇಲಾಖೆ ತಕ್ಷಣಕ್ಕೆ ಸ್ಪಂದಿಸಿದರೆ ಸಂಶೋಧನೆಗೊಂದು ಸಾರ್ಥಕತೆ ಸಿಗಲಿದೆ.

"

Latest Videos
Follow Us:
Download App:
  • android
  • ios