ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತನ ಎರಡು ಎಕರೆ ಹನ್ನೊಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ರೂಪಾಯಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದ್ದರು.

ಕಲಬುರಗಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಹೊರಗಡೆ ಅಧಿಕಾರಿಗಳ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇದರಿಂದ ಜಿಲ್ಲಾಧಿಕಾರಿಗಳು ಸೇರಿದಂತೆ ಇತರೇ ಉನ್ನತ ಅಧಿಕಾರಿಗಳು ಮುಜುಗರಕ್ಕೆ ಒಳಗಾಗಿದ್ದಾರೆ.

ಕಲಬುರಗಿ ಮಿನಿ ವಿಧಾನಸೌಧದ ಒಳಗೆ ಗೃಹ ಸಚಿವರೊಂದಿಗೆ ಅಧಿಕಾರಿಗಳ ಸಭೆ ನಡೆಯುತ್ತಿದ್ದಾಗಲೇ ಘಟನೆ ನಡೆದಿದ್ದು, ಕಲಬುರಗಿ ಜಿಲ್ಲಾಧಿಕಾರಿ (ಡಿಸಿ), ಅಪರ ಜಿಲ್ಲಾಧಿಕಾರಿ (ಎ‌ಡಿಸಿ), ಸಹಾಯಕ ಆಯುಕ್ತರ (ಎಸಿ) ಕಾರುಗಳನ್ನು ಕಲಬುರಗಿ ಜಿಲ್ಲಾ ನ್ಯಾಯಾಲಯದ ಆದೇಶದ ಮೆರೆಗೆ ಕೋರ್ಟ್ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ.

ಏನಿದು ಪ್ರಕರಣ?

ಭೂಸ್ವಾಧೀನ ಪಡೆದುಕೊಂಡಿದ್ದ ರೈತನಿಗೆ ಪರಿಹಾರ ನೀಡಲು ವಿಳಂಬ ಹಿನ್ನಲೆ‌ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಅಧಿಕಾರಿಗಳ ವಾಹನ ಜಪ್ತಿಗೆ ಆದೇಶ ನೀಡಿತ್ತು. ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತನ ಎರಡು ಎಕರೆ ಹನ್ನೊಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ರೂಪಾಯಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದ್ದರು. ಇದರೊಂದಿಗೆ ಭೂಮಿ ಕಳೆದುಕೊಂಡಿದ್ದ ನಂದಿಕೂರ ಗ್ರಾಮದ ರೈತ ಪ್ರಕಾಶ್ ಮಲಕಪ್ಪ ಕೋರ್ಟ್ ಮೋರೆ ಹೋಗಿದ್ದರು.

2009ರಲ್ಲಿ ನಗರದಿಂದ ಹೋಗುವ ಕೊಳಚೆ ನೀರಿನ ಶುದ್ದೀಕರಣ ಘಟಕ ನಿರ್ಮಾಣಕ್ಕಾಗಿ ಪ್ರಕಾಶ್ ಮಲಕಪ್ಪ ಅವರ ಜಮೀನನ್ನು ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಂಡಿದ್ದರು. ಆದರೆ ಆ ಬಳಿಕ ಬರೋಬ್ಬರಿ 09 ವರ್ಷ ಕಳೆದರೂ ಕೂಡ ರೈತನಿಗೆ ಪರಿಹಾರ ಸಿಕ್ಕಿರಲಿಲ್ಲ. ಇದರೊಂದಿಗೆ 2018ರಲ್ಲಿ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಲು ರೈತ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ರೈತನಿಗೆ ನ್ಯಾಯಯುತವಾಗಿ ನೀಡಬೇಕಿದ್ದ 8 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಆದೇಶ ಹೊರಡಿಸಿತ್ತು.

ಆದರೆ ಕೋರ್ಟ್ ಆದೇಶದ ಬಳಿಕವೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿರಲಿಲ್ಲ. ರೈತನಿಗೆ ಕೇವಲ 10 ಲಕ್ಷ ಮಾತ್ರ ನೀಡಿ ಜಿಲ್ಲಾಡಳಿತ ಕೈ ತೊಳೆದುಕೊಂಡಿತ್ತು. ಇದರೊಂದಿಗೆ ಮತ್ತೊಮ್ಮೆ ನ್ಯಾಯಾಲಯಕ್ಕೆ ರೈತ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ಪರಿಶೀಲನೆ ನಡೆಸಿದ ನ್ಯಾಯಾಲಯ ಅಧಿಕಾರಿಗಳ ಕಾರುಗಳನ್ನು ಜಪ್ತಿ ಮಾಡಿಕೊಂಡು ರೈತನಿಗೆ ಪರಿಹಾರ ನೀಡಲು ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಕಲಬುರಗಿ ಡಿಸಿ, ಎಡಿಸಿ, ಎಸಿ ಅವರ ಕಾರುಗಳನ್ನು ಕೋರ್ಟ್ ಸಿಬ್ಬಂದಿಗಳು ಜಪ್ತಿಗೆ ಮಾಡಿಕೊಂಡಿದ್ದರು. ಆದರೆ ವಿಧಾನಸೌಧದಲ್ಲಿ ಗೃಹ ಸಚಿವರೊಂದಿಗೆ ಸಭೆ ನಡೆಯುತ್ತಿದ್ದಾಗಲೇ ಹೊರಗಡೆ ಕಾರುಗಳು ಜಪ್ತಿಯಾದ ಹಿನ್ನಲೆ ಅಧಿಕಾರಿಗಳು ತೀವ್ರ ಮುಜುಗರಕ್ಕೆ ಒಳಗಾಗಿದ್ದರು.

ರೈತ ಹೇಳಿದ್ದೇನು?

ಈ ಬಗ್ಗೆ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ರೈತ ಪ್ರಕಾಶ್ ಮಲಕಪ್ಪ, ನಂದಿಕೂರಿನಲ್ಲಿ ಎಸ್‌ಟಿಪಿ ಘಟಕದ ನಿರ್ಮಾಣಕ್ಕೆ ನಮ್ಮ ಹೊಲವನ್ನು ಸರ್ಕಾರ ಸ್ವಾಧೀನ ಮಾಡಿಕೊಂಡಿತ್ತು. 2018ರಲ್ಲಿ ಹೆಚ್ಚುವರಿ ಭೂಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದೆ. ನಮ್ಮ 2 ಎಕರೆ 11 ಗುಂಟೆ ಜಮೀನಿಗೆ ಪರಿಹಾರವಾಗಿ 8 ಕೋಟಿ ರೂಪಾಯಿ ಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದೆ. ಆದರೆ ಅಧಿಕಾರಿಗಳು ಎರಡು ಹಂತದಲ್ಲಿ ಕೇವಲ 10 ಲಕ್ಷ ರೂಪಾಯಿ ಮಾತ್ರ ನೀಡಿದ್ದಾರೆ. ನಮ್ಮ ಸುತ್ತಮುತ್ತಿನ ಹೊಲಗಳ ರೈತರಿಗೆ ಪರಹಾರ ನೀಡಿದ್ದಾರೆ. ಆದರೆ ನಮಗೆ ಮಾತ್ರ ಪರಿಹಾರ ನೀಡಿಲ್ಲ. ಈಗ ನ್ಯಾಯಾಲಯ ಕನಿಷ್ಠ ಶೇಕಡಾ 50ರಷ್ಟು ಆದರೂ ಕೂಡಲೇ ಬಿಡುಗಡೆ ಮಾಡಲು ಹೇಳಿತ್ತು. ಈಗ ಕೋರ್ಟ್ ಕಾರು ಸೀಜ್ ಮಾಡಲು ಹೇಳಿದೆ ಎಂದು ತಿಳಿಸಿದ್ದಾರೆ.