ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿ.(ಬಿಎಂಆರ್‌ಸಿಎಲ್) ಯೋಜನೆಯ ಹಂತ-1 ಮತ್ತು ಹಂತ-2ರ ಅನುಷ್ಠಾನದಲ್ಲಿ ಹಲವು ಕುಂದುಕೊರತೆಗಳಿರುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ. ಭೂಸ್ವಾಧೀನದಲ್ಲಿನ ಲೋಪ, ಹೆಚ್ಚುವರಿ ವೆಚ್ಚ, ನಿರೀಕ್ಷಿತ ಪ್ರಯಾಣಿಕರಿಲ್ಲದೆ ನಷ್ಟ ಅನುಭವಿಸುತ್ತಿರುವ ಬಗ್ಗೆ ವರದಿಯು ಬೆಳಕು ಚೆಲ್ಲಿದೆ.
ನವದೆಹಲಿ (ಆ.11): ಬೆಂಗಳೂರು ಮಹಾನಗರದ ಪ್ರಮುಖ ಸಾರಿಗೆಗಳಲ್ಲಿ ಒಂದಾಗಿರುವ ಮೆಟ್ರೋದ ಯೋಜನೆ ಹಾಗೂ ನಿರ್ವಹಣೆಯಲ್ಲಿ ಹಲವು ಕುಂದು-ಕೊರತೆಗಳಿದೆ ಎಂದು ಮಹಾಲೇಖಪಾಲರ ವರದಿ ಆಕ್ಷೇಪ ವ್ಯಕ್ತಪಡಿಸಿದೆ. ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿ.(ಬಿಎಂಆರ್‌ಸಿಎಲ್) ಯೋಜನೆಯ ಹಂತ-1 ಮತ್ತು ಹಂತ-2ರ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯಕ್ಷಮತೆ ಲೆಕ್ಕಪರಿಶೋಧನಾ ವರದಿಯಲ್ಲಿ ಇವುಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ವರದಿಯಲ್ಲೇನಿದೆ?:
ಯೋಜನೆ ಆರಂಭವಾದಾಗಿನಿಂದ 2021ರ ಮಾರ್ಚ್ ವರೆಗಿನ ಜಾರಿ, ಮೇಲ್ವಿಚಾರಣೆ, ಕಾರ್ಯನಿರ್ವಹಣೆಯನ್ನು, ಅಂತೆಯೇ, 2023ರ ಮಾರ್ಚ್ ವರೆಗೆ ಆಯ್ಕೆಯಾಗಿರುವ ಗುತ್ತಿಗೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಪರಿಶೀಲಿಸಿ ಮಹಾಲೇಖಪಾಲರ (ಸಿಎಜಿ) ವರದಿಯನ್ನು ಸಿದ್ಧಪಡಿಸಲಾಗಿದೆ.
ಈ ವರದಿಯಲ್ಲಿ, ಜನರು ಅನುಕೂಲಕರವಾಗಿ ಪ್ರಯಾಣಿಸಬಹುದೇ? ಮನೆ, ಕಚೇರಿ ಅಥವಾ ಇತರೆ ಕಡೆಗಳಿಗೆ ಮೆಟ್ರೋ ಹತ್ತಿರವಿದೆಯೇ? ಸ್ವಾಧೀನ ಮಾಡಿಕೊಳ್ಳಲಾಗಿರುವ ಭೂಮಿಯನ್ನು ಹೇಗೆ ಬಳಸಿಕೊಳ್ಳಬೇಕು? ಎಂಬಿತ್ಯಾದಿ ಅಂಶಗಳನ್ನು 2ನೇ ಹಂತದಲ್ಲಿ ಪರಿಗಣಿಸಿಯೇ ಇಲ್ಲ.
2021ರಲ್ಲಿ ಅತಿ ಹೆಚ್ಚು ದಟ್ಟಣೆಯಿರುವ ಸಮಯ ಮತ್ತು ದಿಕ್ಕಿನಲ್ಲಿ, ಮೆಟ್ರೋವನ್ನು ಬಳಸಿದ ಜನರ ಸಂಖ್ಯೆ ನಿರೀಕ್ಷಿಸಿದ್ದಕ್ಕಿಂತ ಬಹಳ ಕಡಿಮೆಯಿತ್ತು. ಗಂಟೆಗೆ ಕೇವಲ 6,429 ರಿಂದ 8,852 ಮಂದಿಯಷ್ಟೇ ಪ್ರಯಾಣಿಸಿದ್ದರು. ಇದರ ಹೊರತಾಗಿಯೂ, ಪ್ರಯಾಣಿಕರ ಸಂಖ್ಯೆ ಏಕೆ ಕಡಿಮೆ ಇದೆ? ಅದನ್ನು ಹೇಗೆ ಹೆಚ್ಚಿಸಬಹುದು ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆಸಲಾಗಿಲ್ಲ.
ಯೋಜನೆಯು ಆರ್ಥಿಕವಾಗಿ ಮತ್ತು ವಾಣಿಜ್ಯಿಕವಾಗಿ ಲಾಭದಾಯಕವೇ ಎಂದು ಲೆಕ್ಕಾಚಾರ ಮಾಡುವಾಗ, ಮೆಟ್ರೋದ ನಿರೀಕ್ಷಿತ ಪ್ರಯಾಣಿಕರ ಸಂಖ್ಯೆಯನ್ನು ವಾಸ್ತವಕ್ಕಿಂತ ಹೆಚ್ಚಾಗಿ ಬಿಂಬಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭೂಸ್ವಾಧೀನ:
ಹಂತ 1ಕ್ಕಾಗಿ ಬಿಎಂಆರ್‌ಸಿಎಲ್ 45.24 ಹೆಕ್ಟೇರ್ ಬದಲು 62.67 ಹೆಕ್ಟೇರ್, 2ನೇ ಹಂತಕ್ಕೆ 165.09 ಹೆಕ್ಟೇರ್ ಬದಲು 145.16 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಅವುಗಳ ಬೆಲೆಯನ್ನು ಸರಿಯಾಗಿ ನಿರ್ಧರಿಸದ ಹಾಗೂ ಸ್ವಾಧೀನ ಪ್ರಕ್ರಿಯೆಯಲ್ಲಿ ತಡ ಮಾಡಿದ ಕಾರಣ ಭೂಮಿಗಾಗಿ 6.6 ಕೋಟಿ ರು. ಹೆಚ್ಚುವರಿ ಖರ್ಚಾಯಿತು. ಬೆಲೆ ನಿರ್ಧಾರದ ವೇಳೆ ಕೃಷಿಯೇತರ ಭೂಮಿಯ ಬೆಲೆ ಪರಿಗಣಿಸಲಾಗಿತ್ತು ಅಥವಾ ಕೃಷಿಯೇತರಕ್ಕೆ ಪರಿವರ್ತಿತವಾದ ಭೂಮಿಗೆ ಅನ್ವಯಿಸುವ ನಿಯಮಗಳನ್ನು, ಪರಿವರ್ತನೆಗೊಳ್ಳದ ಕೃಷಿ ಭೂಮಿಗೂ ಅನ್ವಯಿಸಲಾಯಿತು. ಈ ಕಾರಣದಿಂದ ಭೂಮಾಲೀಕರಿಗೆ 294 ಕೋಟಿ ರು. ಹೆಚ್ಚುವರಿಯಾಗಿ ಪಾವತಿಸಬೇಕಾಯಿತು.
ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ನಿಗದಿತ 270 ದಿನಗಳ ಅವಧಿಯೊಳಗೆ ಹೊರಡಿಸುವಲ್ಲಿ ವಿಫಲವಾದ ಕಾರಣ, ಬಿಎಂಆರ್‌ಸಿಎಲ್ ಶೇ.12ರ ದರದಲ್ಲಿ 186.86 ಕೋಟಿ ರು. ಹೆಚ್ಚುವರಿ ಬಡ್ಡಿ ರೂಪದ ಪರಿಹಾರವನ್ನು ಪಾವತಿಸಿದೆ. 9 ಸಿವಿಲ್ ಗುತ್ತಿಗೆಗಳ ಅಂದಾಜು ವೆಚ್ಚದಲ್ಲಿ ತೆರಿಗೆಗಳನ್ನು ಸೇರಿಸಿದ್ದರಿಂದ ಯೋಜನೆಯ ವೆಚ್ಚವು 1.2 ಸಾವಿರ ಕೋಟಿ ರು. ಹೆಚ್ಚಾಯಿತು. ಆದಾಯ ಮತ್ತು ನಿರಂತರ ನಗದು ನಷ್ಟದಿಂದಾಗಿ, ಯೋಜನೆಯ ಸಾಲವನ್ನು ತೀರಿಸಲು BMRCL ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಮೇಲೆ ಅವಲಂಬಿತವಾಗಿತ್ತು.
ಅತ್ತ ಯೋಜನೆಗಾಗಿ ಮಾಡಲಾಗಿದ್ದ ಸಾಲವನ್ನು ಮರುಪಾವತಿಸುವಷ್ಟು ಆದಾಯ ಬರದೆ ಸಂಸ್ಥೆ ನಷ್ಟದಲ್ಲಿದ್ದ ಕಾರಣ, ಬಿಎಂಆರ್‌ಸಿಎಲ್ ಸಾಲ ಮರುಪಾವತಿಗಾಗಿ ಕರ್ನಾಟಕ ಸರ್ಕಾರವನ್ನು ನೆಚ್ಚಿಕೊಂಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏನಿದು ಯೋಜನೆ?:
ಬಿಎಂಆರ್‌ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದೆ. ಇದರ ಮೊದಲ ಹಂತವು 2011ರ ಅಕ್ಟೋಬರ್‌ನಲ್ಲಿ ಕಾರ್ಯಾರಂಭಿಸಿ, 2017ರ ಜೂನ್ ವೇಳೆಗೆ 42.30 ಕಿ.ಮೀ. ಮೆಟ್ರೋ ಸಂಚಾರ ಆರಂಭವಾಗಿತ್ತು. ಅಂತೆಯೇ, 2ನೇ ಹಂತವು 2021ರ ಜನವರಿಯಲ್ಲಿ ಶುರುವಾಗಿ 2023ರ ಮಾರ್ಚ್‌ನಲ್ಲಿ 27.36 ಕಿ.ಮೀ. ಸಂಚಾರಕ್ಕೆ ತೆರೆದುಕೊಂಡಿದೆ. ಇದನ್ನು 2026ರ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸುವ ಯೋಜನೆಯಿದೆ.


