ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ವೈಭವ: ತೂಕದಲ್ಲೂ ಮೇಲುಗೈ ಸಾಧಿಸಿದ ಕ್ಯಾಪ್ಟನ್ ಅಭಿಮನ್ಯೂ..!
ಕಾಡಿನಿಂದ ಅರಮನೆ ಅಂಗಳಕ್ಕೆ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಯಿತು. ಇದರಲ್ಲಿ ಟೀಂ ಲೀಡರ್, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುವೇ ನಂ.1 ಆಗಿ ಹೊರ ಹೊಮ್ಮಿದೆ.
ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಸೆ.06): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಲರವ ಕಳೆಗಟ್ಟುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಯ್ತು. ಈ ಬಾರಿಯ ದಸರಾ ಕ್ಯಾಪ್ಟನ್ ಅಭಿಮನ್ಯೂ ತೂಕದಲ್ಲೂ ತಾನೇ ಮೇಲುಗೈ ಅಂತಾ ತೋರಿಸಿದ್ದಾನೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕಾಡಿನಿಂದ ಅರಮನೆ ಅಂಗಳಕ್ಕೆ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಯಿತು. ಇದರಲ್ಲಿ ಟೀಂ ಲೀಡರ್, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುವೇ ನಂ.1 ಆಗಿ ಹೊರ ಹೊಮ್ಮಿದೆ.
ಗಜ ಗಾಂಭೀರ್ಯದಿಂದ ಸಾಲಾಗಿ ಹೆಜ್ಜೆ ಹಾಕಿ ರಾಜಬೀದಿಯಲ್ಲಿ ಸಾಗೋ ಆನೆಗಳನ್ನು ನೋಡಲು ಮೈಸೂರು ಜನರು ಸಾಲಾಗಿ ನಿಂತಿದ್ದರು. ಅಷ್ಟೇ ಅಲ್ಲ ಸೆಲ್ಫೀ ತೆಗೆದುಕೊಂಡು ಸಂಭ್ರಮವನ್ನೂ ಪಟ್ಟರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಡಗರ ಜೋರಾಗಿದೆ. ನಿನ್ನೆಯಷ್ಟೇ ಅರಣ್ಯ ಭವನದಿಂದ ಮೈಸೂರು ಅರಮನೆ ಅಂಗಳಕ್ಕೆ ಬಂದಿರುವ ದಸರಾ ಆನೆಗಳಿಗೆ ಇಂದು ತೂಕ ಪರೀಕ್ಷೆ ಮಾಡಿಸಲಾಯಿತು. ಮೈಸೂರಿನ ದೇವರಾಜ ಮೊಹಲ್ಲಾದ ಧನ್ವಂತ್ರಿ ರಸ್ತೆಯಲ್ಲಿರುವ ಲಾರಿಗಳನ್ನು ತೂಕ ಮಾಡುವ ವೇ ಬ್ರಿಡ್ಜ್‌ನಲ್ಲಿ ದಸರಾದ ಗಜಪಡೆಯ ಮೊದಲ ತಂಡದ 8 ಆನೆಗಳ ತೂಕ ಮಾಡಿಸಲಾಯಿತು. ತೂಕದಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯುವೇ ಬಲಶಾಲಿಯಾಗಿದ್ದಾನೆ ಎಂದು ಡಿಸಿಎಫ್ ಸೌರಬ್ ಕುಮಾರ್ ತಿಳಿಸಿದ್ದಾರೆ.
ಮೈಸೂರು : ಅರಣ್ಯ ಭವನದ ಆವರಣದಲ್ಲಿ ಆನೆಗಳ ವಿಶ್ರಾಂತಿ
ದಸರಾದಲ್ಲಿ ಭಾಗಿಯಾಗುತ್ತಿರುವ ಆನೆಗಳ ತೂಕದ ವಿವರ ಇಲ್ಲಿದೆ.
ಅಭಿಮನ್ಯು 5160
ಧನಂಜಯ ಆನೆ 4940 ಕೆಜಿ
ಮಹೇಂದ್ರ ಆನೆ 4530 ಕೆಜಿ
ಭೀಮ ಆನೆ 4370 ಕೆಜಿ
ವರಲಕ್ಷ್ಮೀ 3020
ವಿಜಯ. 2830
ಗೋಪಿ 5080
ಕಂಜನ್ 4240
ಎಲ್ಲಾ ಆನೆಗಳು ಶಾಂತವಾಗಿ ತೂಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದವು ಇದು ಸಹಜವಾಗಿ ತೂಕ ಮಾಪನ ಕೇಂದ್ರದ ಮಾಲೀಕರಿಗೆ ಖುಷಿ ನೀಡಿದೆ ಎಂದು ತೂಕ ಮಾಪನ ಕೇಂದ್ರದ ಮಾಲೀಕ ಗಣೇಶ್ ಪ್ರಸಾದ್ ತಿಳಿಸಿದ್ದಾರೆ.
ಇನ್ನು ಶುಕ್ರವಾರದಿಂದ ದಸರಾ ಗಜಪಡೆಗೆ ಅರಮನೆ ಅಂಗಳದಿಂದ ಬನ್ನಿ ಮಂಟಪದ ವರೆಗೆ ಪ್ರತಿದಿನ ತಾಲೀಮು ನಡೆಯಲಿದೆ. ಆ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದೆ.