ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.25): ನಗರಾಭಿವೃದ್ಧಿ ಸಚಿವರಾದ ನಂತರ ವಾರದೊಳಗೇ 2ನೇ ಬಾರಿಗೆ ಕಲಬುರಗಿಗೆ ಭೇಟಿ ನೀಡಿದ ಸಚಿವ ಭೈರತಿ ಬಸವರಾಜ ಬುಧವಾರ ಬೆಳ್ಳಂಬೆಳ್ಳಗ್ಗೆ ಬಿಸಿಲೂರಲ್ಲೊಂದು ರೌಂಡ್‌ ಹಾಕಿ, ಇಡೀ ನಗರ ಸುತ್ತಿ, ಹಸಿರು ಹುಡುಕಿ ಸುಸ್ತಾಗಿ, ಸ್ವಸ್ತಿಕ್‌ ನಗರ ಪಾರ್ಕ್‌ನಲ್ಲಿ ‘ಧಢಮ್‌-ಧುಡಕಿ’ (ಸೀ ಸಾ) ಹತ್ತಿ-ಇಳಿದು ಕುಣಿದು ಕುಪ್ಪಳಿಸಿದ್ದಾರೆ.

ಜೊತೆಗೇ ಇದ್ದ ನಗರ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಅವರನ್ನೂ ಕರೆದು ಧಡಮ್‌- ಧುಡಕಿ ಆಡೋಣ ಬನ್ರಿ... ಎಂದು ‘ಆಂದೋಲಕ’ವನ್ನು ಹತ್ತಿದವರೇ ಕ್ಷಣಕಾಲ ನಗರ ಹೊದ್ದು ಮಲಗಿರೋ ಸಾವಿರ ಸಮಸ್ಯೆಗಳನ್ನೆಲ್ಲ ಮರೆತು ಮಕ್ಕಳಂತೆ ಆಟವಾಡಿದರು.

BSY ಮಾತು ಧಿಕ್ಕರಿಸಿ ಚುನಾವಣೆಗೆ ನಿಂತು ವಿಶ್ವನಾಥ ಸೋತ್ರು: ಭೈರತಿ ಬಸವರಾಜ

ಬೆಳಗ್ಗೆಯೇ ತಾವಿರೋ ಬಡಾವಣೆಗೆ ಸಚಿವರು- ಶಾಸಕರು ಆಗಮಿಸಿರೋದು ಕಂಡು ಬೆರಗಾದ ಬಡಾವಣೆ ನಿವಾಸಿ ಪ್ರೊ. ವಿ.ಬಿ. ಕರೆಡ್ಡಿ ಸಚಿವರನ್ನು ಅಭಿನಂದಿಸಿ ‘ಇಂಥಾ ಗಾರ್ಡನ್‌ ಜನರೇ ನಿರ್ವಹಿಸ್ತಿದ್ರೂ ಕಾರ್ಪೋರೇಷನ್‌ದವ್ರು ಟಾಯ್ಲೇಟ್‌ ಕಟ್ಟಿಸಿಕೊಟ್ಟಿಲ್ಲ, ಈ ಕುರಿತು ಕಮಿಷನರ್‌ಗೆ ಹಲವುಭಾರಿ ಭೇಟಿ ಮಾಡಿದರೂ ಸೌಲಭ್ಯ ಒದಗಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದರು.

ಅದುವರೆಗೂ ಧಡಮ್‌- ಧುಡಕಿ ಕುಲುಕಾಟದಲ್ಲಿ ಮೈ ಮರೆತಿದ್ದ ಸಚಿವ ಬೈರತಿ, ಶಾಸಕ ರೇವೂರ್‌ ಇಬ್ಬರು ಪ್ರೊಫೆಸರ್‌ ಮಾತಿಗೆ ಬೆಂಬಲಿಸಿದರಲ್ಲದೆ ಜನರ ಬೇಡಿಕೆಯಂತೆ ಟಾಯ್ಲೇಟ್‌ ಕಟ್ಟಿಸಿಕೊಡುವಂತೆ ಕಮೀಷ್ನರ್‌ಗೆ ಸೂಚಿಸಿ ಜನರನ್ನ ಸಮಾದಾನಪಡಿಸಿದರು.

ಬೆ.6ಕ್ಕೆ ನಗರ ಪ್ರದಕ್ಷಿಣೆ:

ಬೆ.6ಕ್ಕೆ ಕಾರ್‌ ಹತ್ತಿದ್ದ ಬೈರತಿ ಅವರು ಕಿಲೋ ಮೀಟರ್‌ಗಟ್ಟಲೇ ನಗರ ಪ್ರದಕ್ಷಿಣೆ ಮಾಡಿದರೂ ಎಲ್ಲಿ ರಸ್ತೆ ಇಕ್ಕೆಲಗಳಲ್ಲಿ ಒಂದು ‘ಸಸಿ’ಯೂ ಕಾಣದೆ ಪರೇಶಾನ್‌ ಆದ ಸಚಿವರು ತಕ್ಷಣ ಪಾಲಿಕೆಯ ಕಮೀಷನರ್‌ ರಾಹುಲ್‌ ಪಾಂಡ್ವೆ ಅವರನ್ನು ಕರೆದು ನಗರದಲ್ಲಿ ಈಗಲೇ 10 ಸಾವಿರ ಸಸಿಗಳನ್ನ ರಸ್ತೆ ಇಕ್ಕೆಲಗಳಲ್ಲಿ ನೆಡಿ, ಹಸಿರು ಆಂದೋಲನಕ್ಕೆ ಪಾಲಿಕೆಯವರೇ ಚಾಲನೆ ನೀಡಲು ಏನ್‌ ತೊಂದರೆ? ಇಷ್ಟೆಲ್ಲ ಅಡ್ಡಾಡಿದ್ರೂ ಒಂದೂ ಸಸಿ ಕಾಣಲಿಲ್ಲವಲ್ರಿ ಎಂದು ತರಾಟೆಗೆ ತೆಗೆದುಕೊಂಡರು.

ಪಾಲಿಕೆ ಸಿದ್ದಪಡಿಸಿದ ದಾರಿಯಲ್ಲೇ ಪ್ರದಕ್ಷಿಣೆ:

ಸಚಿವರ ನಗರ ಪ್ರದಕ್ಷಿಣೆಯ ಬಗ್ಗೆ ಬಹಳ ನಿರೀಕ್ಷೆಗಳಿದ್ದರೂ ಪಾಲಿಕೆ ಗುರುತಿಸಿದ ಪ್ರದಕ್ಷಿಣೆ ಪಥದಲ್ಲೇ ಸಚಿವರ ಕಾರು ಸುತ್ತಿದ್ದರಿಂದ ಅವೆಲ್ಲವೂ ಠುಸ್‌ ಆದವು. ಸಚಿವರ ಪ್ರದಕ್ಷಿಣೆ ಮುನ್ನಾದಿನವೇ ಕಮೀಷ್ನರ್‌ ಪಾಂಡ್ವೆ ನಗರ ಸುತ್ತಿ ಸ್ವಚ್ಛತೆ ನಿಭಾಯಿಸಿದ್ದರು. ಸಚಿವರ ಪ್ರದಕ್ಷಿಣೆ ಪಥದಲ್ಲೇ ಪೌರ ಕಾರ್ಮಿಕರು ಕಸ ಪೊರಕೆ ಹಿಡಿದು ಕೆಲಸದಲ್ಲಿ ಮಗ್ನರಾಗುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು.

ಸಚಿವರನ್ನೇ ಯಾಮಾರಿಸಿತೆ ಪಾಲಿಕೆ?:

ರಾಮ ಮಂದಿರ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಜಲ ಮಂಡಳಿಯ ವಾಲ್‌ ಇದ್ದು ಕಳೆದ 15 ದಿನದಿಂದ ಸೋರುತ್ತಿದೆ. ಇಲ್ಲಿಂದ ಹರಿದು ಹೊರಬರುತ್ತಿರುವ ನೀರು ನಾಗನಹಳ್ಳಿ ಕ್ರಾಸ್‌ ತಲುಪಿ ಕೊಳಚೆ ಉಂಟು ಮಾಡಿದ್ದರೂ ಕ್ಯಾರೆ ಎನ್ನದ ಜಲ ಮಂಡಳಿ ಸಚಿವರ ಸುತ್ತಾಟದ ಸುದ್ದಿ ಅರಿತು ವಾಲ್‌ ದುರಸ್ಥಿಗೆ ಮುಂದಾಗದೆ ಅದಕ್ಕೆ ಪೂರೈಕೆಯಾಗುವ ನೀರಿನ ಹರಿವನ್ನೇ ನಿಲ್ಲಿಸಿ ಅನೇಕ ಬಡಾವಣೆಗಳು ಬುಧವಾರ ನೀರಿಲ್ಲದೆ ಪರಿತಪಿಸುವಂತೆ ಮಾಡಿತು.

ಸುದ್ದಿಗೋಷ್ಠಿಯಲ್ಲಿ ಸಚಿವರು ರಾಮ ಮಂದಿರದ ಬಳಿ ನೀರು ಸೋರಿಕೆ ಬಗ್ಗೆ ಪ್ರಸ್ತಾಪಿಸಿ ‘ಪಾಲಿಕೆಯವರು ತಕ್ಷಣ ಈ ಸಮಸ್ಯೆಗೆ ಪರಿಹಾರ ಹುಡುಕಿದ್ದಾರೆ, ಅವರ ಚುರುಕಿನ ಕೆಲಸ ಮೆಚ್ಚುವಂತಹದ್ದು’ ಎಂದು ಶಹಬ್ಬಾಸಗಿರಿ ನೀಡಬೇಕೆ? ಪಾಲಿಕೆ- ಜಲ ಮಂಡಳಿಗೆ ವಾಲ್‌ ಸೋರಿಕೆ ರಿಪೇರಿ ಮಾಡದೆ ಹರಿದು ಬರುವ ನೀರನ್ನೇ ನಿಲ್ಲಿಸಿ ಬೀಸೋದೊಣ್ಣೆಯಿಂದ ಪಾಲಿಕೆ- ಜಲಮಂಡಲಿ ಪಾರಾದ ಕಟು ವಾಸ್ತವ ಕೊನೆಗೂ ಸಚಿವರಿಗೆ ಗೊತ್ತಾಗಲೇ ಇಲ್ಲ!