ಕಲಬುರಗಿ(ಜೂ.25): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಖುದ್ದು ಎಚ್‌.ವಿಶ್ವನಾಥ ಅವರಿಗೆ ಉಪ ಚುನಾವಣೆಗೆ ನಿಲ್ಲಬೇಡಿ ಎಂದು ಮನವಿ ಮಾಡಿದ್ದರು. ಆದರೆ, ಅವರ ಮಾತು ಕೇಳದೆ ಚುನಾವಣೆಯಲ್ಲಿ ನಿಂತು ಸೋತರು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಬೇಸರ ವ್ಯಕ್ತಪಡಿಸಿದ್ದಾರೆ. 

ಕಲಬುರಗಿ ಸಂಚಾರದಲ್ಲಿರುವ ಸಚಿವರು ಬುಧವಾರ ನಗರದ ಪ್ರದಕ್ಷಿಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡು, ಯಡಿಯೂರಪ್ಪನವರೇ ಖುದ್ದಾಗಿ ಚುನಾವಣೆಗೆ ನೀವು (ವಿಶ್ವನಾಥ) ನಿಲ್ಲುವುದು ಬೇಡ. ನಿಮ್ಮನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರೂ, ವಿಶ್ವನಾಥ ಹಾಗೆಲ್ಲಾ ಆಗೋದಿಲ್ಲ, ನಾನು ಎಲೆಕ್ಷನ್‌ ನಿಂತು ಗೆಲ್ಲುವೆ ಎಂದು ಹೇಳುತ್ತ ಚುನಾವಣೆಗೆ ಸ್ಪರ್ಧಿಸಿದರು ಎಂದರು.

SSLC ಪರೀಕ್ಷೆ: ಪೊಲೀಸರ ಜತೆಗೆ ವಾಗ್ವಾದಕ್ಕಿಳಿದ ಪೋಷಕರು

ಈಗಲೂ ಕಾಲ ಮಿಂಚಿಲ್ಲ. ವಿಶ್ವನಾಥ ಅವರಿಗೆ ಸ್ಥಾನಮಾನ ಸಿಗುವ ಭರವಸೆ ಇದೆ. ಅವರ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭೈರತಿ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ವಿಷಯವಾಗಿ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ನಾಳೆ (ಗುರುವಾರ) ಸಚಿವ ಸಂಪುಟ ಸಭೆಯಲ್ಲಿ ನಡೆಯಲಿದ್ದು, ಸಭೆಯಲ್ಲಿ ಚರ್ಚಿಸಿ ಲಾಕ್‌ ಡೌನ್‌ ಬಗ್ಗೆ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಹೊಸತಾಗಿ ಎಂಎಲ್‌ಸಿಯಾಗಿರುವವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಇದನ್ನೆಲ್ಲ ಹೈಕಮಾಂಡ್‌ ತೀರ್ಮಾನ ಮಾಡುತ್ತದೆಯೇ ಹೊರತು ನಾವು ಈ ಬಗ್ಗೆ ಹೇಳೋದು ಏನೇನೂ ಇಲ್ಲವೆಂದರು.