ಉತ್ತರ ಕನ್ನಡದಲ್ಲಿ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಹತ್ಯೆಯಾದ ಮಹಿಳೆ ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, 5 ಲಕ್ಷ ರೂ. ಪರಿಹಾರ ನೀಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು,.

ಉತ್ತರ ಕನ್ನಡ (ಜ.04): ವಿವಾಹ ಪ್ರಸ್ತಾಪ ತಿರಸ್ಕರಿಸಿದ ಕಾರಣಕ್ಕೆ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಗೊಳಗಾದ ಹಿಂದೂ ಮಹಿಳೆ ರಂಜಿತಾ ಬನ್ಸೋಡೆ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿದರು. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಬಿಜೆಪಿ ವತಿಯಿಂದ 5 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಹಸ್ತಾಂತರಿಸಿದರು.

'ಪೊಲೀಸ್ ವ್ಯವಸ್ಥೆ ಹಲ್ಲಿಲ್ಲದ ಹಾವಾಗಿದೆ'

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಅಮಾಯಕ ಹಿಂದೂ ಮಹಿಳೆಯೊಬ್ಬರು ಮದುವೆ ಪ್ರಸ್ತಾಪ ತಿರಸ್ಕರಿಸಿದ ಕಾರಣಕ್ಕಾಗಿ ಹಾಡುಹಗಲೇ ಭೀಕರವಾಗಿ ಕೊಲೆಯಾಗಿರುವುದು ದುರಂತ ಮಾತ್ರವಲ್ಲ, ಆತಂಕಕಾರಿಯೂ ಆಗಿದೆ. ಏಕೆಂದರೆ, ಪದೇ ಪದೇ ಇಂತಹ ಸಮಾಜ ವಿರೋಧಿ ಘಟನೆಗಳು, ಆಘಾತಕಾರಿ ದುಷ್ಕೃತ್ಯಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಅಸಮರ್ಥ ಗೃಹ ಸಚಿವರು ಮತ್ತು ದಿಕ್ಕು ತಪ್ಪಿದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಸಮಾಜಘಾತುಕರಿಗೆ, ದುಷ್ಕರ್ಮಿಗಳಿಗೆ ಕಾನೂನಿನ ಭಯವೇ ಇಲ್ಲ, ನಮ್ಮ ಪೊಲೀಸ್ ವ್ಯವಸ್ಥೆ ಹಲ್ಲಿಲ್ಲದ ಹಾವಾದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಲ್ಲಾಪುರ ಹಿಂದೂ ಮಹಿಳೆಯರಿಗೆ ಸುರಕ್ಷಿತವಲ್ಲ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಹಾಗೂ ಕೀಳು ರಾಜಕೀಯ ಹಿತಾಸಕ್ತಿಗಳಿಗಾಗಿ ಪೊಲೀಸರ ಕೈಕಟ್ಟಿ ಹಾಕಿರುವ ಪರಿಣಾಮವಾಗಿ, ಇಂದು ಅಪರಾಧಿಗಳು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುವಂತಾಗಿದೆ. ಯಲ್ಲಾಪುರ ಘಟನೆಯು ಮತ್ತೊಮ್ಮೆ ರಾಜ್ಯದಲ್ಲಿ ವಿಶೇಷವಾಗಿ ಹಿಂದೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದನ್ನು ಒತ್ತಿ ಹೇಳುತ್ತದೆ. ಜಿಹಾದಿ ಮನಸ್ಥಿತಿ ಬಗ್ಗೆ ಮೃದು ಧೋರಣೆ ಮತ್ತು ಸಹಾನುಭೂತಿ ಹೊಂದಿರುವ ಆಡಳಿತದ ಅಡಿಯಲ್ಲಿ, ಸಮಾಜಘಾತುಕರಿಗೆ ಏನು ಬೇಕಾದರೂ ಮಾಡಬಹುದು ಎನ್ನುವ ಧೈರ್ಯ ಬಂದಿದೆ. ಅಮಾಯಕ ಹಿಂದೂ ಮಹಿಳೆಯರು, ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಮಹಿಳೆಯರ ವಿರುದ್ಧ ಅಪರಾಧ ಹೆಚ್ಚಳ

ಯಾವುದೇ ಗಂಭೀರ ಅಪರಾಧಗಳು ನಡೆದಾಗಲೂ ಕಟ್ಟಕಡೆಗೆ ಮಾಹಿತಿ ಪಡೆಯುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಅಸಮರ್ಥ ಗೃಹ ಸಚಿವರು ಮತ್ತು ಕುರ್ಚಿ ಕಾದಾಟದಲ್ಲಿ ಮಗ್ನರಾಗಿರುವ ಮುಖ್ಯಮಂತ್ರಿಗಳ ರಾಜ್ಯದಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಅವರಿಗೆ ಕಾಣುವುದೇ ಇಲ್ಲ. ಪರಿಣಾಮವಾಗಿ, ನಾಗರಿಕರು, ಅದರಲ್ಲೂ ಮಹಿಳೆಯರು ಅಪರಾಧಿಗಳ ಮರ್ಜಿಯಲ್ಲಿ ಬದುಕುವಂತಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ, ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಿವೆ, ಆದರೆ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಅರಾಜಕತೆಯತ್ತ ರಾಜ್ಯ ಸಾಗುತ್ತಿದ್ದು, ಸಮಾಜಘಾತುಕರು, ದುಷ್ಕರ್ಮಿಗಳು, ಅಪರಾಧಿಗಳು ಮತ್ತು ಕೊಲೆಗಾರರಿಗೆ ಸುರಕ್ಷಿತ ತಾಣವಾಗಿ ಪರಿವರ್ತಿತವಾಗುತ್ತಿದೆ' ಎಂದು ವಿಜಯೇಂದ್ರ ಟೀಕಿಸಿದರು.

50 ಲಕ್ಷ ರೂ. ಪರಿಹಾರ ಹಾಗೂ ಭೂಮಿ ನೀಡಬೇಕು

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರು ರಂಜಿತಾ ಪುತ್ರನಿಗೆ ಉಚಿತ ಶಿಕ್ಷಣದ ಭರವಸೆ ನೀಡಿದರು. ಭೇಟಿಯ ವೇಳೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗ್ಡೆ, ಪ್ರಸಾದ್ ಹೆಗ್ಡೆ, ಮಹೇಂದ್ರ ಕೌತಾಳ್, ಅಶೋಕ್ ಚಲವಾದಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಹಿಳೆಯರ ಸುರಕ್ಷತೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಹಾಗೂ ಇದಕ್ಕೆ ಕುಮ್ಕಕ್ಕು ನೀಡಿದವರಿಗೆ ಕಠಿಣ ಶಿಕ್ಷೆ ವೊಧಿಸಬೇಕು. ಜೊತೆಗೆ, ಮೃತ ರಂಜಿತಾ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ಹಾಗೂ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.