ಉತ್ತರ ಕನ್ನಡದ ಯಲ್ಲಾಪುರದಲ್ಲಿ ರಫೀಕ್ ಎಂಬಾತನಿಂದ ಚಾಕು ಇರಿತಕ್ಕೊಳಗಾಗಿದ್ದ ರಂಜಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ, ಹಾಗೂ ಪೊಲೀಸರು ಆರೋಪಿಗಾಗಿ ತನಿਖೆ ಚುರುಕುಗೊಳಿಸಿದ್ದಾರೆ.
ಯಲ್ಲಾಪುರ (ಜ.3): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮತಿಹೀನ ಕೃತ್ಯವೊಂದು ನಡೆದಿದ್ದು, ಚಾಕು ಇರಿತಕ್ಕೊಳಗಾಗಿದ್ದ ಕಾಳಮ್ಮ ನಗರದ ರಂಜಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಗಳು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ.
ಕುತ್ತಿಗೆಗೆ ಚಾಕು ಇರಿದಿದ್ದ ಪಾಪಿ ರಫೀಕ್
ಆರೋಪಿ ರಫೀಕ್ ಎಂಬ ವ್ಯಕ್ತಿ ರಂಜಿತಾ ಎಂಬುವವರ ಕುತ್ತಿಗೆಗೆ ಚಾಕು ಹಾಕಿ ಭೀಕರವಾಗಿ ಹಲ್ಲೆ ನಡೆಸಿದ್ದ. ಇದರಿಂದಾಗಿ ಆಕೆಯ ಶ್ವಾಸಕೋಶಕ್ಕೆ ತೀವ್ರ ಗಾಯವಾಗಿತ್ತು. ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಆದರೆ, ಅತೀವ ರಕ್ತಸ್ರಾವದಿಂದಾಗಿ ರಂಜಿತಾ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ.
ತನಿಖೆ ಚುರುಕುಗೊಳಿಸಿದ ಎಸ್ಪಿ ದೀಪಕ್ ತಂಡ
ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಎಸ್ಪಿ ದೀಪಕ್ ಎಂಎನ್ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
'ಹಿಂದೂ ಸಮಾಜದ ತಾಳ್ಮೆ ಪರೀಕ್ಷಿಸಬೇಡಿ': ಹರಿಪ್ರಕಾಶ್ ಕೋಣೆಮನೆ ಆಕ್ರೋಶ:
ಬಿಜೆಪಿ ಮುಖಂಡ ಹರಿಪ್ರಕಾಶ್ ಕೋಣೆಮನೆ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ಹಿಂದೂ ಮಹಿಳೆಯ ಕಗ್ಗೊಲೆ ಸಹಿಸಲಾಗದು. ಒಂದು ವರ್ಷದ ಹಿಂದೆ ಅಪ್ರಾಪ್ತ ಯುವತಿಯ ಮೇಲೆ ಹಲ್ಲೆ ನಡೆದಾಗ ಪ್ರಭಾವಿಗಳು ದೂರು ನೀಡದಂತೆ ತಡೆದಿದ್ದರು. ಪಾಲಕರ ಅಸಹಾಯಕತೆ ಹಾಗೂ ಭೀತಿಯ ಕಾರಣಕ್ಕೆ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಸಾಧ್ಯವಾಗಿರಲಿಲ್ಲ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಪೊಲೀಸರು ನಿಷ್ಕ್ರಿಯತೆ ತೋರಬಾರದು ಅಥವಾ ಯಾವುದೇ ಪ್ರಭಾವಿಗಳ ಒತ್ತಡದ ಕಾರಣಕ್ಕೆ ಕ್ರಮ ವಿಳಂಬವಾಗಿ ಹಿಂದೂ ಸಮಾಜದ ತಾಳ್ಮೆಯನ್ನು ಯಾರೂ ಕೂಡ ಪರೀಕ್ಷೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ನಾಳೆ ಯಲ್ಲಾಪುರ ಬಂದ್: ಹಿಂದೂ ಸಂಘಟನೆಗಳ ಒಕ್ಕೂಟದ ನಿರ್ಧಾರ
ಹಿಂದೂ ಮಹಿಳೆಯ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿ ಭಾನುವಾರ (ನಾಳೆ) ಯಲ್ಲಾಪುರ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಹಿಂದೂ ಸಂಘಟನೆಗಳು ಈ ಬಂದ್‌ಗೆ ಬೆಂಬಲ ಸೂಚಿಸಿದ್ದು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿವೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆಯಿದೆ.


