ಯಲ್ಲಾಪುರದ ರಂಜಿತಾ ಬನ್ಸೋಡೆ ಕೊಲೆ ಪ್ರಕರಣದಲ್ಲಿ, ಆರೋಪಿ ರಫೀಕ್ ಮೃತಳ ಸಹೋದರನ ಆಪ್ತ ಸ್ನೇಹಿತ ಎಂಬುದು ಫೋಟೋಗಳಿಂದ ಬಹಿರಂಗವಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ, ನಂತರ ಆರೋಪಿ ಕಾಡಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆಯು ಯಲ್ಲಾಪುರದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.

ಉತ್ತರ ಕನ್ನಡ (ಜ.04): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಯಲ್ಲಾಪುರದ ಹಿಂದೂ ಮಹಿಳೆ ರಂಜಿತಾ ಬನ್ಸೋಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಒಂದು ಕಡೆ ಆರೋಪಿ ರಫೀಕ್ ಕಾಡಿನಲ್ಲಿ ನೇಣಿಗೆ ಶರಣಾಗಿದ್ದರೆ, ಇನ್ನೊಂದೆಡೆ ಕೊಲೆಗಡುಕ ರಫೀಕ್ ಮತ್ತು ರಂಜಿತಾ ಸಹೋದರ ವೀರಭದ್ರ ಬನ್ಸೋಡೆ ಒಟ್ಟಿಗಿದ್ದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ.

ಕೊಲೆಗಡುಕ ರಫೀಕ್ ಸಹೋದರನ ಆಪ್ತ ಗೆಳೆಯ!

ಪ್ರಕರಣದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ, ಆರೋಪಿ ರಫೀಕ್ ಹಾಗೂ ಮೃತ ರಂಜಿತಾ ಸಹೋದರ ವೀರಭದ್ರ ಬನ್ಸೋಡೆ ಆಪ್ತರಾಗಿರುವುದು ಎದ್ದು ಕಾಣುತ್ತಿದೆ. ಈ ಹಿಂದೆ ಖಾಸಗಿ ಹೋಟೆಲ್‌ನಲ್ಲಿ ರಫೀಕ್ ಹಾಗೂ ಇತರ ಸ್ನೇಹಿತರ ಜೊತೆ ವೀರಭದ್ರ ಊಟ ಮಾಡುತ್ತಾ ಸೆಲ್ಫಿ ತೆಗೆದುಕೊಂಡಿದ್ದರು. ಆರೋಪಿ ರಫೀಕ್ ಮೊದಲಿನಿಂದಲೂ ಕುಟುಂಬಕ್ಕೆ ಪರಿಚಿತನಾಗಿದ್ದ ಹಾಗೂ ಸಹೋದರನ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬುದು ಈ ಫೋಟೋಗಳಿಂದ ದೃಢಪಟ್ಟಿದೆ.

ಸಹೋದರಿ ಮತ್ತು ತಾಯಿಯ ಕಣ್ಣೀರಿನ ಹೇಳಿಕೆ

ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ರಂಜಿತಾ ಸಹೋದರಿ ಅಕ್ಷತಾ ಹಾಗೂ ತಾಯಿ ಭಾಗೀರಥಿ ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. "ರಫೀಕ್ ನನ್ನ ಅಕ್ಕನ ಕ್ಲಾಸ್‌ಮೇಟ್ ಆಗಿದ್ದ. ಮೊದಮೊದಲು ಒಳ್ಳೆಯವನಂತೆ ನಟಿಸುತ್ತಿದ್ದ. ಸಾಲದ ವಿಚಾರವಾಗಿ ಮನೆಗೆ ಬಂದು ಹೋಗುತ್ತಿದ್ದ ಅಷ್ಟೇ. ಆದರೆ ಯಾವುದೋ ಸಂಘದ ಮೂಲಕ ಅಕ್ಕನ ಮೊಬೈಲ್ ನಂಬರ್ ಸಂಗ್ರಹಿಸಿದ್ದ ರಫೀಕ್, ಆಕೆಗೆ ಪ್ರೀತಿ ಮಾಡು, ಭೇಟಿಯಾಗು ಎಂದು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ," ಎಂದು ಅಕ್ಷತಾ ತಿಳಿಸಿದ್ದಾರೆ.

ಯಾವುದೇ ಪ್ರೀತಿ-ಪ್ರೇಮ ಇರಲಿಲ್ಲ

ನನ್ನ ಅಕ್ಕ ಮತ್ತು ರಫೀಕ್ ನಡುವೆ ಯಾವುದೇ ಪ್ರೇಮ ಸಂಬಂಧ ಇರಲಿಲ್ಲ. ಗಂಡನ ಜೊತೆ ಬಾಂಧವ್ಯ ಸರಿಯಿಲ್ಲದ ಕಾರಣ ಆಕೆಯನ್ನು ತಂದು ಮನೆಯಲ್ಲಿ ಇರಿಸಿಕೊಂಡಿದ್ದೆವು. ರಫೀಕ್ ಕಾಟ ಜಾಸ್ತಿಯಾದಾಗ ನಾವು ಆತನಿಗೆ ಫೋನ್ ಮಾಡಿ ಬೈದು, ಸಂಪರ್ಕ ಬಿಡುವಂತೆ ಎಚ್ಚರಿಕೆ ನೀಡಿದ್ದೆವು. ಆದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿನ್ನೆ ದಾರಿಯಲ್ಲಿ ಅಡ್ಡಗಟ್ಟಿ ಅಕ್ಕನನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ರಫೀಕ್ ಚಾಕು ಹಾಕುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದರೂ, ಈಗ ಭಯದಿಂದ ಯಾರೂ ಮುಂದೆ ಬರುತ್ತಿಲ್ಲ," ಎಂದು ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ.

ಆರೋಪಿ ಆತ್ಮ*ಹತ್ಯೆ

ಕೊಲೆಯ ಬಳಿಕ ಪರಾರಿಯಾಗಿದ್ದ ರಫೀಕ್ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಅವರು ನಾಲ್ಕು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿದ್ದರು. ಇಂದು ಡಾಗ್ ಸ್ಕ್ವಾಡ್ ನೆರವಿನಿಂದ ರಾಮಾಪುರ ಕಾಜಲವಾಡ ಕಾಡಿನಲ್ಲಿ ಹುಡುಕಾಟ ನಡೆಸಿದಾಗ, ಆರೋಪಿಯು ಮರವೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಎಸ್ಪಿ ದೀಪನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್

ಘಟನೆಯ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಕನ್ನಡ ಎಸ್ಪಿ ದೀಪನ್ ಹಾಗೂ ಉಡುಪಿ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಭಾರಿ ಬಂದೋಬಸ್ತ್ ಕಲ್ಪಿಸಲಾಗಿದೆ. 4 ಕೆಎಸ್‌ಆರ್‌ಪಿ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.

ಹಿಂದೂ ಮುಸ್ಲಿಂ ಉದ್ವಿಗ್ನತೆ:

ಪ್ರಸ್ತುತವಾಗಿ ಈ ಘಟನೆಯು ಯಲ್ಲಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹಿಂದೂ-ಮುಸ್ಲಿಂ ವಿವಾದದ ರೀತಿಯಲ್ಲಿ ಉದ್ವಿಗ್ನತೆ ಹರಡಿಕೊಂಡಿದೆ. ನಡು ರಸ್ತೆಯಲ್ಲಿ ಹಿಂದು ಯುವತಿಯನ್ನು ಕೊಲೆ ಮಾಡಿದ ಘಟನೆಗೆ ಸೇಡು ತೀರಿಸಿಕೊಳ್ಳುವ ಪ್ರಯತ್ನಗಳು ಏನಾದರೂ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ನೀಡಿದ್ದಾರೆ.