ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರು, ರೈತರು ವಿದ್ಯುತ್ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಶಿಕಾರಿಪುರ (ಏ.13): ನೀರು, ವಿದ್ಯುತ್ ಮತ್ತಿತರ ಮೂಲಭೂತ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯವನ್ನು ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಕಲ್ಪಿಸಿಕೊಟ್ಟಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿತನದಿಂದಾಗಿ ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರು, ರೈತರು ವಿದ್ಯುತ್ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಚರ್ಚಿಸಲು ತಾಲೂಕು ಮಟ್ಟದ ಅಧಿಕಾರಿಗಳ ಜತೆ ಗ್ರಾ.ಪಂ ಪಿಡಿಒ ಹಾಗೂ ಆಡಳಿತಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮುಂದಿನ ಎರಡು ತಿಂಗಳು ನೀರಿನ ಸಮಸ್ಯೆ ಎದುರಾಗುವ ಸಾದ್ಯತೆ ಹೆಚ್ಚಿದೆ. ದನಕರು ಜಾನುವಾರುಗಳ ಜತೆಗೆ ಶಾಲಾ ಕಾಲೇಜುಗಳಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಜತೆಗೆ ಸ್ವಚ್ಚತೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.

ಅಲೆದಾಟ ತಪ್ಪುತ್ತಿಲ್ಲ

ಬಹುತೇಕ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಯುವಕರಿದ್ದು, ಗ್ರಾಮೀಣ ಜನತೆಯ ಕಷ್ಟ ಆಲಿಸಿ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು. ಟ್ರಾನ್ಸ್‌ಫಾರ್ಮರ್ ಪದೇಪದೇ ದುರಸ್ತಿಯಿಂದ ರೈತರು ಮೆಸ್ಕಾಂ ಕಚೇರಿಗೆ ಅಲೆದಾಟ ತಪ್ಪುತ್ತಿಲ್ಲ, ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನಸಾಮಾನ್ಯರ ಕಷ್ಟಕ್ಕೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು, ಸಬೂಬು ಹೇಳದೆ ಪರಿಹಾರಕ್ಕೆ ಪ್ರಯತ್ನಿಸಬೇಕು ಈ ದಿಸೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದರು.

ತಾ.ಪಂ ಇಒ ನಾಗರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಕೆರೆ ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಸಮೀಪದಲ್ಲಿ ಗುಂಡಿ ತೆಗೆದು ಬೋರ್ ವೆಲ್ ನೀರು ಸಂಗ್ರಹಿಸಿ ಬೆಳಿಗ್ಗೆ ಸಂಜೆ ಕುಡಿಯಲು ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೆರೆ ತೂಬುಗಳನ್ನು ಬಿಗಿಪಡಿಸಿ ಅನಾವಶ್ಯಕ ಪೋಲು ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪುರಸಭಾ ಮುಖ್ಯಾಧಿಕಾರಿ ಭರತ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ 180 ಕೊಳವೆ ಬಾವಿಗಳಿದ್ದು, ಕುಡಿಯುವ ನೀರಿಗೆ ಸಮಸ್ಯೆ ಇಲ್ಲ.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಕಳೆದ 720 ಗಂಟೆಯಲ್ಲಿ 156 ಗಂಟೆ ಸ್ಥಗಿತದಿಂದ ಶೇ.22 ವಿದ್ಯುತ್ ನಿಲುಗಡೆಯಾಗಿದ್ದು, ವಿದ್ಯುತ್ ಕೊರತೆಯಿಂದ ನೀರಿನ ಸಮಸ್ಯೆ ತಲೆದೋರುವ ಸಾದ್ಯತೆ ಹೆಚ್ಚಿದೆ ಎಂದರು. ಮೆಸ್ಕಾಂ ಇಇ ಶ್ರೀಧರ್ ಮಾತನಾಡಿ, ಅಂಜನಾಪುರ-ಜೋಗಿಹಳ್ಳಿ ಎಕ್ಸ್ ಪ್ರೆಸ್ ಲೈನ್ ಕಾಮಗಾರಿಯಿಂದಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿ ತಾಲೂಕಿನ 28 ಗ್ರಾ.ಪಂ ರು.23.8 ಕೋಟಿ ವಿದ್ಯುತ್ ಬಾಕಿ ಇಲಾಖೆಗೆ ಹೊರೆಯಾಗಿದೆ ಎಂದು ತಿಳಿಸಿದರು.