ಕಂಪ್ಲಿ ಮತ್ತು ಗಂಗಾವತಿ ಸಂಪರ್ಕಿಸುವ ತುಂಗಭದ್ರಾ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಕಾರ್ಯ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆಯು ನದಿ ದಂಡೆಯ ಎರಡೂ ಬದಿಗಳಲ್ಲಿ ಮಣ್ಣಿನ ಸಾಮರ್ಥ್ಯವನ್ನು ಪರಿಶೀಲಿಸುತ್ತಿದ್ದು, ಇದರ ಆಧಾರದ ಮೇಲೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಿದೆ.

ಕೊಪ್ಪಳ: ಕಂಪ್ಲಿ ಪಟ್ಟಣದ ಹೊರವಲಯದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಂಪ್ಲಿ–ಗಂಗಾವತಿ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಣ್ಣು ಪರೀಕ್ಷೆ ಕಾರ್ಯ ಪ್ರಾರಂಭಗೊಂಡಿದೆ. ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಹಾಗೂ ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸುವ ಉದ್ದೇಶದಿಂದ ತುಂಗಭದ್ರಾ ನದಿ ದಡದಲ್ಲಿರುವ ಸ್ಮಶಾನದ ಸಮೀಪ ಮಣ್ಣು ಪರೀಕ್ಷೆ ನಡೆಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನದಿ ತೀರದ ಭೌಗೋಳಿಕ ಸ್ಥಿತಿ, ಮಣ್ಣಿನ ದಪ್ಪ, ಬಲ

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಯ ನೇತೃತ್ವದಲ್ಲಿ ನದಿ ದಂಡೆಯ ಎರಡೂ ಬದಿಗಳಲ್ಲಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ನದಿ ತೀರದ ಭೌಗೋಳಿಕ ಸ್ಥಿತಿ, ಮಣ್ಣಿನ ದಪ್ಪ, ಬಲ ಹಾಗೂ ನೀರಿನ ಒತ್ತಡ ತಾಳುವ ಸಾಮರ್ಥ್ಯ ಕುರಿತು ಸೂಕ್ಷ್ಮ ಅಧ್ಯಯನ ನಡೆಸಲಾಗುತ್ತಿದೆ.

ಎರಡೂ ಬದಿಗಳಲ್ಲಿ ಮಣ್ಣು ಪರೀಕ್ಷೆ ಕಾರ್ಯ

ಈ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಗಂಜಿ ಬಸವರೆಡ್ಡಿ ಮಾತನಾಡಿ. ನದಿ ದಂಡೆಯ ಎರಡೂ ಬದಿಗಳಲ್ಲಿ ಮಣ್ಣು ಪರೀಕ್ಷೆ ಕಾರ್ಯ ನಡೆಯುತ್ತಿದೆ. ಸೇತುವೆ ನಿರ್ಮಾಣಕ್ಕೆ ಸೂಕ್ತವಾದ ಸ್ಥಳ, ವಾಹನ ಸಂಚಾರಕ್ಕೆ ಅನುಕೂಲತೆ ಹಾಗೂ ಭವಿಷ್ಯದಲ್ಲಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುವುದು. ಈ ವರದಿಯ ಆಧಾರದ ಮೇಲೆ ಸರ್ಕಾರದ ಅನುಮೋದನೆ ಪಡೆದು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.