ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ನಿಶ್ಚಯವಾಗಿದ್ದ ಮದುವೆಗೂ ಮುನ್ನ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಪಾಲಕರು ಪ್ರೀತಿಗೆ ಒಪ್ಪದ ಕಾರಣ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ಘಟನೆಯಿಂದ ಮದುವೆ ರದ್ದಾಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮದುವೆಗೂ ಮುನ್ನವೇ ಯುವತಿ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆ ಮಂಟಪದಲ್ಲಿ ಸಡಗರದಿಂದ ನಡೆಯಬೇಕಿದ್ದ ಕಾರ್ಯಕ್ರಮ ಕ್ಷಣಾರ್ಧದಲ್ಲಿ ಗೊಂದಲ ಮತ್ತು ಗಲಾಟೆಗೆ ಕಾರಣವಾಯ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿರಸಿ ಪಟ್ಟಣದ ಮುಸ್ಲಿಂ ಗಲ್ಲಿಯ ನಿವಾಸಿಯಾದ ಸಿಫಾ (25) ಎಂಬ ಯುವತಿ, ತನ್ನಿಗೆ ನಿಶ್ಚಯಗೊಂಡ ಮದುವೆಗೆ ಕೆಲವೇ ಗಂಟೆಗಳ ಮುನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕುಟುಂಬದ ಮಾಹಿತಿಯ ಪ್ರಕಾರ, ಸಿಫಾ ಎಂಬಿಬಿಎಸ್ ಓದುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಸಂಬಂಧವನ್ನು ಒಪ್ಪದ ಪಾಲಕರು, ತುರ್ತಾಗಿ ಶಿರಸಿಯ ಅಬ್ರಾರ್ ಎಂಬಾತನೊಂದಿಗೆ ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು.

ಪ್ರಿಯಕರನೊಂದಿಗೆ ಪರಾರಿ

ಇಂದು ಬೆಳಿಗ್ಗೆ ಶಿರಸಿಯ ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮದುವೆಯ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ, ಬೆಳ್ಳಂಬೆಳಿಗ್ಗೆ ಸಿಫಾ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆ ಕುಟುಂಬದವರಿಗೆ ಆಘಾತ ತಂದಿದೆ.

ಕ್ವಿಂಟಲ್‌ಗಟ್ಟಲೆ ಮಟನ್ ಹಾಗೂ ಚಿಕನ್ ಅಡುಗೆ ಸಿದ್ದಪಡಿಸಿದ್ದ ಕುಟುಂಬ

ಮದುವೆ ಸಮಾರಂಭಕ್ಕಾಗಿ ಕ್ವಿಂಟಲ್‌ಗಟ್ಟಲೆ ಮಟನ್ ಹಾಗೂ ಚಿಕನ್ ಸಿದ್ಧಪಡಿಸಲಾಗಿದ್ದರೂ, ಕಾರ್ಯಕ್ರಮವೇ ರದ್ದುಪಟ್ಟ ಕಾರಣ ಅವೆಲ್ಲವೂ ವ್ಯರ್ಥವಾಯ್ತು. ಮಗಳ ನಾಪತ್ತೆಯ ಹಿನ್ನೆಲೆಯಲ್ಲಿ, ಸಿಫಾ ಅವರ ತಂದೆ ಝಹೀರ್ ಖಾನ್ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವತಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಒಟ್ಟಿನಲ್ಲಿ, ಪ್ರೀತಿ ಮತ್ತು ಕುಟುಂಬದ ನಿರ್ಧಾರಗಳ ನಡುವೆ ಉಂಟಾದ ಸಂಘರ್ಷ ಈ ಘಟನೆಯ ಮೂಲಕ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.