ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ 200 ಹೊಸ ಎಸಿ ಮಿನಿಬಸ್‌ಗಳನ್ನು ಪರಿಚಯಿಸುತ್ತಿದೆ. ಈ ಬಸ್‌ಗಳು ಕಂಡಕ್ಟರ್ ರಹಿತವಾಗಿರಲಿದ್ದು, ಪ್ರಯಾಣಿಕರು 'ಟ್ಯಾಪ್ ಟು ಪೇ' ವ್ಯವಸ್ಥೆ ಮೂಲಕ ಸ್ವಯಂಚಾಲಿತವಾಗಿ ಟಿಕೆಟ್ ಪಡೆಯಬೇಕಾಗುತ್ತದೆ. ಇದರಿಂದ ಚಿಲ್ಲರೆ ಸಮಸ್ಯೆ ಬಗೆಹರಿಯಲಿದ್ದು, ಮೆಟ್ರೋ ನಿಲ್ದಾಣಗಳಿಗೆ ಸುಲಭ ಸಂಪರ್ಕ ದೊರೆಯಲಿದೆ.

ಬೆಂಗಳೂರು: ಇನ್ನು ಮುಂದೆ ಬಿಎಂಟಿಸಿಯ ಕೆಲವು ಬಸ್​ಗಳಲ್ಲಿ ಟ್ಯಾಪ್‌ ಟು ಪೇ (Tap To Pay) ವ್ಯವಸ್ಥೆ ಜಾರಿಗೆ ಬರಲಿದ್ದು, ಈ ಬಸ್​ಗಳು ಕಂಡಕ್ಟರ್​ ರಹಿತವಾಗಲಿವೆ. ಇದರ ಅರ್ಥ ಪ್ರಯಾಣಿಕರೇ ಸ್ವಯಂ ಚಾಲಿತವಾಗಿ ಪಾವತಿ ಮಾಡಿ ಟಿಕೆಟ್‌ ಪಡೆಯಬೇಕಿದೆ. ಸದ್ಯ ನಮ್ಮ ಮೆಟ್ರೊದಲ್ಲಿ ಇರುವ ವ್ಯವಸ್ಥೆಯ ರೀತಿಯಲ್ಲಿಯೇ ಇದು ಇರಲಿದ್ದು, ಕಂಡಕ್ಟರ್​ ಬದಲಿಗೆ ನೀವೇ ಮುಂಚಿತವಾಗಿ ಸ್ವಯಂ ಚಾಲಿತವಾಗಿ ಪಾವತಿ ಮಾಡಿ ಟಿಕೆಟ್‌ ಪಡೆದುಕೊಳ್ಳುವ ಉದ್ದೇಶ ಇದರದ್ದು. ಸದ್ಯ ಈ ಸೌಲಭ್ಯವನ್ನು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸಲು ರಸ್ತೆಗೆ ಇಳಿಯಲು ಸಜ್ಜಾಗಿರುವ 200 ಹೊಸ ಎಸಿ ಮಿನಿಬಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಮಾಡಲಾಗುತ್ತಿದೆ. ಈ ಬಸ್​ಗಳಲ್ಲಿ ಪ್ರಯಾಣಿಸುವವರು ಕಂಡಕ್ಟರ್​ಗೆ ಹಣ ಕೊಟ್ಟು ಟಿಕೆಟ್​ ಪಡೆಯುವ ಬದಲು ಬಸ್‌ಗಳ ಪ್ರವೇಶ ದ್ವಾರದಲ್ಲಿ ಟ್ಯಾಪ್‌ ಟು ಪೇ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆಸಲಾಗಿದೆ.

ಎಷ್ಟೋ ಭಾಗಗಳಲ್ಲಿ ನಮ್ಮ ಮೆಟ್ರೊ ಲಭ್ಯವಿಲ್ಲ. ಪ್ರಯಾಣಿಕರು ಮೆಟ್ರೊಗೆ ಹೋಗಬೇಕು ಎಂದರೆ ಆಟೋಗಳಿಗೆ ದುಪ್ಪಟ್ಟು ಹಣ ನೀಡಿ ಹೋಗಬೇಕಾದ ಅನಿವಾರ್ಯತೆ ಇದೆ. ಮೆಟ್ರೊದಲ್ಲಿ ಸಮಯ ಉಳಿತಾಯವಾಗುತ್ತಿದ್ದರೂ, ಮೆಟ್ರೋ ನಿಲ್ದಾಣದವರೆಗೆ ಬಸ್​ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪರ್ಯಾಯ ಮಾರ್ಗ ಹಿಡಿಯಬೇಕಿತ್ತು. ಇದೇ ಕಾರಣಕ್ಕೆ ಬಿಎಂಟಿಸಿ ಮೆಟ್ರೋ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸಲು ರಸ್ತೆಗೆ ಇಳಿಯಲು ಸಜ್ಜಾಗಿರುವ 200 ಹೊಸ ಎಸಿ ಮಿನಿಬಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರುತ್ತಿದೆ. ಈ ಮೂಲಕ ಇಂಥ ಬಸ್​ ಹತ್ತುವ ಪ್ರಯಾಣಿಕರು ಸಂಪರ್ಕರಹಿತ ಕಾರ್ಡ್‌ಗಳು, ಮೊಬೈಲ್‌, ಕ್ಯೂ ಆರ್‌ ಕೋಡ್‌ಗಳ ಮೂಲಕವೂ ಪಾವತಿ ಮಾಡಿ ಟಿಕೆಟ್​ ಪಡೆಯಬಹುದಾಗಿದೆ. ಈ ಮಿನಿ ಬಸ್‌ಗಳು ಮೆಟ್ರೋ ನಿಲ್ದಾಣಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ನೀಡಲಿದ್ದು, 5 ರೂ. ಅಥವಾ 10 ರೂ. ದರ ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ. ಇದರಿಂದಾಗಿ ಮಿನಿ ಬಸ್‌ಗಳಿಗೆ ಕಂಡಕ್ಟರ್​ ನೇಮಕಾತಿ ಮಾಡಿಕೊಳ್ಳುವ ಪ್ರಮೇಯ ಸರ್ಕಾರಕ್ಕೆ ಇರುವುದಿಲ್ಲ. ಇದರಿಂದ ಸಂಬಳದಲ್ಲಿ ಉಳಿತಾಯವಾಗಲಿದೆ, ಜೊತೆಗೆ ಚಿಲ್ಲರೆಗಾಗಿ ಗಲಾಟೆಯೂ ಇರಲ್ಲ, ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಈ ವ್ಯವಸ್ಥೆ ಶುರುವಾಗಿದೆ.

ಅಧಿಕಾರಿಗಳು ಹೇಳಿದ್ದೇನು?

ನಗರಾಭಿವೃದ್ಧಿ ಭೂ ಸಾರಿಗೆ ನಿರ್ದೇಶನಾಲಯ ಜಿಐಎಸ್‌ ಅಧರಿತ ಅಧ್ಯಯನ ನಡೆಸಿ, ಸಾರ್ವಜನಿಕ ಸಾರಿಗೆ ಅಗತ್ಯವಿರುವ ಪ್ರಮುಖ ಮೆಟ್ರೋ ನಿಲ್ದಾಣಗಳಿಗೆ ಫೀಡರ್‌ ಮಾರ್ಗಗಳನ್ನು ಸಿದ್ಧಪಡಿಸುತ್ತಿದೆ. ವಸತಿ ಪ್ರದೇಶಗಳು, ಕಿರಿದಾದ ರಸ್ತೆಗಳು, ದೊಡ್ಡ ಬಸ್‌ಗಳು ಕಾರ್ಯ ನಿರ್ವಹಿಸಲಾಗದ ರಸ್ತೆಗಳಲ್ಲಿ ಮಿನಿ ಬಸ್‌ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಲಾಗಿದ್ದು, ಮೆಟ್ರೋ ನಿಲ್ದಾಣಗಳಿಗೆ ಕೊನೆಯ ಮೈಲಿಯ ಸಂಪರ್ಕವನ್ನು ಇದು ಬಲಪಡಿಸಲಿದೆ. ಈ ಕುರಿತು ಇದಾಗಲೇ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸರ್ಕಾರ 7 ಮೀಟರ್‌ ಉದ್ದದ ಮಿನಿ ಬಸ್‌ ಸೇರಿದಂತೆ 200 ಬಸ್‌ಗಳಿಗೆ ಅನುಮೋದನೆ ನೀಡಿದೆ. ಈ ಬಸ್‌ಗಳು ನಿರ್ವಾಹಕ ರಹಿತವಾಗಿರಬಹುದು. ಹೀಗಾಗಿ, ಟ್ಯಾಪ್‌ ಟು ಪೇ ಸೌಲಭ್ಯ, ಫ್ಲಾಟ್‌ ದರಗಳ ಅಳವಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಏನಿದರ ಸೌಲಭ್ಯ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಇದರಿಂದಾಗಿ, ಮೆಟ್ರೋ ಮಾದರಿಯಲ್ಲಿ ಸ್ವಯಂಚಾಲಿತ ಪಾವತಿಗೆ ಅವಕಾಶ ನೀಡಲಾಗುತ್ತದೆ, ಜೊತೆಗೆ, ಬಸ್‌ ಪ್ರಯಾಣದ ವೇಳೆ ಆಗುತ್ತಿದ್ದ ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ದೊರಕಲಿದೆ. ಇದಾಗಲೇ ಡಿಜಿಟಲ್​ ಮೂಲಕವೂ ಹಲವರು ಟಿಕೆಟ್​ ಹಣವನ್ನು ಕೊಡುತ್ತಿದ್ದಾರೆ. ಇದರ ಹೊರತಾಗಿಯೂ ಕಂಡಕ್ಟರ್​ ಇಲ್ಲದೇ ಡಿಜಿಟಲ್‌ ಮೂಲಕ ಪಾವತಿಗೆ ಅವಕಾಶ ಸಿಗಲಿದೆ, ಜೊತೆಗೆ ಮೆಟ್ರೋ ನಿಲ್ದಾಣಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆ ಇರಲಿದೆ.