ಮೋಹನ ಹಂಡ್ರಂಗಿ

ಬೆಂಗಳೂರು(ಅ.19):  ಪ್ರಯಾಣಿಕರ ಕೊರತೆ ನಡುವೆಯೂ ಬಸ್‌ ಸೇವೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ನಿತ್ಯ ಸುಮಾರು ಎರಡು ಕೋಟಿ ರು.ಗೂ ಅಧಿಕ ಆರ್ಥಿಕ ಹೊರೆ ಹೊರುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಐದು ವರ್ಷಗಳಿಂದ ನಷ್ಟದ ಹಳಿಯಲ್ಲಿ ತೆವಳುತ್ತಿರುವ ಬಿಎಂಟಿಸಿಗೆ ಕೊರೋನಾ ದೊಡ್ಡ ಹೊಡೆತ ನೀಡಿದೆ. ನಿಗಮದ ಪ್ರಮುಖ ಆದಾಯ ಮೂಲವಾದ ಸಾರಿಗೆ ಆದಾಯವು ಪ್ರಯಾಣಿಕರ ಕೊರತೆಯಿಂದ ನೆಲಕಚ್ಚಿದೆ. ಕೊರೋನಾ ಪೂರ್ವದಲ್ಲಿ ನಿಗಮದ ಆರ್ಥಿಕ ಸ್ಥಿತಿ ಬಸ್‌ ಕಾರ್ಯಾಚರಣೆ, ಸಿಬ್ಬಂದಿ ವೇತನವನ್ನು ನಿಭಾಯಿಸುವ ಮಟ್ಟಕ್ಕೆ ಇತ್ತು. ಕಳೆದ ಆರು ತಿಂಗಳಿಂದ ಸಿಬ್ಬಂದಿ ವೇತನ ಭರಿಸಲು ಸಾಧ್ಯವಾಗದೆ ನೆರವಿಗೆ ಸರ್ಕಾರದತ್ತ ನೋಡುವ ಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯ, ಹವಾನಿಯಂತ್ರಿತ ಸೇರಿದಂತೆ ಒಟ್ಟು 6,500 ಬಸ್‌ ಹೊಂದಿರುವ ನಿಗಮವು ಕೊರೋನಾ ಪೂರ್ವದಲ್ಲಿ ನಿತ್ಯ 6,100 ಬಸ್‌ ಕಾರ್ಯಾಚರಣೆ ಮಾಡುತ್ತಿತ್ತು. ಈ ವೇಳೆ ಪ್ರತಿ ಕಿ.ಮೀ.ಗೆ ಕಾರ್ಯಾಚರಣೆ ವೆಚ್ಚ .60.65 ಹಾಗೂ ಪ್ರತಿ ಕಿ.ಮೀ.ಗೆ ಸಾರಿಗೆ ಆದಾಯ .45.48 ಬರುತ್ತಿತ್ತು. ಅಂದರೆ, ಸಾರಿಗೆ ಆದಾಯಕ್ಕಿಂತ ಕಾರ್ಯಾಚರಣೆ ವೆಚ್ಚವೇ ಪ್ರತಿ ಕಿ.ಮೀ.ಗೆ .15.17 ಅಧಿಕವಾಗಿತ್ತು.

‘ಬಿಎಂಟಿಸಿ ಕ್ರಮದಿಂದ ಸಿಬ್ಬಂದಿಗೆ ಕೊರೋನಾ ಸೋಂಕು’

ಪ್ರತಿ ಕಿ.ಮೀ.ಗೆ 84.11 ವೆಚ್ಚ:

ಈಗ ಕೊರೋನಾ ನಡುವೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿತ್ಯ 4,200 ಬಸ್‌ ಕಾರ್ಯಾಚರಿಸುತ್ತಿದೆ. ಪ್ರಸ್ತುತ ಪ್ರತಿ ಕಿ.ಮೀ.ಗೆ ಕಾರ್ಯಾಚರಣೆ ವೆಚ್ಚ .109.78 ಇದ್ದರೆ, ಪ್ರತಿ ಕಿ.ಮೀ.ಗೆ ಸಾರಿಗೆ ಆದಾಯ ಕೇವಲ .25.67 ಬರುತ್ತಿದೆ. ಅಂದರೆ, ಪ್ರತಿ ಕಿ.ಮೀ.ಗೆ ಸರಿ ಸುಮಾರು .84.11 ನಷ್ಟಅನುಭವಿಸುತ್ತಿದೆ.

13.98 ಕೋಟಿ ಕಿ.ಮೀ. ಸಂಚಾರ ರದ್ದು

ಕಳೆದ ವರ್ಷ ನಿತ್ಯ 13 ಲಕ್ಷ ಕಿ.ಮೀ. ಸಂಚಾರದಂತೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ ವರೆಗೆ 20.88 ಕೋಟಿ ಕಿ.ಮೀ. ಬಸ್‌ ಸಂಚಾರ ಮಾಡಿದ್ದ ಬಿಎಂಟಿಸಿ ಬಸ್‌ಗಳು, ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ ನಿತ್ಯ 8.56 ಲಕ್ಷ ಕಿ.ಮೀ. ಲೆಕ್ಕದಲ್ಲಿ ಕೇವಲ 6.90 ಕೋಟಿ ಕಿ.ಮೀ. ಸಂಚರಿಸಿವೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 13.98 ಕೋಟಿ ಕಿ.ಮೀ. ಸಂಚಾರ ರದ್ದಾಗಿದೆ.

ಟ್ರಿಪ್‌ ಕಡಿತ:

ಲಾಕ್‌ಡೌನ್‌ ಸಡಿಲಿಕೆ ಬಳಿಕವೂ ಕೊರೋನಾ ಆತಂಕದಿಂದ ಜನರು ಬಸ್‌ ಏರಲು ಹಿಂದೇಟು ಹಾಕುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಷ್ಟತಗ್ಗಿಸಿಕೊಳ್ಳಲು ಪ್ರಯಾಣಿಕರ ಕೊರತೆ ಇರುವ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಹಾಗೂ ಟ್ರಿಪ್‌ಗಳನ್ನು ಕಡಿತಗೊಳಿಸಲಾಗಿತ್ತು. ಪ್ರಯಾಣಿಕರೇ ಇಲ್ಲದ ಮಾರ್ಗಗಳಲ್ಲಿ ಬಸ್‌ ಸಂಚಾರವನ್ನೇ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನಿಧಾನಗತಿ ಚೇತರಿಕೆ:

ಕೊರೋನಾ ಪೂರ್ವದಲ್ಲಿ ನಿತ್ಯ 35 ಲಕ್ಷ ಪ್ರಯಾಣಿಕರು ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಬಸ್‌ ಸೇವೆ ಪುನರಾರಂಭದಲ್ಲಿ ಪ್ರಯಾಣಿಕರ ಸಂಖ್ಯೆ 1 ಲಕ್ಷಕ್ಕೆ ಕುಸಿದಿತ್ತು. ಇದೀಗ ದಿನಗಳೆದಂತೆ ಪ್ರಯಾಣಿಕರ ಸಂಖ್ಯೆ ನಿಧಾನಕ್ಕೆ ಏರಿಕೆ ಆಗುತ್ತಿರುವುದರಿಂದ 1 ಲಕ್ಷ ದಿಂದ 14 ಲಕ್ಷ ತಲುಪಿದ್ದು, ಚೇತರಿಕೆ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ನಿಗಮವು ಹಿಂದಿನ ಸ್ಥಿತಿಗೆ ಮರುಳುವ ವಿಶ್ವಾಸವಿದೆ ಎಂದು ತಿಳಿಸಿದರು.

ಬಸ್‌ಗಳಿಗೆ ನಿತ್ಯ 3.42 ಲಕ್ಷ ಲೀಟರ್‌ ಡೀಸೆಲ್‌ ಬೇಕು

ಬಿಎಂಟಿಸಿ ಬಸ್‌ ಕಾರ್ಯಾಚರಣೆಗೆ ಪ್ರತಿ ನಿತ್ಯ 3.42 ಲಕ್ಷ ಲೀಟರ್‌ ಡೀಸೆಲ್‌ ಅಗತ್ಯವಿದೆ. ಅಂದರೆ, ಮಾಸಿಕ 1.26 ಕೋಟಿ ಲೀಟರ್‌ ಡೀಸೆಲ್‌ ಬೇಕಾಗುತ್ತದೆ. ಬಿಎಂಟಿಸಿಯು ಸರ್ಕಾರಿ ಸ್ವಾಮ್ಯದ ತೈಲ-ಮಾರಾಟ ಕಂಪನಿಯಲ್ಲಿ ಸಗಟು ದರದಲ್ಲಿ ಡೀಸೆಲ್‌ ಖರೀದಿಸುತ್ತಿದೆ. ಬಸ್‌ ಕಾರ್ಯಾಚರಣೆ ವೆಚ್ಚದಲ್ಲಿ ಶೇ.50ಕ್ಕೂ ಅಧಿಕ ಹಣ ಡೀಸೆಲ್‌ ಖರೀದಿಗೆ ವ್ಯಯವಾಗುತ್ತಿದೆ. ಡೀಸೆಲ್‌ ದರ ಪ್ರತಿ ಬಾರಿ ಏರಿಕೆಯಾದಗಲೂ ನಿಗಮದ ಆರ್ಥಿಕ ಹೊರೆ ಹೆಚ್ಚಾಗುತ್ತದೆ.