‘ಬಿಎಂಟಿಸಿ ಕ್ರಮದಿಂದ ಸಿಬ್ಬಂದಿಗೆ ಕೊರೋನಾ ಸೋಂಕು’
ವೆಚ್ಚ ಕಡಿತ ನೆಪದಲ್ಲಿ ಪಾಳಿ ವ್ಯವಸ್ಥೆ ಸ್ಥಗಿತಗೊಳಿಸಿ ನೌಕರರಿಂದ 12 ತಾಸು ದುಡಿಸಿಕೊಳ್ಳಲಾಗುತ್ತಿದೆ| ಬಸ್, ಟ್ರಿಪ್‌ಗಳ ಸಂಖ್ಯೆಯನ್ನೂ ಕಡಿತಗೊಳಿಸಿ, ಸೀಮಿತ ಸಿಬ್ಬಂದಿಗೆ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ| ನಿಗಮದ ಆಡಳಿತ ಮಂಡಳಿಯು ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು|
ಬೆಂಗಳೂರು(ಅ.18): ಬಿಎಂಟಿಸಿ ಕೈಗೊಂಡಿರುವ ಅವೈಜ್ಞಾನಿಕ ಕ್ರಮಗಳಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಆರೋಪಿಸಿದೆ.
ವೆಚ್ಚ ಕಡಿತ ನೆಪದಲ್ಲಿ ಪಾಳಿ ವ್ಯವಸ್ಥೆ ಸ್ಥಗಿತಗೊಳಿಸಿ ನೌಕರರಿಂದ 12 ತಾಸು ದುಡಿಸಿಕೊಳ್ಳಲಾಗುತ್ತಿದೆ. ಬಸ್, ಟ್ರಿಪ್‌ಗಳ ಸಂಖ್ಯೆಯನ್ನೂ ಕಡಿತಗೊಳಿಸಿ, ಸೀಮಿತ ಸಿಬ್ಬಂದಿಗೆ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಪ್ರಸ್ತುತ ನಿತ್ಯ 15 ಲಕ್ಷ ಪ್ರಯಾಣಿಕರು ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪೀಕ್ ಅವರ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದರೂ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಪ್ರಯಾಣಿಕರು ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೋರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದ್ದಾರೆ.
ಸಕ್ರಿಯ ಕೊರೋನಾ ಕೇಸ್ ಇದೀಗ 8 ಲಕ್ಷಕ್ಕೂ ಕಡಿಮೆ, ಗಮನಾರ್ಹವಾಗಿ ಇಳಿಕೆ!
ಈ ಹಿನ್ನೆಲೆಯಲ್ಲಿ ನಿಗಮದ ಆಡಳಿತ ಮಂಡಳಿಯು ಸೋಂಕು ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ನೌಕರರ ಕರ್ತವ್ಯದ ಅವಧಿ ಕಡಿತಗೊಳಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ.