Asianet Suvarna News Asianet Suvarna News

ಬಿಬಿಎಂಪಿ ಪಾಲಿಕೆ ಶಾಲೆ-ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆಗೆ, ಅಂತಿಮ ಹಂತದ ಸಿದ್ಧತೆ

ಪಾಲಿಕೆಯ ಶಾಲಾ-ಕಾಲೇಜುಗಳನ್ನು ರಾಜ್ಯ ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವುದಕ್ಕೆ ಬಿಬಿಎಂಪಿಯು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ.

Education Department to take over BBMP Corporation Schools soon gow
Author
First Published May 1, 2024, 6:39 PM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಮೇ.1): ಪಾಲಿಕೆಯ ಶಾಲಾ-ಕಾಲೇಜುಗಳನ್ನು ರಾಜ್ಯ ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವುದಕ್ಕೆ ಬಿಬಿಎಂಪಿಯು ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ವೇಳೆಗೆ ಶಾಲಾ -ಕಾಲೇಜು ಹಸ್ತಾಂತರಗೊಳ್ಳುವ ಸಾಧ್ಯತೆ ಇದೆ.

ಹಲವಾರು ವರ್ಷದಿಂದ ಬಿಬಿಎಂಪಿಯ ಶಾಲಾ ಕಾಲೇಜುಗಳನ್ನು ಶಿಕ್ಷಣ ಇಲಾಖೆಯ ಸುಪರ್ದಿಗೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ಹೊರ ಗುತ್ತಿಗೆ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ಉಂಟಾದ ಗೊಂದಲದ ಪರಿಣಾಮ ಇದೀಗ ಬಿಬಿಎಂಪಿಯ ಎಲ್ಲಾ ಶಾಲಾ- ಕಾಲೇಜುಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವೀಸಾ ಇಲ್ಲದೆ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಈ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಬಿಬಿಎಂಪಿ ಶಿಕ್ಷಣ ವಿಭಾಗ ಹಾಗೂ ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇದೀಗ ಅಂತಿಮವಾಗಿ ಜೂನ್‌ನಿಂದ ಆರಂಭಗೊಳ್ಳುವ 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಬಿಬಿಎಂಪಿಯ ಶಾಲೆ-ಕಾಲೇಜುಗಳನ್ನು ಹಸ್ತಾಂತರ ಮಾಡುವುದಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿಲ್ಲ ಎಂದು ಮೂಲಗಳು ತಿಳಿಸಿವೆ.

ಒಪ್ಪಂದ ಬಾಕಿ: ಬಿಬಿಎಂಪಿ ಶಾಲಾ ಕಾಲೇಜು ಕಟ್ಟಡ, ಮೈದಾನ ಸೇರಿದಂತೆ ಎಲ್ಲವೂ ಬಿಬಿಎಂಪಿಯ ಸ್ವತ್ತಾಗಿ ಇರಲಿದೆ. ಪಾಲಿಕೆ ಶಾಲಾ ಕಾಲೇಜು ಹಸ್ತಾಂತರಗೊಂಡ ಬಳಿಕ ರಾಜ್ಯ ಶಿಕ್ಷಣ ಇಲಾಖೆ ಹಾಗೂ ಬಿಬಿಎಂಪಿಯು ನಿರ್ವಹಿಸಬೇಕಾದ ಜವಾಬ್ದಾರಿ ಪಟ್ಟಿ ಸಹ ಸಿದ್ಧಪಡಿಸಿಕೊಳ್ಳಲಾಗಿದೆ. ಈ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಬಿಬಿಎಂಪಿ ನಡುವೆ ಒಪ್ಪಂದ ಮಾಡಿಕೊಂಡ ಬಳಿಕ ಹಸ್ತಾಂತರ ಕಾರ್ಯ ಪೂರ್ಣಗೊಳ್ಳಲಿದೆ.

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ನಿರ್ವಹಣೆ ಹೊಣೆ ಬಿಬಿಎಂಪಿಗೆ: ಶಿಕ್ಷಣ ಇಲಾಖೆಯು ಕೇವಲ ಭೋದನೆಗೆ ಬೇಕಾದ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನಿಯೋಜನೆ ಮಾಡಲಿದೆ. ಉಳಿದಂತೆ ಪಾಲಿಕೆ ಶಾಲಾ-ಕಾಲೇಜುಗಳ ನಿರ್ವಹಣೆ ವೆಚ್ಚವನ್ನು ಬಿಬಿಎಂಪಿಯೇ ಭರಿಸಬೇಕು. ಕಟ್ಟಡ, ಮೈದಾನ, ದುರಸ್ತಿ, ಸ್ವಚ್ಛತೆ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಿಬಿಎಂಪಿಯೇ ಹೊರ ಗುತ್ತಿಗೆ ಮೂಲಕ ನಿಯೋಜನೆ ಮಾಡಬೇಕು. ಉಳಿದಂತೆ ಪ್ರತಿವರ್ಷ ಬಿಬಿಎಂಪಿಯ ಶಾಲಾ ಮಕ್ಕಳಿಗೆ ನೋಟ್‌ ಬುಕ್‌, ಶಾಲಾ ಬ್ಯಾಗ್‌, ಸ್ವೆಟರ್ ಹಾಗೂ ಮಧ್ಯಾಹ್ನ ಬಿಸಿಯೂಟವನ್ನು ಬಿಬಿಎಂಪಿಯೇ ಒದಗಿಸಲಿದೆ.

ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಬಿಬಿಎಂಪಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಗದು ಪುರಸ್ಕಾರ ನೀಡಲಾಗುತ್ತದೆ. ಆ ವೆಚ್ಚವನ್ನು ಪಾಲಿಕೆ ಭರಿಸಲಿದೆ. ಇನ್ನು ಶಾಲಾ ವಾರ್ಷಿಕೋತ್ಸವ, ಕ್ರೀಡಾ ಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಕರ ದಿನಾಚರಣೆಯ ವೆಚ್ಚವನ್ನು ಪಾಲಿಕೆ ಭರಿಸಬೇಕಾಗಲಿದೆ.

ಶಿಕ್ಷಣ ಇಲಾಖೆ ಜವಾಬ್ದಾರಿಗಳು: ಬಿಬಿಎಂಪಿಯ ಕಾಯಂ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನಿವೃತ್ತಿ ಹೊಂದುವವರೆಗೆ ಮುಂದುವರೆಸುವುದು. ಬಳಿಕ ಶಿಕ್ಷಣ ಇಲಾಖೆಯಿಂದ ನೇಮಕ ಮಾಡಿಕೊಳ್ಳುವುದು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಮರು ಹಂಚಿಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಶಾಲೆಯಲ್ಲಿ ನೀಡುವ ಎಲ್ಲಾ ಸೌಲಭ್ಯ ನೀಡುವುದು ಸೇರಿದಂತೆ ಮೊದಲಾದ ಜವಾಬ್ದಾರಿ ವಹಿಸಲಾಗಿದೆ.

ನರ್ಸರಿ ಬಿಬಿಎಂಪಿಯೇ ನಿರ್ವಹಣೆ: ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಮಾತ್ರ ಇದೀಗ ಬಿಬಿಎಂಪಿಯು ರಾಜ್ಯ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡುತ್ತಿದೆ. ಇನ್ನುಳಿದ 91 ನರ್ಸರಿ ಶಾಲೆ, 4 ಪದವಿ ಕಾಲೇಜು ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಬಿಬಿಎಂಪಿಯೇ ನಿರ್ವಹಣೆ ಮಾಡಬೇಕಿದೆ.

ಹಸ್ತಾಂತಗೊಳ್ಳುವ ಶಾಲಾ ಕಾಲೇಜು ವಿವರ

ಪ್ರಾಥಮಿಕ ಶಾಲೆ- 16

ಪ್ರೌಢ ಶಾಲೆ-33

ಪದವಿ ಪೂರ್ವ ಕಾಲೇಜು-19

Latest Videos
Follow Us:
Download App:
  • android
  • ios